
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ನಂಟು ವಿಚಾರ ಇಡೀ ಕನ್ನಡ ಚಲನಚಿತ್ರರಂಗವನ್ನೇ ಅಲ್ಲಾಡಿಸಿದ ಬೆನ್ನಲ್ಲೇ ಈಗ ಈ ನಂಟು ಆರ್‌ಟಿಓ ಡಿಪಾರ್ಟ್‌ಮೆಂಟ್‌ಗೂ ಹಬ್ಬಿದೆಯಾ ಎನ್ನೋ ಅನುಮಾನಗಳು ಶುರುವಾಗಿವೆ.
ಇವತ್ತು ಜಯನಗರ ಆರ್‌ಟಿಓದಲ್ಲಿ ಕಾರ್ಯನಿರ್ವಹಿಸುವ ರವಿಶಂಕರ್ ಅನ್ನೋ ವ್ಯಕ್ತಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಎತ್ತಾಕಿಕೊಂಡು ಬಂದ ನಂತರ, ಆರ್‌ಟಿಓ ಕಚೇರಿಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಜಯನಗರ ಆರ್‌ಟಿಓದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿರೋ ರವಿಶಂಕರ್ ಕಚೇರಿಯಲ್ಲಿದ್ದಾಗಲೇ ಆತನನ್ನು ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ರವಿಶಂಕರ್‌ನನ್ನು ಸಿಸಿಬಿ ಕರೆತಂದ ಬೆನ್ನಲ್ಲೇ ಜಯನಗರ ಆರ್‌ಟಿಓ ಹಿರಿಯ ಅಧಿಕಾರಿ ಗಾಯತ್ರಿದೇವಿ ಸಿಸಿಬಿ ಕಚೇರಿಗೆ ಭೇಟಿ ನೀಡಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆಯಲ್ಲದೇ ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.
ಕೇವಲ ಒಬ್ಬ ದ್ವೀತಿಯ ದರ್ಜೆ ಗುಮಾಸ್ತನನ್ನು ವಶಕ್ಕೆ ಪಡೆದ ಮಾತ್ರಕ್ಕೆ ಹಿರಿಯ ಆರ್‌ಟಿಓ ಅಧಿಕಾರಿ ಸ್ವತಃ ಸಿಸಿಬಿ ಜಂಟಿ ಆಯುಕ್ತರನ್ನು ಭೇಟಿ ಮಾಡಿರೋದು ಹುಬ್ಬೇರುವಂತೆ ಮಾಡಿದೆ. ಭೇಟಿ ವೇಳೆ ಪ್ರಕರಣ ಸಂಬಂಧ ವಿಚಾರಣೆಗೆ ಕರೆ ತಂದಿದ್ದೇವೆ. ವಿಚಾರಣೆ ಬಳಿಕ ಮಾಹಿತಿ ನೀಡುವುದಾಗಿ ಗಾಯತ್ರಿ ದೇವಿ ಅವರಿಗೆ ಸಂದೀಪ್ ಪಾಟೀಲ್ ಹೇಳಿ ಕಳಿಸಿದ್ದಾರೆಂದು ಸಿಸಿಬಿ ಮೂಲಗಳು ತಿಳಿಸಿವೆ.