4 ವರ್ಷ ಬಳಿಕ ಅಣ್ಣ-ತಂಗಿಯ ಒಂದುಗೂಡಿಸಿದ ಕೊರೊನಾ ಲಾಕ್​ಡೌನ್​..!

| Updated By: ಆಯೇಷಾ ಬಾನು

Updated on: Jun 15, 2020 | 10:42 AM

ಬಳ್ಳಾರಿ: ಅಣ್ಣತಂಗಿಯರ ಈ ಬಂಧ ಜನುಮಜನುಮಗಳ ಅನುಬಂಧ ಎನ್ನುತ್ತದೆ ಶಿವಣ್ಣ ಚಿತ್ರದ ಹಾಡಿನ ಒಂದು ಸಾಲು. ಅಂತೆಯೇ 4 ವರ್ಷಗಳ ಹಿಂದೆ ಕಾಣೆಯಾಗಿದ್ದ ತಂಗಿಯ ಹುಡುಕಾಟದಲ್ಲಿದ್ದ ಅಣ್ಣನೊಬ್ಬನಿಗೆ ಕೊನೆಗೂ ಆಕೆ ಸಿಕ್ಕಿದ್ದಾಳೆ. ಅದು ಗಣಿನಾಡು ಬಳ್ಳಾರಿಯಲ್ಲಿ, ಈ ಲಾಕ್​ಡೌನ್​ ಮಧ್ಯೆ. ಅಷ್ಟಕ್ಕೂ ಈ ಕಥೆ ನಟ ಅನಂತ್​ ನಾಗ್​ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಷ್ಟು ರೋಚಕವಾಗಿಲ್ಲದಿದ್ರೂ ನಟಿ ಜೀನತ್​ ಅಮಾನ್​-ದೇವ್​ ಆನಂದ್​ ನಟನೆಯ ‘ಹರೇ ರಾಮಾ ಹರೇ ಕೃಷ್ಣ’ ಹಿಂದಿ ಸಿನಿಮಾದಷ್ಟೇ ಮನಮುಟ್ಟುವಂತಿದೆ. ತಂದೆ-ತಾಯಿ ಅಗಲಿದ […]

4 ವರ್ಷ ಬಳಿಕ ಅಣ್ಣ-ತಂಗಿಯ ಒಂದುಗೂಡಿಸಿದ ಕೊರೊನಾ ಲಾಕ್​ಡೌನ್​..!
Follow us on

ಬಳ್ಳಾರಿ: ಅಣ್ಣತಂಗಿಯರ ಈ ಬಂಧ ಜನುಮಜನುಮಗಳ ಅನುಬಂಧ ಎನ್ನುತ್ತದೆ ಶಿವಣ್ಣ ಚಿತ್ರದ ಹಾಡಿನ ಒಂದು ಸಾಲು. ಅಂತೆಯೇ 4 ವರ್ಷಗಳ ಹಿಂದೆ ಕಾಣೆಯಾಗಿದ್ದ ತಂಗಿಯ ಹುಡುಕಾಟದಲ್ಲಿದ್ದ ಅಣ್ಣನೊಬ್ಬನಿಗೆ ಕೊನೆಗೂ ಆಕೆ ಸಿಕ್ಕಿದ್ದಾಳೆ. ಅದು ಗಣಿನಾಡು ಬಳ್ಳಾರಿಯಲ್ಲಿ, ಈ ಲಾಕ್​ಡೌನ್​ ಮಧ್ಯೆ. ಅಷ್ಟಕ್ಕೂ ಈ ಕಥೆ ನಟ ಅನಂತ್​ ನಾಗ್​ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಷ್ಟು ರೋಚಕವಾಗಿಲ್ಲದಿದ್ರೂ ನಟಿ ಜೀನತ್​ ಅಮಾನ್​-ದೇವ್​ ಆನಂದ್​ ನಟನೆಯ ‘ಹರೇ ರಾಮಾ ಹರೇ ಕೃಷ್ಣ’ ಹಿಂದಿ ಸಿನಿಮಾದಷ್ಟೇ ಮನಮುಟ್ಟುವಂತಿದೆ.

ತಂದೆ-ತಾಯಿ ಅಗಲಿದ ನಂತರ ಮನೆ ಬಿಟ್ಟು ಹೋಗಿದ್ದ ಯುವತಿ
ಮೂಲತ: ಮಹಾರಾಷ್ಟ್ರದ ಲಾತೂರ್​ ನಿವಾಸಿಗಳಾಗಿದ್ದ, ಈ ಪ್ರಕರಣದಲ್ಲಿ ಕಾಣೆಯಾದ ಯುವತಿ ಸುಪ್ರಿಯಾ ಜೋಷಿ ಹಾಗೂ ಈಕೆಯ ಸಹೋದರ ಪ್ರಸನ್ನ ಜೋಷಿ ತಮ್ಮ ತಂದೆ-ತಾಯಿಯೊಂದಿಗೆ ಖುಷಿಖುಷಿಯಾಗಿ ವಾಸವಿದ್ದರು. ಇವರ ತಂದೆ ಪೊಲೀಸ್​ ಇನ್​ಸ್ಪೆಕ್ಟರ್ ಆಗಿದ್ದು ಇಡೀ ಕುಟುಂಬ ತಂದೆಯ ನಿವೃತ್ತಿಯ ನಂತರವೂ ಲಾತೂರ್​ನಲ್ಲೇ ಉಳಿದುಕೊಂಡಿತ್ತು.

ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ತಂದೆ-ತಾಯಿಯ ಹಠಾತ್ ನಿಧನದಿಂದ ನೊಂದ ಸುಪ್ರಿಯಾ ಮನೆಬಿಟ್ಟು ಹೋಗಿ ದೆಹಲಿಯಲ್ಲಿ ನೆಲೆಸಿದ್ದರಂತೆ. ಬಳಿಕ ಇವರು ಅಲೆಮಾರಿಯಂತೆ ಊರೂರು ಸುತ್ತುತ್ತಾ ಕೊನೆಗೆ ಗೋವಾದಲ್ಲಿ ಬಂದುಳಿದಿದ್ದರು. ತಮ್ಮ ಅಲೆದಾಟದ ನಡುವೆ ಅದೆಲ್ಲಿ, ಅದ್ಯಾವಾಗ ಮಾದಕ ವಸ್ತುಗಳಿಗೆ ಮಾರುಹೋದರೋ ಗೊತ್ತಿಲ್ಲ. ಆದರೆ, ನಶೆಯ ಅಮಲಿನಲ್ಲಿ ತನ್ನ ಅಸ್ತಿತ್ವವನ್ನೇ ಮರೆತುಬಿಟ್ಟರು.

ಈ ಮಧ್ಯೆ ಆಕೆಯ ಅಣ್ಣ ಪ್ರಸನ್ನ ಪಟ್ಟಪಾಡು ಅಷ್ಟಿಷ್ಟಲ್ಲ. ಮಹಾರಾಷ್ಟ್ರದಲ್ಲಿ, ದೆಹಲಿಯಲ್ಲಿ ಹುಡುಕದ ಜಾಗವಿಲ್ಲ. ಪೊಲೀಸರ ದುಂಬಾಲು ಬಿದ್ದು ತಂಗಿಯನ್ನು ಹುಡುಕುವ ಪ್ರಯಾಸ ಮಾಡಿದ್ದು ಏನು ಕಮ್ಮಿಯಲ್ಲ. ಕೊನೆಗೆ ತನ್ನ ಹಣೆಬರೆಹ ಇಷ್ಟೇ ಏನೋ ಎಂದು ಶಪಿಸುತ್ತಾ ಸುಪ್ರಿಯಾಳ ಹಾದಿ ನೋಡುವುದನ್ನು ಕೈಬಿಟ್ಟರು.

ಗೋವಾದಿಂದ ಹೊರಟ ಯುವತಿ ಕೊನೆಗೂ ‘ಲಾಕ್​’ ಆಗಿದ್ದು ಬಳ್ಳಾರಿಯಲ್ಲಿ. ಪ್ರಸನ್ನರ ಅಳಲು ಬಹುಶ: ಆ ಹಂಪಿ ವಿರೂಪಾಕ್ಷನಿಗೆ ತಲುಪಿತ್ತೋ ಏನೋ. ಗೋವಾದಲ್ಲಿ ಕೆಲವು ಪ್ರವಾಸಿಗರೊಂದಿಗೆ ಸೇರಿದ ಸುಪ್ರಿಯಾ 3 ತಿಂಗಳ ಹಿಂದೆ ಬಳ್ಳಾರಿಯ ವಿಶ್ವವಿಖ್ಯಾತ ಹಂಪಿಗೆ ಬಂದು ನೆಲೆಸಿದ್ದಾಳೆ. ಅಲ್ಲಿ ಆಕೆಯ ಅಲೆಮಾರಿ ಜೀವನಕ್ಕೆ ಬ್ರೇಕ್​ ಹಾಕಿದ್ದು ಕೊರೊನಾ ಲಾಕ್​ಡೌನ್!

