ಬೆಂಗಳೂರು: ಸ್ಟಾರ್ ನಟನ ತಂಗಿ ಪಾತ್ರಕ್ಕೆ ಚಿತ್ರದ ಆಡಿಷನ್ ಇದೆ ಎಂದು ಕರೆಸಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ನೃತ್ಯ ಸಂಯೋಜಕ ಪವನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಜನವರಿ 12 ರಂದು ಡ್ಯಾನ್ಸ್ ಮಾಸ್ಟರ್ ಪವನ್ ಯುವತಿಗೆ ಕರೆ ಮಾಡಿ ಚಿತ್ರವೊಂದರಲ್ಲಿ ತಂಗಿ ಪಾತ್ರಕ್ಕೆ ಆಡಿಷನ್ ಇದೆ ಬಾ ಎಂದು ಕರೆದಿದ್ದಾರೆ. ಸಂತ್ರಸ್ಥ ಯುವತಿ ನಾಗರಭಾವಿ ಬಳಿಯ ತನ್ನ ಡ್ಯಾನ್ಸ್ ಕ್ಲಾಸಿಗೆ ಬಂದಿದ್ದಾಳೆ. ನಂತರ ಪವನ್ ತನ್ನ ಗೆಳೆಯನೊಬ್ಬನಿಗೆ ಕರೆ ಮಾಡಿ ನಿರ್ದೇಶಕನ ಸೋಗಿನಲ್ಲಿ ಯುವತಿಯ ಜೊತೆ ಮಾತನಾಡಿಸಿದ್ದಾನೆ. ಮಾತು ಮುಗಿದ ಬಳಿಕ ನೀನು ಸುದೀಪ್ ಸರ್ ನೆಕ್ಸ್ಟ್ ಮೂವಿಯ ತಂಗಿ ಪಾತ್ರಕ್ಕೆ ನೀನು ಸೆಲೆಕ್ಟ್ ಆಗಿದ್ದೀಯಾ ಎಂದು ನಂಬಿಸಿದ್ದಾನೆ.
ನಂತರ ಡ್ಯಾನ್ಸ್ ಕ್ಲಾಸ್ನಲ್ಲಿ ಯುವತಿಗೆ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನ ತೋರಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪುವ ಔಷಧ ಬೆರೆಸಿದ ನೀರು ಕುಡಿಸಿದ್ದಾನೆ. ಯುವತಿ ಪ್ರಜ್ಞೆತಪ್ಪಿದಾಗ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ಥ ಯುವತಿ ಪೋಷಕರು ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿಯನ್ನ ನಂಬಿಸಿ ದೈಹಿಕವಾಗಿ ಹಿಂಸಿಸಿದ ಕನ್ನಡದ ಡ್ಯಾನ್ಸ್ ಮಾಸ್ಟರ್ ಅಂದರ್ ಆಗಿದ್ದಾನೆ. ಬಂಧಿತ ಡ್ಯಾನ್ಸ್ ಮಾಸ್ಟರ್ ಕನ್ನಡದ ಖ್ಯಾತ ರಿಯಾಲಿಟಿ ಶೋ ಗಳಿಗೆ ಕೊರಿಯೋಗ್ರಾಫರ್ ಆಗಿದ್ದ. ಕನ್ನಡದ ಡ್ಯಾನ್ಸ್ ಡ್ಯಾನ್ಸ್, ತಕಧಿಮಿತ, ಕಿಕ್, ಡ್ಯಾನ್ಸಿಂಗ್ ಸ್ಟಾರ್ ಶೋಗಳಲ್ಲಿ ನೃತ್ಯಸಂಯೋಜಕನಾಗಿದ್ದ. ನಾಗರಭಾವಿ ಬಿಡಿಎ ಕಾಂಪ್ಲೇಕ್ಸ್ ಬಳಿ ಡ್ಯಾನ್ಸ್ ಕ್ಲಾಸ್ ಹೊಂದಿದ್ದ. ಸಂತ್ರಸ್ಥ ಯುವತಿ ಪವನ್ ಬಳಿ ಕಳೆದ ಮೂರು ವರ್ಷಗಳಿಂದ ಡ್ಯಾನ್ಸ್ ಕಲಿಯುತ್ತಿದ್ದಳು.
Published On - 7:54 am, Thu, 16 January 20