ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿ ಸೇರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಈ ಕುರಿತು ಹಲವಾರು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ, ಏನಾಗುತ್ತದೆ ನೋಡೋಣ ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವುದು ಕೇಂದ್ರ ಸರ್ಕಾರ. ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ಕಾಮಗಾರಿ ಆರಂಭ ಹಾಗೂ ಹಣ ಬಿಡುಗಡೆ ಬಗ್ಗೆ ದಾಖಲೆಗಳಿವೆ. ಕಾಂಗ್ರೆಸ್ ನಾಯಕರು ಪ್ರಸ್ತಾವನೆ ಕಳಿಸಿದ್ದ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಪ್ರಸ್ತಾವನೆ ಇದೆ, ಅದು ಇವತ್ತಿನದಲ್ಲ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲಿನಿಂದಲೂ ಪ್ರಸ್ತಾವನೆ ಇದೆ. ನೈಸ್ ರಸ್ತೆ ಪ್ರಸ್ತಾವನೆ ವಿಫಲವಾದಾಗ ಇದು ಮತ್ತೆ ಮುನ್ನೆಲೆಗೆ ಬಂದಿತ್ತು. ಇದರ ಇತಿಹಾಸ ಗೊತ್ತಿದ್ದವರಿಗೆ ಮಾತ್ರ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿಗೆ ಬಂದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಇದೇ ವೇಳೆ, ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಬಗ್ಗೆ ಪರೋಕ್ಷ ಸುಳಿವು ನೀಡಿದರು. ಬಿಜೆಪಿ ಸೇರುವವರ ಸಂಖ್ಯೆ ಈಗ ಹೆಚ್ಚಾಗಿದೆ. ಇನ್ನೂ ಸಾಕಷ್ಟು ನಾಯಕರು ಪಕ್ಷವನ್ನು ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸುಮಲತಾ ಅಂಬರೀಶ್ ಬಿಜೆಪಿ ಸೇರಿದ್ರೆ ಸಂಸದೆ ಸ್ಥಾನದಿಂದ ಅನರ್ಹ ? ಕಮಲ ಮುಡಿಯಲು ಹೊರಟ ಮಂಡ್ಯ ಗೌಡ್ತಿಗೆ ಕಾನೂನು ತೊಡಕು!
ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ರೋಡ್ ಶೋ ನಡೆಸಲಿದ್ದಾರೆ. ಮೋದಿಯವರು ಪ್ರಪಂಚದ ಜನಪ್ರಿಯ ನಾಯಕ. ಪ್ರಧಾನಿ ಬರುತ್ತಿರುವುದು ನಮ್ಮ ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬಲಿದೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ.
ಸುಮಲತಾ ಅಂಬರೀಶ್ ಶುಕ್ರವಾರ ಬೆಳಗ್ಗೆ 9.30ಕ್ಕೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಮಂಡ್ಯದತ್ತ ಹೊರಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಸಂಸದರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ. ಸದ್ಯ ಸುಮಲತಾ ಅವರು ಪ್ರೇಸ್ಟಿಜ್ ಅಪಾರ್ಟ್ಮೆಂಟ್ನಲ್ಲಿ ಇದ್ದಾರೆಯೇ ಅಥವಾ ಖಾಸಗಿ ಹೋಟೆಲ್ನಲ್ಲಿ ಇದ್ದಾರೆಯೇ ಎಂಬ ಮಾಹಿತಿ ತಿಳಿದುಬಂದಿಲ್ಲ.
ಸುಮಲತಾ ರಾಜ್ಯ ರಾಜಕಾರಣಕ್ಕೆ ಬಂದು ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿದರೆ ಎದುರಾಳಿಯಾಗಿ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಒಂದು ವೇಳೆ ಇದು ನಿಜವಾದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಅನುಕಂಪ ಜೆಡಿಎಸ್ಗೆ ದೊರೆಯಲಿದೆ. ಸುಮಲತಾ ಸಾಮಾನ್ಯ ಜನರ ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳೂ ಜೆಡಿಎಸ್ಗೆ ವರದಾನವಾಗುವ ಸಾಧ್ಯತೆ ಇದೆ. ಅಂಬರೀಶ್ ಪರ ಅಲೆ ಈ ಹಿಂದಿನಷ್ಟು ಇಲ್ಲದಿರುವುದು ಸುಮಲತಾ ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಮೂಲಗಳು ಹೇಳಿವೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:25 pm, Thu, 9 March 23