ಅಮೆರಿಕಕ್ಕೆ ತೆರಳಲು ಪ್ರಿಯಾಂಕ್ ಖರ್ಗೆಗೆ ಕೊನೆಗೂ ಅನುಮತಿ: ಕೇಂದ್ರದ ಯೂಟರ್ನ್ ಎಂದು ವಾಗ್ದಾಳಿ ನಡೆಸಿದ ಸಚಿವ
ಸಚಿವ ಪ್ರಿಯಾಂಕ್ ಖರ್ಗೆಗೆ ಅಮೆರಿಕ ಪ್ರವಾಸಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದು ಕೇಂದ್ರ ಸರ್ಕಾರವು ಶನಿವಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಚಿವ ಖರ್ಗೆ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಜೊತೆಗೆ ಕೇಂದ್ರ ಯೂಟರ್ನ್ ಹೊಡೆದಿದೆ ಎಂದು ವಾಗ್ದಾಳಿ ಮಾಡಿದ್ದಾರೆ. ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.

ಬೆಂಗಳೂರು, ಜೂನ್ 21: ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ಅಮೆರಿಕಾದ ಎರಡು ಪ್ರತಿಷ್ಠಿತ ತಾಂತ್ರಿಕ ಕಾರ್ಯಕ್ರಮಗಳಿಗೆ ಭಾಗವಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು. ಈ ನಿರ್ಧಾರವನ್ನು ಖಂಡಿಸಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದ ಎರಡೇ ದಿನಗಳಲ್ಲಿ ಅವರಿಗೆ ಅಮೆರಿಕ (America) ಪ್ರವಾಸ ನಿರ್ಬಂಧವನ್ನು ತೆರವು ಮಾಡಿ ಕೇಂದ್ರ ಸರ್ಕಾರದಿಂದ ಮರು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಸ್ವತಃ ಟ್ವೀಟ್ ಮೂಲಕ ಪ್ರಿಯಾಂಕ್ ಖರ್ಗೆ ಖಚಿತಪಡಿಸಿದ್ದು, ಜೊತೆಗೆ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಅಮೆರಿಕಕ್ಕೆ ನಿರ್ಬಂಧವನ್ನು ತೆರವು ಮಾಡುವ ಮೂಕಲ ನನಗೆ ಅಧಿಕೃತ ಭೇಟಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ವಿದೇಶಾಂಗ ಸಚಿವಾಲಯವು ತನ್ನ ಹಿಂದಿನ ನಿರ್ಧಾರವನ್ನು ಹಿಂಪಡೆದುಕೊಂಡಿದೆ ಎಂದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್
So in a U-turn, the Ministry of External Affairs has now decided to revoke its earlier decision and grant me a clearance for an official visit to the United States.
I had sought permission on 15 May to travel between 14–27 June to represent the Government of Karnataka at two…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 21, 2025
ಜೂನ್ 14 ರಿಂದ 27 ರವರೆಗೆ ನಡೆಯಲಿರುವ ಬಯೋ ಇಂಟರ್‌ನ್ಯಾಷನಲ್ ಕನ್ವೆನ್ಷನ್ 2025 ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಡಿಸೈನ್ ಆಟೋಮೇಷನ್ ಕಾನ್ಫರೆನ್ಸ್ನಲ್ಲಿ ಭಾಗವಹಿಸಲು ತೆರಳಬೇಕಿದ್ದು, ಇದಕ್ಕಾಗಿ ಮೇ 15 ರಂದು ನಾನು ಅನುಮತಿ ಕೋರಿದ್ದು, ಜೂನ್ 4 ರಂದು ಅರ್ಜಿ ತಿರಸ್ಕರಿಸಲಾಯಿತು ಎಂದು ಅವರು ಹೇಳಿದ್ದಾರೆ.
ಕಾರಣವಿಲ್ಲದ ತಿರಸ್ಕಾರಕ್ಕೆ ಕೇಂದ್ರದ ವಿರುದ್ಧ ಖರ್ಗೆ ಆಕ್ರೋಶ
ಈ ಬಗ್ಗೆ ಜೂನ್ 19 ರಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಖರ್ಗೆ, ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದರು. ಅಮೇರಿಕಕ್ಕೆ ನಾವು ಆಟ ಆಡಲು ಹೋಗಿರಲಿಲ್ಲ. ಕೇಂದ್ರ ಸರ್ಕಾರ ಕಾರಣವಿಲ್ಲದೆ ಅಮೇರಿಕಾ ಅನುಮತಿ ನಿರಾಕರಿಸಿದೆ. ಈ ಮೂಲಕ ಕರ್ನಾಟಕ ಅಭಿವೃದ್ದಿಗೆ ತೊಡಕಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಲಂಚದ ಆರೋಪ ಸಮರ್ಥಿಸಿದ ಬಿಆರ್ ಪಾಟೀಲ್: ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಅಕ್ರಮದ ರಹಸ್ಯ
ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ, ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯುತ್ತೇನೆ. ಏಕೆ ಅಮೆರಿಕಾ ಪ್ರವಾಸಕ್ಕೆ ತಡೆಹಿಡಿಯಲಾಯಿತು ಎಂದು ಗೊತ್ತಾಗಬೇಕು. ಸಿಎಂ ಕೂಡ ಪ್ರಧಾನಿಗೆ ಪತ್ರ ಬರೆಯುತ್ತಾರೆ ಅಂತಾ ಆಕ್ರೋಶ ