Budget 2021 | ವಿಮಾ ವಲಯದಲ್ಲಿ ವಿದೇಶಿ ಹೂಡಿಕೆಗೆ ಪ್ರೋತ್ಸಾಹ, ಶೀಘ್ರ LIC ಐಪಿಒ

‘ಜೀವವಿಮೆ ಸಂಸ್ಥೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು (ಎಫ್​ಡಿಐ) ಶೇ 49ರಿಂದ 74 ಹೆಚ್ಚಿಸಲು, ವಿದೇಶಿ ಒಡೆತನವನ್ನು ಪ್ರೋತ್ಸಾಹಿಸುವುದರ ಜತೆಗೆ ಪಾಲಿಸಿದಾರರ ಹಿತಾಸಕ್ತಿ ಸಂರಕ್ಷಿಸಲು ವಿಮಾ ಕಾಯ್ದೆ 1938ರಲ್ಲಿ ತಿದ್ದುಪಡಿ ತರುವ ಪ್ರಸ್ತಾಪವನ್ನು ನಾನು ಮಾಡುತ್ತಿದ್ದೇನೆ’ ಎಂದು ಬಜೆಟ್ ಮಂಡಿಸುವಾಗ ನಿರ್ಮಲಾ ಸೀತಾರಾಮನ್ ಹೇಳಿದರು.

Budget 2021 | ವಿಮಾ ವಲಯದಲ್ಲಿ ವಿದೇಶಿ ಹೂಡಿಕೆಗೆ ಪ್ರೋತ್ಸಾಹ, ಶೀಘ್ರ LIC ಐಪಿಒ
ಬಜೆಟ್ ಮಂಡನೆಗೆ ಮುನ್ನ ನಿರ್ಮಲಾ ಸೀತಾರಾಮನ್

Updated on: Feb 01, 2021 | 8:54 PM

ಭಾರತದಲ್ಲಿ ಜೀವವಿಮೆ ವಲಯವನ್ನು ಮತ್ತಷ್ಟು ವಿಸ್ತೃತಗೊಳಿಸಲು ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ 49ರಿಂದ 74ರಷ್ಟು ಹೆಚ್ಚಿಸುವ ಪ್ರಸ್ತಾಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಬಜೆಟ್-2021 ಮಂಡಿಸುವಾಗ ಪ್ರಸ್ತಾಪಿಸಿದರು. ಭಾರತೀಯ ಜೀವವಿಮಾ ನಿಗಮದ (LIC) ಐಪಿಒ ಇದೇ ವರ್ಷ ಬರಲಿದೆ ಎಂದು ಸಚಿವರು ಹೇಳಿದ್ದಾರೆ.

‘ಜೀವವಿಮೆ ಸಂಸ್ಥೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು (ಎಫ್​ಡಿಐ) ಶೇ 49ರಿಂದ 74 ಹೆಚ್ಚಿಸಲು, ವಿದೇಶಿ ಒಡೆತನವನ್ನು ಪ್ರೋತ್ಸಾಹಿಸುವುದರ ಜತೆಗೆ ಪಾಲಿಸಿದಾರರ ಹಿತಾಸಕ್ತಿ ಸಂರಕ್ಷಿಸಲು ವಿಮಾ ಕಾಯ್ದೆ 1938ರಲ್ಲಿ ತಿದ್ದುಪಡಿ ತರುವ ಪ್ರಸ್ತಾಪವನ್ನು ನಾನು ಮಾಡುತ್ತಿದ್ದೇನೆ’ ಎಂದು ಬಜೆಟ್ ಮಂಡಿಸುವಾಗ ನಿರ್ಮಲಾ ಸೀತಾರಾಮನ್ ಹೇಳಿದರು.

ಹೂಡಿಕೆದಾರರು ಹಿತ ಕಾಪಾಡಲು, ಎಲ್ಲ ಹಣಕಾಸು ಉತ್ಪನ್ನಗಳ ನಿಯಂತ್ರಣಕ್ಕಾಗಿ ಸನ್ನದು (ಚಾರ್ಟರ್) ಹೊರಡಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. 2015ರಲ್ಲಿ ಇದೇ ಸರ್ಕಾರವು ವಿಮಾವಲಯದ ಎಫ್​ಡಿಐ ಮಿತಿಯನ್ನು ಶೇ 26ರಿಂದ 49ಕ್ಕೆ ಹೆಚ್ಚಿಸಿದ್ದನ್ನು ಸ್ಮರಿಸಬಹುದು.

ಭಾರತದ ಪ್ರಮುಖ ಜೀವವಿಮಾ ಕಂಪನಿಗಳು

ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ 3.6 ರಷ್ಟು ಪಾಲು ಜೀವವಿಮಾ ವಲಯ ಹೊಂದಿದೆ. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ (ಶೇ 7.13) ಇದು ತೀರಾ ಕಡಿಮೆಯಾಗಿದೆ. ಭಾರತದಲ್ಲಿ ಸಾಮಾನ್ಯ ವಿಮೆಯ ಸ್ಥಿತಿ ಮತ್ತಷ್ಟು ಕೆಟ್ಟದ್ದಾಗಿದೆ. ಜಾಗತಿಕ ಮಟ್ಟದಲ್ಲಿ ಸಾಮಾನ್ಯ ವಿಮೆಯ ಸರಾಸರಿ ಶೇ 2.88ರಷ್ಟಿದ್ದರೆ ಭಾರತದಲ್ಲಿ ಅದು ಜಿಡಿಪಿಯ ಕೇವಲ ಶೇ 0.94ರ ಪಾಲು ಪಡೆದಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆಯನ್ನು ಶೇ 74ರಷ್ಟು ಹೆಚ್ಚಿಸುವ ಸರ್ಕಾರದ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೆಲಾಯ್ಟ್ ಇಂಡಿಯಾದ ಪಾಲುದಾರ ರಸೆಲ್ ಗಾಯ್ತೊಂಡೆ ಇದು ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದರ ಜೊತೆಗೆ ವಿಮಾ ವಲಯವನ್ನು ಬಲಗೊಳಿಸುತ್ತದೆ ಎಂದಿದ್ದಾರೆ.

ಅಲಯನ್ಸ್ ಇನ್ಷುರೆನ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಅತುರ್ ಠಕ್ಕರ್ ಸರ್ಕಾರದ ಪ್ರಸ್ತಾವನೆ ವಿಮಾ ವಲಯದ ಪ್ರಗತಿಗೆ ಸಾಧ್ಯವಾಗುತ್ತದೆ ಮತ್ತು ಪ್ರತಿಯೊಬ್ಬರಿಗೂ ಅದು ನಿಲುಕುವಂತಾಗುತ್ತದೆ ಎಂದು ಹೇಳಿದ್ದ್ದಾರೆ. ‘ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ಈ ನಡೆ ನಿಸ್ಸಂದೇಹವಾಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ’ ಎಂದು ಠಕ್ಕರ್ ಹೇಳಿದ್ದಾರೆ.

ಶಾರ್ದುಲ್ ಅಮರ್​ಚಂದ್ ಮಂಗಲ್​ದಾಸ್ ಮತ್ತು ಕಂಪನಿಯ ಪಾಲುದಾರರಾಗಿರುವ ಶೈಲಜಾ ಲಾಲ್ ಅವರು ಉದಾರ ಎಫ್​​ಡಿಐ ನೀತಿಯು ಹೆಚ್ಚಿನ ಮೊತ್ತದ ವಿದೇಶೀ ಬಂಡವಾಳವನ್ನು ಅಕರ್ಷಿಸಿ ವಿಮೆ ಮತ್ತು ವಿಮಾದಾರರನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

‘ಅದಲ್ಲದೆ, ಎಫ್​ಡಿಐ ಮಿತಿಯ ಹೆಚ್ಚಳದಿಂದಾಗಿ ವಿಮಾ ವಲಯವು ಹೆಚ್ಚಿನ ಪ್ರಚೋದನೆಯನ್ನು ಪಡೆದುಕೊಂಡು ಕೊವಿಡ್-19 ಪಿಡುಗಿನ ನಂತರದ ದಿನಗಳಲ್ಲಿ ಡಿಜಿಟಲ್ ಮತ್ತು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ,’ ಎಂದು ಲಾಲ್ ಹೇಳಿದ್ದಾರೆ.

Budget 2021 Photo Gallery | ಚಿತ್ರಗಳಲ್ಲಿ ಬಜೆಟ್ ದಿನ

Budget 2021 ವಿಶ್ಲೇಷಣೆ | ಪೆಟ್ರೋಲ್​, ಡೀಸೆಲ್ ಸೆಸ್ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ: ಹೂಡಿಕೆ ತಜ್ಞ ರುದ್ರಮೂರ್ತಿ

ಸುದ್ದಿ ವಿಶ್ಲೇಷಣೆ | ಕರ್ನಾಟಕದ ಸಂಸದೆ ನಿರ್ಮಲಾ ಸೀತಾರಾಮನ್​ ರಾಜ್ಯವನ್ನೇ ಮರೆತರೆ?

Published On - 7:47 pm, Mon, 1 February 21