ಸಕ್ಕರೆನಾಡಲ್ಲಿ ಜೋಡೆತ್ತುಗಳು ಪರಾಕ್ರಮ: 14 ಟನ್​ ಕಬ್ಬು ಸಾಗಿಸಿ ಹೊಸ ದಾಖಲೆ ಬರೆದ ಹೋರಿಗಳು

  • TV9 Web Team
  • Published On - 18:29 PM, 22 Nov 2020
ಸಕ್ಕರೆನಾಡಲ್ಲಿ ಜೋಡೆತ್ತುಗಳು ಪರಾಕ್ರಮ: 14 ಟನ್​ ಕಬ್ಬು ಸಾಗಿಸಿ ಹೊಸ ದಾಖಲೆ ಬರೆದ ಹೋರಿಗಳು
ಸಾಂದರ್ಭಿಕ ಚಿತ್ರ

ಮಂಡ್ಯ ಎಂದರೆ ಸಕ್ಕರೆ ನಾಡು. ಕಬ್ಬಿಗೆ ಹೆಸರಾದ ಊರು. ಇಲ್ಲಿ ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಿಸುವ ದೃಶ್ಯ ಸರ್ವೇಸಾಮಾನ್ಯ. ಕಬ್ಬನ್ನು ಗದ್ದೆಯಿಂದ ಮನೆಗೋ ಅಥವಾ ಸಕ್ಕರೆ ಕಾರ್ಖಾನೆಗೋ ಎತ್ತಿನ ಗಾಡಿಯ ಮುಖಾಂತರ ಸಾಗಿಸಲಾಗುತ್ತದೆ.

ಅಂದ ಹಾಗೆ, ಒಂದು ಎತ್ತಿನ ಗಾಡಿಗೆ ಸಾಮಾನ್ಯವಾಗಿ 5 ರಿಂದ 8 ಟನ್​ನಷ್ಟು ಕಬ್ಬನ್ನು ತುಂಬಲಾಗುತ್ತದೆ. ಆದರೆ, ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯರ ಬಳಗದ ಯುವಕರು ಒಂದು ಎತ್ತಿನ ಗಾಡಿಗೆ 14.55 ಟನ್ ಕಬ್ಬು ತುಂಬಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಮಲ್ಲಿಗೆರೆಯ ಯುವಕರು ಮಂಡ್ಯದಲ್ಲಿ ಈ ಹಿಂದೆ ಎತ್ತಿನಗಾಡಿಗೆ 12 ಟನ್ ಕಬ್ಬು ತುಂಬಿದ್ದ ಹಳೇ ದಾಖಲೆಯನ್ನು ಮುರಿದಿದ್ದಾರೆ.

14.55 ಟನ್​ ತೂಕದ ಗಾಡಿಯನ್ನು ಎಳೆದವು ಜೋಡೆತ್ತುಗಳು!
ಇಷ್ಟೊಂದು ಪ್ರಮಾಣದಲ್ಲಿ ಕಬ್ಬು ತುಂಬಿದ ಎತ್ತಿನ ಗಾಡಿಯನ್ನು ಹುರುಗಲವಾಡಿ ಗ್ರಾಮದ ಶರತ್ ಎಂಬುವವರ ಜೋಡೆತ್ತುಗಳು 3 ಕಿ.ಮೀ ದೂರ ಎಳೆದಿವೆ. ತಮ್ಮ ಸಾಧನೆ ಮೇರೆಗೆ ಬಲಶಾಲಿ ಎತ್ತುಗಳು ಜನರ ಪ್ರಶಂಸೆಗೆ ಪಾತ್ರರಾಗಿವೆ. ಅಂದ ಹಾಗೆ, ಈ ಬಲಿಷ್ಠ ಜೋಡೆತ್ತುಗಳನ್ನು ಅವುಗಳ ಮಾಲೀಕ ಶರತ್ ಕಳೆದ ತಿಂಗಳಷ್ಟೇ 2.90 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದರು.

14.55 ಟನ್ ತೂಕದ ಕಬ್ಬಿನ ಗಾಡಿಯನ್ನು ಈ ಜೋಡೆತ್ತುಗಳು ಎಳೆಯುವಾಗ ಸ್ಥಳೀಯರು ಶಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹಿಸಿದರು. ಇದೀಗ, ಜೋಡೆತ್ತುಗಳು ಎತ್ತಿನಗಾಡಿ ಎಳೆಯುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಸೈ, ಜೈ ಎಂದು ಯುವಕರು ಮತ್ತು ಜೋಡೆತ್ತುಗಳ ಸಾಹಸವನ್ನು ಪ್ರಶಂಸಿದ್ದಾರೆ.