ಪಂಜಾಬ್, ಹರ್ಯಾಣ ರೈತರ ಬೆಂಬಲ ಬೆಲೆ ಬಾಕಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಇ-ಬ್ಯಾಂಕಿಂಗ್ ಮೂಲಕವೇ ಬೆಂಬಲ ಬೆಲೆ ವಿತರಿಸಲು ಸರ್ಕಾರ ನಿರ್ಧರಿಸಿದೆ. ದಲ್ಲಾಳಿಗಳ ಕಾರುಬಾರನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೊಳಿಸುತ್ತಿದೆ.

  • TV9 Web Team
  • Published On - 21:29 PM, 19 Feb 2021
ಪಂಜಾಬ್, ಹರ್ಯಾಣ ರೈತರ ಬೆಂಬಲ ಬೆಲೆ ಬಾಕಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ

ದೆಹಲಿ: ದೇಶದಲ್ಲಿ ರೈತರ ಪ್ರತಿಭಟನೆ 100ನೇ ದಿನದತ್ತ ದಾಪುಗಾಲಿಡುತ್ತಿದೆ. ನೀವು ಎಷ್ಟು ದಿನ ಬೇಕಾದರೂ ಪ್ರತಿಭಟಿಸಿ; ನಾವು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರವೂ ದೃಢ ನಿಲುವು ತಳೆದಿದೆ. ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ಮೆರವಣಿಗೆ, ಕೆಂಪುಕೋಟೆ ಗಲಭೆಯ ನಂತರ ಸರ್ಕಾರದ ಪಟ್ಟು ಇನ್ನಷ್ಟು ಬಿಗಿಯಾಗಿದೆ. ಒಂದೊಂದೇ ಯೋಜನೆಗಳನ್ನು ಜಾರಿಗೊಳಿಸಿ, ತಾನು ರೈತಪರ ಎಂದು ಸಾಬೀತುಪಡಿಸಲು ಹೊರಟಿದೆ ಸರ್ಕಾರ. ಇದೀಗ, ಈ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡಬೇಕಿದ್ದ ಆಹಾರ ವಸ್ತುಗಳ ಮೇಲಿನ ₹ 3 ಲಕ್ಷ ಕೋಟಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಪಂಜಾಬ್, ಹರ್ಯಾಣ ಸೇರಿ ಕೆಲ ರಾಜ್ಯಗಳು ರೈತರಿಗೆ ಒದಗಿಸುವ ಬೆಂಬಲ ಬೆಲೆಯನ್ನು ನೇರವಾಗಿ ರೈತರ ಖಾತೆಗಳಿಗೆ ಇ ಬ್ಯಾಂಕಿಂಗ್ ಮೂಲಕವೇ ವಿತರಿಸಬೇಕು ಎಂದು ಹೇಳಿದೆ ಕೇಂದ್ರ ಆಹಾರ ಇಲಾಖೆ.

ಇ-ಬ್ಯಾಂಕಿಂಗ್ ಮೂಲಕವೇ ಬೆಂಬಲ ಬೆಲೆ ವಿತರಿಸಲು ಸರ್ಕಾರ ನಿರ್ಧರಿಸಿದೆ. ದಲ್ಲಾಳಿಗಳ ಕಾರುಬಾರನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೊಳಿಸುತ್ತಿದೆ. ಅಲ್ಲದೇ, ಎಪಿಎಂಸಿಗಳಲ್ಲಿ ಖರೀದಿಸಿದ ಕೃಷಿ ಉತ್ಪನ್ನಕ್ಕೆ ತ್ವರಿತವಾಗಿ ಬೆಂಬಲ ಬೆಲೆ ಲಭಿಸಬೇಕು. ರೈತರು ತಮ್ಮ ಬೆಳೆಗೆ ಸರ್ಕಾರ ಒದಗಿಸುವ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೇ ಕಾಯಬಾರದು ಎಂದು ಸರ್ಕಾರ ಈ ನಿಯಮವನ್ನು ಜಾರಿಗೊಳಿಸಹೊರಟಿದೆ. ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ವಾದಿಸಿದ್ದ ಸರ್ಕಾರ, ಇದೀಗ ಹೋರಾಟ ಪ್ರಬಲವಾಗಿರುವ ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ ಪದ್ಧತಿ ತರಹೊರಟಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಇನ್ನಿತರ ಯೋಜನೆಗಳು ದೆಶದ ರೈತರಿಂದ ಧವಸ ಧಾನ್ಯಗಳನ್ನು ಖರೀದಿಸಿ ಕಡಿಮೆ ದರಕ್ಕೆ ಪಡಿತರ ವ್ಯವಸ್ಥೆಯಡಿ ಬಡರಿಗೆ ವಿತರಿಸುತ್ತದೆ. ದೇಶದ 80 ಕೋಟಿ ನಾಗರಿಕರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (National Food Security Act) ಒಂದು ಕೆಜಿ ಅಕ್ಕಿ ಮತ್ತು ಗೋಧಿಯನ್ನು ಕೇವಲ ₹ 2ರಿಂದ 3ಕ್ಕೆ ವಿತರಿಸುತ್ತದೆ.

