ಸುಮಲತಾ ಅಂಬರೀಶ್​ ಬಿಜೆಪಿ ಸೇರ್ಪಡೆಗೆ ಎದುರಾದ ಕಾನೂನು ತೊಡಕು ಏನು? ಇಲ್ಲಿದೆ ನೋಡಿ

ಬಿಜೆಪಿ ಸೇರ್ಪಡೆಗೆ ತಯಾರಿ ನಡೆಸಿರುವ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್​ಗೆ ಕಾನೂನು ತೊಡಕು ಇದೆ. ಸುಮಲತಾ ಬಿಜೆಪಿ ಸೇರ್ಪಡೆಯಾಗಲು ಬಯಸಿದರೂ ಅಧಿಕೃತವಾಗಿ ಸೇರಲು ಸಾಧ್ಯವಿಲ್ಲ. ಒಂದು ವೇಳೆ ಬಿಜೆಪಿ ಸೇರ್ಪಡೆಯಾದರೆ ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ಪಕ್ಷಾಂತರ ನಿಷೇಧ ನಿಯಮಾವಳಿಯಂತೆ ಅನರ್ಹಗೊಳ್ಳುತ್ತಾರೆ. ಸಂವಿಧಾನದ 10 ನೇ ಶೆಡ್ಯೂಲ್ ಏನು ಹೇಳುತ್ತೆ? ಈ ಕೆಳಗಿನಂತಿದೆ ನೋಡಿ.

ಸುಮಲತಾ ಅಂಬರೀಶ್​ ಬಿಜೆಪಿ ಸೇರ್ಪಡೆಗೆ ಎದುರಾದ ಕಾನೂನು ತೊಡಕು ಏನು? ಇಲ್ಲಿದೆ ನೋಡಿ
Follow us
ರಮೇಶ್ ಬಿ. ಜವಳಗೇರಾ
|

Updated on:Mar 10, 2023 | 3:10 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರ್ಚ್​ 12ರಂದು ಮಂಡ್ಯಕ್ಕೆ (Mandya) ಆಗಮಿಸಲಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ  ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಂಡ್ಯದಿಂದ ಆಯ್ಕೆಯಾಗಿರುವ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಬಿಜೆಪಿ ಸೇರುವ ವಿಚಾರ ಮತ್ತೆ ಚರ್ಚೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಇಂದಿನ ಸುದ್ದಿಗೋಷ್ಠಿ ತೀವ್ರ ಕುತೂಹಲ ಮೂಡಿಸಿತ್ತು. ಆದ್ರೆ, ಇದೀಗ ಸುಮಲತಾ ಅಂಬರೀಶ್ ಅವರು ಅಧಿಕೃತ ಬಿಜೆಪಿ ಸೇರ್ಪಡೆ ಬದಲು ಬಾಹ್ಯ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದರು.  ಅವರು ಬಿಜೆಪಿ ಸೇರ್ಪಡೆಗೆ ಕಾನೂನು ತೊಡಕಿದೆ. ಹೀಗಾಗಿ ಅವರ ಸದ್ಯಕ್ಕೆ ಬಾಹ್ಯ ಬೆಂಬಲ ಎಂದು ತಿಳಿಸಿದರು. ಹಾಗಾದ್ರೆ, ಸುಮಲತಾ ಅಂಬರೀಶ್​ಗೆ ಇರುವ ಕಾನೂನು ತೊಡಕು ಏನು? ಈ ಕೆಳಗಿನಂತಿದೆ ನೋಡಿ

ಇದನ್ನೂ ಓದಿ: Sumalatha Ambareesh: ನಾಳೆ ಸಂಸದೆ ಸುಮಲತಾ ಅಂಬರೀಶ್​ ಬಿಜೆಪಿ ಸೇರುತ್ತಾರೆ: ಮಂಡ್ಯ ಗೌಡ್ತಿ ಒಳಗುಟ್ಟು ರಟ್ಟು ಮಾಡಿದ ಜೆಡಿಎಸ್ ಶಾಸಕ

ಹೌದು….ಇದೀಗ ಸುಮಲತಾ ಅಂಬರೀಶ್ ಅವರು ಸಹ ಪಕ್ಷೇತರ ಸಂಸದೆಯಾಗಿದ್ದು, ಬಿಜೆಪಿ ಸೇರ್ಪಡೆ ಹಾದಿ ಅಷ್ಟು ಸುಲಭವಿಲ್ಲ. ಅವರಿಗೆ ಕಾನುನು ತೊಡಕು ಎದುರಾಗಲಿದೆ. ಸಂವಿಧಾನದ 10ನೇ ಷೆಡ್ಯೂಲ್​ನಡಿ ಪಕ್ಷ ಸೇರಲು ಅವಕಾಶವಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದ 6 ತಿಂಗಳೊಳಗೆ ರಾಜಕೀಯ ಪಕ್ಷ ಸೇರಬೇಕು. 6 ತಿಂಗಳ ನಂತರ ಸೇರಿದರೆ ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಒಂದೇ ವೇಳೆ ರಾಜಕೀಯ ಪಕ್ಷ ಸೇರಬೇಕಿದ್ದರೆ ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದರಿಂದ ಈ ನಿರ್ಬಂಧವಿದೆ. ಹಾಗಾದ್ರೆ, ಭಾರತೀಯ ಸಂವಿಧಾನದ 10ನೇ ಷೆಡ್ಯೂಲ್ ನ ಪ್ಯಾರಾ (2) ಹಾಗೂ ಪ್ಯಾರಾ(3) ಏನು ಹೇಳುತ್ತೆ ಎನ್ನುವುದು ಈ ಕೆಳಗಿಂತಿದೆ.

ಸಂವಿಧಾನದ 10ನೇ ಶೆಡ್ಯೂಲ್​ನ ಪ್ಯಾರಾ (2),(3) ಹೇಳುವುದೇನು?

ಪ್ಯಾರಾ (2): ಸಂಸತ್ತಿನ ಯಾವುದೇ ಸದನದ ಸದಸ್ಯರಾಗಿ ರಾಜಕೀಯ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗದೇ ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಯಾಗುವ ಸದಸ್ಯರು ಯಾವುದಾದರೊಂದು ರಾಜಕೀಯ ಪಕ್ಷ ಸೇರಿದರೆ ಅನರ್ಹಗೊಳ್ಳುತ್ತಾರೆ.

ಪ್ಯಾರಾ (3): ಉಭಯ ಸದನಗಳ ಪೈಕಿ ಒಂದು ಸದನಕ್ಕೆ ನಾಮನಿರ್ದೇಶಿತ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸದಸ್ಯರು, ಹೀಗೆ ಆಯ್ಕೆಯಾದ 6 ತಿಂಗಳ ನಂತರ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡರೆ ಅವರು ಅನರ್ಹಗೊಳ್ಳುತ್ತಾರೆ.

ಸಂಸದೆ ಸುಮಲತಾ ವಿಚಾರದಲ್ಲಿ ಆಗಿರುವುದೂ ಇದೇ. ಸಂಸದೆಯಾಗಿ ಆಯ್ಕೆಯಾದ 6 ತಿಂಗಳೊಳಗೆ ಸುಮಲತಾ ಬಿಜೆಪಿ ಸೇರಿಲ್ಲ. ಆದರೆ ಈಗ ಅಧಿಕೃತವಾಗಿ ಬಿಜೆಪಿ ಸೇರಿದರೆ ಅವರು ತಮ್ಮ ಸಂಸದೆ ಸ್ಥಾನದಿಂದ ಅನರ್ಹಗೊಳ್ಳುವ ಭೀತಿ ಎದುರಿಸಬೇಕಾಗುತ್ತದೆ. ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿ ಸೇರಲು ಅಡ್ಡಿಯಿರುವುದಿಲ್ಲ. ಆದರೆ ಸ್ವತಂತ್ರ ಸಂಸದೆಯಾಗಿದ್ದುಕೊಂಡು ರಾಜಕೀಯ ಪಕ್ಷದ ಸದಸ್ಯೆಯಾಗುವುದು ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ಪಕ್ಷಾಂತರ ನಿಷೇಧ ನಿಯಮಾವಳಿಯಂತೆ ಅನರ್ಹಗೊಳ್ಳುತ್ತಾರೆ. ಲೋಕಸಭೆಯ ಸ್ಪೀಕರ್ ಅನರ್ಹತೆ ಬಗ್ಗೆ ತೀರ್ಮಾನಿಸುತ್ತಾರೆ.

ಸುಮಲತಾ ಮುಂದಿರುವ ಆಯ್ಕೆ ಏನು?