ಕೈಯಲ್ಲಿ ಕಾಸಿಲ್ಲದೆ, ಅಮಲೇರಲು ಡ್ರಗ್ಸ್​ ಇಲ್ಲದೆ ಮತಿಭ್ರಮಣೆಯಾಗಿರುವಂತೆ ಹೊಸಪೇಟೆ ನಗರದಲ್ಲಿ ತಿರುಗಾಡಲು ತೊಡಗಿದ್ದರು. ಆಗಲೇ ಆಕೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು. ಯುವತಿ ಸಂಚರಿಸುತ್ತಿರೋದನ್ನ ಕಂಡ ಅಧಿಕಾರಿಗಳು ಕೂಡಲೇ ಅದನ್ನು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್​ರ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಕ್ಷಣಾಧಿಕಾರಿಗಳು ಸುಪ್ರಿಯಾರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಆಕೆಯ ಪೂರ್ವಾಪರ ಕಲೆಹಾಕಲು ಯತ್ನಿಸಿದರು. ಆದ್ರೆ ಸುಪ್ರಿಯಾ ಯಾವುದೇ ಮಾಹಿತಿ ನೀಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಹೇಗಾದರೂ ಮಾಡಿ ಇವಳನ್ನು ಈಕೆಯ ಸಂಬಂಧಿಕರ ಹತ್ರ ತಲುಪಿಸಬೇಕು ಎಂದು ಪಣತೊಟ್ಟ ಇಲಾಖೆಯ ಉಪ ನಿರ್ದೇಶಕ ಬಿ.ನಾಗರಾಜ ಸ್ವತಃ ಮುತುವರ್ಜಿ ವಹಿಸಿ ಸಿಬ್ಬಂದಿಗಳೊಂದಿಗೆ ಪ್ರತ್ಯೇಕ ಫೇಸ್​ಬುಕ್ ಪೇಜ್ ಓಪನ್ ಮಾಡಿಸಿದ್ರು. ಯುವತಿಯ ವಿವರಗಳನ್ನು ದಾಖಲಿಸಿ ಯಾರಿಗಾದ್ರೂ ಈಕೆಯ ಕುರಿತು ಮಾಹಿತಿ ಇದ್ದರೆ ಸಂಪರ್ಕಿಸಿ ಅಂತಾ ಪೋಸ್ಟ್​ ಮಾಡಿದ್ರು.


ಅಣ್ಣತಂಗಿಯರ ಬಂಧ ದೃಢಪಡಿಸಿದ ಆಧಾರ್​ ಕಾರ್ಡ್​!​

ಎರಡು ತಿಂಗಳ ಬಳಿಕ ಫೇಸ್‌ಬುಕ್ ಪೇಜ್‌ನಲ್ಲಿ ತಂಗಿಯ ಫೋಟೋ ಗುರುತಿಸಿದ ಪ್ರಸನ್ನ ಜೋಷಿಗೆ ತಮ್ಮ ಕಣ್ಣನ್ನು ತಾವೇ ನಂಬೋಕೆ ಆಗ್ಲಿಲ್ಲ. ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿದರು. ಮೊದಲು ಒಪ್ಪದ ಅಧಿಕಾರಿಗಳು ಇದಕ್ಕೆ ಸಾಕ್ಷ್ಯಾಧಾರಗಳೇನು ಎಂದು ಕೇಳಿದಾಗ, ಪ್ರಸನ್ನ ತಮ್ಮ ಬಳಿಯಿದ್ದ ಸುಪ್ರಿಯಾರ ಆಧಾರ್ ಮತ್ತು ಪ್ಯಾನ್ ಕಾರ್ಡ್​ಗಳನ್ನು ತೋರಿಸಿದರು. ಬಳಿಕ ಪ್ರಸನ್ನರನ್ನು ಸುಪ್ರಿಯಾರ ಮುಂದೆ ನಿಲ್ಲಿಸಿದಾಗ ಆಕೆಯೂ ತನ್ನ ಅಣ್ಣನನ್ನು ಕೂಡಲೇ ಗುರುತಿಸಿದಳು. ಅಧಿಕಾರಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಷ್ಟು ವರ್ಷಗಳ ನಂತರ ಇಬ್ಬರನ್ನು ಒಂದುಮಾಡಿದ ಆನಂದದಲ್ಲಿದ್ದ ಅಧಿಕಾರಿಗಳು ಅಣ್ಣ-ತಂಗಿ ಇಬ್ಬರನ್ನು ಆತ್ಮೀಯವಾಗಿ ಬಿಳ್ಕೊಟ್ಟಿದ್ದಾರೆ.

ಒಟ್ನಲ್ಲಿ ಲಾಕ್​ಡೌನ್​ನಿಂದ ಬರೀ ದುಃಖದ ಸಂಗತಿಗಳನ್ನು ಕೇಳುತ್ತಿದ್ದ ಬಳ್ಳಾರಿ ಜನತೆಗೆ ಈ ಒಂದು ಸುಖಾಂತ್ಯದ ಕಥೆ ಮನಸ್ಸಿಗೆ ಸಂತಸ ತಂದಿದೆ.
-ಬಸವರಾಜ ಹರನಹಳ್ಳಿ

Published On - 7:12 am, Sun, 14 June 20