ಈಗಾಗಲೇ ಧವಸ ಧಾನ್ಯಗಳ ಖರೀದಿಗೆ ಬಜೆಟ್​ನಲ್ಲಿ ಒದಗಿಸಿದ ಸಹಾಯಧನದ ಮೊತ್ತ ₹ 1.25 ಲಕ್ಷ ಕೋಟಿ. ಇದೀಗ ಹೆಚ್ಚುವರಿಯಾಗಿ ₹ 2.97 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಪಂಜಾಬ್ ಮತ್ತು ಹರ್ಯಾಣಗಳಿಗೇ ಸಿಂಹಪಾಲು ದೊರೆಯಲಿದೆ. ಮುಂದಿನ ಆರ್ಥಿಕ ವರ್ಷದ ಸಹಾಯಧನದ ಮೊತ್ತವನ್ನು ₹ 2,42,836 ಕ್ಕೆ ನಿಗದಿಪಡಿಸಲಾಗಿದೆ. ಕೊರೊನಾ ಲಾಕ್​ಡೌನ್​ನಲ್ಲಿ ಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರು ಸೇರಿ ಹಲವು ಸಮುದಾಯಗಳಿಗೆ ಸರ್ಕಾರದ ಸಬ್ಸಿಡಿ ಆಹಾರ ಆಶಾದಾಯಕವಾಗಿತ್ತು. ಎಷ್ಟೋ ಕುಟುಂಬಗಳು ಈ ಯೋಜನೆಯನ್ನೇ ನಂಬಿ ಬದುಕು ನಡೆಸಿದ್ದವು.

ಹಾಗಾದರೆ, ಎಲೆಕ್ಟ್ರಾನಿಕ್ ಪಾವತಿ ಪದ್ಧತಿಯನ್ನು ಕಡ್ಡಾಯಗೊಳಿಸುವ ಮೂಲಕ ಪಂಜಾಬ್​ನ ‘ಅರ್ಥಿಯಾ’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಎಪಿಎಂಸಿ ದಲ್ಲಾಳಿಗಳನ್ನು ಹಿನ್ನೆಲೆಗೆ ದೂಡಲು ಕೇಂದ್ರ ಸರ್ಕಾರ ಯೋಚಿಸುತ್ತಿದೆಯೇ ಎಂಬ ಅನುಮಾನ ಮೂಡುವುದು ಸಹಜ. ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡುತ್ತದೆ.

‘ಯಾವುದೇ ರೀತಿಯ ಸಾಂಪ್ರದಾಯಿಕ ದಲ್ಲಾಳಿಗಳ ಹೊಟ್ಟೆಯ ಮೇಲೆ ಹೊಡೆಯುವ ಉದ್ದೇಶವಿಲ್ಲ, ಕೇವಲ ರೈತರಿಗೆ ಅನುಕೂಲ ಮಾಡುವ ಗುರಿಯೊಂದಿಗೆ ಈ ಸುಧಾರಣೆಯನ್ನು ಜಾರಿಗೊಳಿಸುತ್ತಿದ್ದೇವೆ ಎನ್ನುತ್ತದೆ ಸರ್ಕಾರ. ಎಲೆಕ್ಟ್ರಾನಿಕ್ ಪದ್ಧತಿ ಮೂಲಕ ಪಾವತಿಯಿಂದ ರೈತರಿಗೆ, ಎಪಿಎಂಸಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ನೇರ ಮತ್ತು ಸುಲಭವಾಗಿ ಹಣ ಪಾವತಿ ಮಾಡಬಹುದು. ಕೇವಲ ಇದೊಂದೇ ಕಾರಣಕ್ಕೆ ಎಲೆಕ್ಟ್ರಾನಿಕ್ ಪಾವತಿ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

ಆನ್​ಲೈನ್ ಪಾವತಿ ಎಪಿಎಂಸಿಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟುತ್ತದೆ. 2015-16ರಿಂದಲೇ ಪಂಜಾಬ್-ಹರ್ಯಾಣಗಳಲ್ಲಿ ಇ-ಪಾವತಿಯನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದಾಗಿ ಹೇಳಿಕೊಳ್ಳುತ್ತದೆ ಆಹಾರ ಇಲಾಖೆ. ಆದರೆ, ಈ ಎರಡೂ ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಜಾರಿಗೊಳಿಸಲು ಅಂದಿನಿಂದಲೂ ಸಮಯಾವಕಾಶ ಕೇಳುತ್ತಿವೆ. ಅಲ್ಲದೇ ತಮ್ಮನ್ನು ಇ-ಪಾವತಿ ವ್ಯವಸ್ಥೆಯಿಂದ ಹೊರಗಿಡುವಂತೆಯೂ ಕೇಳಿಕೊಂಡಿವೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.