ಸುಮಲತಾ ಬಿಜೆಪಿ ಸೇರ್ಪಡೆಯಾಗಲು ಬಯಸಿದರೂ ಅಧಿಕೃತವಾಗಿ ಸೇರಲು ಸಾಧ್ಯವಿಲ್ಲ. ಬದಲಿಗೆ ಬಿಜೆಪಿಯನ್ನು ಬಾಹ್ಯವಾಗಿ ಬೆಂಬಲಿಸಬಹುದು. ರಾಜಕೀಯ ಪಕ್ಷದ ಸದಸ್ಯತ್ವ ಪಡೆಯುವಂತಿಲ್ಲ. ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿಯೂ ಸುಮಲತಾ ಭಾಗವಹಿಸುವಂತಿಲ್ಲ. ಭಾಗವಹಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳ್ಳುತ್ತಾರೆ. ಬಾಹ್ಯ ಬೆಂಬಲ ನೀಡಿದರೆ ಬಿಜೆಪಿ ಹೊರಡಿಸುವ ವಿಪ್ ಕೂಡಾ ಸುಮಲತಾರಿಗೆ ಅನ್ವಯವಾಗುವುದಿಲ್ಲ. ಅವರು ಸ್ವತಂತ್ರ ಸಂಸದೆಯಾಗಿ ಮುಂದುವರಿಯಬೇಕಾಗಲಿದೆ. ಇನ್ನು ಹೊಸಕೋಟೆಯಿಂದ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶರತ್ ಬಚ್ಚೇಗೌಡ ಕಾಂಗ್ರೆಸ್ ನ ಅಧಿಕೃತ ಸದಸ್ಯರಲ್ಲ. ಕಾಂಗ್ರೆಸ್ ಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರಾಗಿದ್ದಾರೆಂದು ಅವರ ವಿರುದ್ಧ ಯಾರೂ ದೂರು ನೀಡಿಲ್ಲ. ಹೀಗಾಗಿ ಅವರು ಅನರ್ಹಗೊಂಡಿಲ್ಲ.

ಸಂವಿಧಾನ ತಜ್ಞರು ಹಾಗೂ ಹಿರಿಯ ವಕೀಲ ಮಾತು

ಇನ್ನು ಈ ಬಗ್ಗೆ ಸಂವಿಧಾನ ತಜ್ಞರು ಹಾಗೂ ಹಿರಿಯ ವಕೀಲರಾದ ಶಶಿಕಿರಣ್ ಶೆಟ್ಟಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಸ್ವತಂತ್ರ ಅಭ್ಯರ್ಥಿ ಎಂದೇ ಜನರು ಸಂಸದರನ್ನು ಆಯ್ಕೆ ಮಾಡಿರುತ್ತಾರೆ. ಹೀಗೆ ಸ್ವತಂತ್ರ ಅಭ್ಯರ್ಥಿಯಾಗಿ ಜನರಿಂದ ಆಯ್ಕೆಯಾಗಿ ನಂತರ ಅವರು ರಾಜಕೀಯ ಪಕ್ಷ ಸೇರಿದರೆ ಅನರ್ಹಗೊಳ್ಳುತ್ತಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದವರು ರಾಜಕೀಯ ಪಕ್ಷದ ಶಾಸಕಾಂಗ ಪಕ್ಷದ ಸಭೆಗೆ ಭಾಗಿಯಾಗುವಂತಿಲ್ಲ. ಪಕ್ಷದ ಸದಸ್ಯತ್ವ ಪಡೆಯದೇ ಬಾಹ್ಯವಾಗಿ ಬೆಂಬಲ ನೀಡಬಹುದು. ಪಕ್ಷಕ್ಕೆ ಸೇರುವುದಕ್ಕೂ ಬಾಹ್ಯವಾಗಿ ಬೆಂಬಲ ನೀಡುವುದಕ್ಕೂ ವ್ಯತ್ಯಾಸವಿದೆ. ಸಮ್ಮಿಶ್ರ ಸರ್ಕಾರಕ್ಕೆ ರಾಜಕೀಯ ಪಕ್ಷಗಳು ಬೆಂಬಲಿಸುವಂತೆ ಸ್ವತಂತ್ರ ಅಭ್ಯರ್ಥಿ ಕೂಡಾ ಬೆಂಬಲ ನೀಡಬಹುದು. ಆದರೆ ಪಕ್ಷ ಸೇರುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವರದಿ: ರಮೇಶ್ ಮಹದೇವ್ ಟಿವಿ9 ಬೆಂಗಳೂರು

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:30 pm, Thu, 9 March 23