ಬಿಜೆಪಿ ಭಿನ್ನರ ಸಭೆಯಲ್ಲಿ ಸೋಮಣ್ಣ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ
ರೆಬೆಲ್ ನಾಯಕರು ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ನಿವಾಸದಲ್ಲಿ ಸಭೆ ಸೇರಿದ್ದು, ಈ ವೇಳೆ ಕೇಂದ್ರ ಸಚಿವ ವಿ ಸೋಮಣ್ಣ ಕಾಣಿಸಿಕೊಂಡಿರುವ ಭಾರೀ ಸಂಚಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಸೋಮಣ್ಣ ಅವರು ಪ್ರತಿಕ್ರಿಯಿಸಿದ್ದು, ಯಾವ ಸಭೆಯಲ್ಲೂ ಭಾಗವಹಿಸಿಲ್ಲ. ಯಾವ ಸಭೆಯೂ ನಡೆದಿಲ್ಲ. ಮಾಜಿ ಸಂಸದ ಸಿದ್ದೇಶ್ವರ್ ಅವರ ಮನೆಯಲ್ಲಿ ಮದುವೆ ಇತ್ತು. ಮದುವೆಗೆ ನಾನು ಹೋಗಲು ಆಗಿರಲಿಲ್ಲ. ಆಗ ನಾನು ಜಮ್ಮುವಿನಲ್ಲಿದ್ದೆ. ಹೀಗಾಗಿ ನಿನ್ನೆ ಸಿದ್ದೇಶ್ವರ್ ನಿವಾಸಕ್ಕೆ ಹೋಗಿ ಬಂದೆ ಎಂದಿದ್ದಾರೆ.
ಬೆಂಗಳೂರು, (ಜೂನ್ 20): ಮೂರು ಶಾಸಕರನ್ನು ಹೈಕಮಾಂಡ್ ಉಚ್ಛಾಟಿಸಿದರೂ ಸಹ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ, ಮುನಿಸು ಕಡಿಮೆಯಾಗುತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನಿನ್ನೆ ಭಿನ್ನಮತೀಯ ನಾಯಕರೊಂದಿಗೆ ಸಭೆ ಮಾಡಿದ್ದು, ಮುನಿಸು ಬಿಟ್ಟು ಪಕ್ಷದ ನಾಯಕತ್ವಕ್ಕೆ ಸಹಕಾರ ಕೊಡುವಂತೆ ಭಿನ್ನರಿಗೆ ವರಿಷ್ಠರ ಸಂದೇಶವನ್ನು ತಿಳಿಸಿದ್ದಾರೆ. ಇದಾದ ಬಳಿಕ ರೆಬೆಲ್ ನಾಯಕರು ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ನಿವಾಸದಲ್ಲಿ ಸಭೆ ಸೇರಿದ್ದು, ಈ ವೇಳೆ ಕೇಂದ್ರ ಸಚಿವ ವಿ ಸೋಮಣ್ಣ ಕಾಣಿಸಿಕೊಂಡಿರುವ ಭಾರೀ ಸಂಚಲಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಇದೀಗ ಸೋಮಣ್ಣ ಅವರು ಪ್ರತಿಕ್ರಿಯಿಸಿದ್ದು, ಯಾವ ಸಭೆಯಲ್ಲೂ ಭಾಗವಹಿಸಿಲ್ಲ. ಯಾವ ಸಭೆಯೂ ನಡೆದಿಲ್ಲ. ಮಾಜಿ ಸಂಸದ ಸಿದ್ದೇಶ್ವರ್ ಅವರ ಮನೆಯಲ್ಲಿ ಮದುವೆ ಇತ್ತು. ಮದುವೆಗೆ ನಾನು ಹೋಗಲು ಆಗಿರಲಿಲ್ಲ. ಆಗ ನಾನು ಜಮ್ಮುವಿನಲ್ಲಿದ್ದೆ. ಹೀಗಾಗಿ ನಿನ್ನೆ ಸಿದ್ದೇಶ್ವರ್ ನಿವಾಸಕ್ಕೆ ಹೋಗಿ ಬಂದೆ. ಇದರಲ್ಲಿ ಯಾವುದೇ ಅಪಾರ್ಥ ಮಾಡಿಕೊಳ್ಳುವ ಅಗತ್ಯ ಇಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಸಿದ್ದೇಶ್ವರ್ ಸಹ ಪಕ್ಷದ ಹಿರಿಯರು ಎಂದು ಸ್ಪಷ್ಟಪಡಿಸಿದರು.