ಇವೆರಡು ರಾಜ್ಯಗಳಲ್ಲಿ ಇಷ್ಟು ವರ್ಷಗಳಾದರೂ ಇ-ಪಾವತಿ ಜಾರಿಯಾಗದ ಕಾರಣ ಈ ಆರ್ಥಿಕ ವರ್ಷದಿಂದ ಎಲೆಕ್ಟ್ರಾನಿಕ್ ಪದ್ಧತಿ ಮೂಲಕವೇ ಸಬ್ಸಿಡಿ ಹಣ ವಿತರಿಸುವಂತೆ ಸರ್ಕಾರ ಕಡ್ಡಾಯ ನಿಯಮ ಜಾರಿಗೊಳಿಸಹೊರಟಿದೆ. ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಕೆಲಮಟ್ಟಿಗೆ ಇ-ಪಾವತಿ ವ್ಯವಸ್ಥೆ ಜಾರಿಗೆ ಬಂದಿದ್ದರೂ ಸಂಪೂರ್ಣವಾಗಿ ಮುಂದಿನ ದಿನಗಳಲ್ಲಿ ಜಾರಿಯಾಗಬೇಕಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಅರ್ಥಿಯಾ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಎಪಿಎಂಸಿ ದಲ್ಲಾಳಿಗಳ ಮೂಲಕವೇ ಸಬ್ಸಿಡಿ ರೈತರಿಗೆ ವಿತರಣೆಯಾಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಪ್ರಕಾರ ಬೆಂಬಲ ಬೆಲೆಯನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಬೇಕು. ಅಂದಾಗಲೇ, ಭೃಷ್ಟಾಚಾರ, ಹಣದ ಸೋರಿಕೆ ಮುಂತಾದವುಗಳು ನಿಲ್ಲಲಿವೆ ಎಂಬುದು ಸರ್ಕಾರದ ವಾದ.

ಬೆಳೆ ಮಾರಾಟ ಮಾಡುವ ರೈತರು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಅವರಿಗೆ ನಿಗದಿಪಡಿಸಿದ ಆನ್​ಲೈನ್ ಪೋರ್ಟಲ್ ಮೂಲಕವೇ ಸಬ್ಸಿಡಿ ಪಾವತಿಯಾಗಬೇಕು. ಕೇಂದ್ರ ಆರ್ಥಿಕ ಸಚಿವಾಲಯವು Expenditure Advance Transfer module (EAT) ಪದ್ಧತಿಯನ್ನೇ ಅನುಸರಿಸಬೇಕು ಎಂದು ಎರಡೂ ರಾಜ್ಯಗಳಿಗೆ ಸೂಚಿಸಿದೆ.

ಆನ್​ಲೈನ್​ ಬಿಡ್ಡಿಂಗ್​ ಮಾಡುವುದರಿಂದ ರೈತರಿಗೆ ಅಂದಿನ ಮಾರುಕಟ್ಟೆಯ ಬೆಲೆ, ಏರಿಳಿತಗಳನ್ನು ಅರಿಯಲು ಸುಲಭವಾಗಲಿದೆ. ಎಂದು ತನ್ನ ಉತ್ಪನ್ನವನ್ನು ಎಪಿಎಂಸಿಗೆ ಒಯ್ಯಬೇಕು, ಎಂದು ಮಾರಾಟ ಮಾಡಿದರೆ ಹೆಚ್ಚಿನ ಬೆಲೆ ದೊರೆಯುತ್ತದೆ ಎಂಬ ಮಾಹಿತಿ ಸುಲಭವಾಗಿ ರೈತನಿಗೆ ಎಟುಕಲಿದೆ ಎಂಬುದು ಈ ಪದ್ಧತಿ ಜಾರಿಗೊಳಿಸುವುದರ ಹಿಂದಿನ ಉದ್ದೇಶ ಎನ್ನುತ್ತದೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ.

ಇದನ್ನೂ ಓದಿ: ರೈತ ಹೋರಾಟಕ್ಕಾಗಿ ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ; ರೈತ ನಾಯಕ ರಾಕೇಶ್ ಟಿಕಾಯತ್ ಕರೆ

ಇದನ್ನೂ ಓದಿ: ನರೇಂದ್ರ ಮೋದಿ ಘೋಷಿಸಿದ ಬೆಂಬಲ ಬೆಲೆ ಬದ್ಧತೆಯನ್ನು ಅನುಮಾನಿಸಿದ ರಾಕೇಶ್ ಟಿಕಾಯತ್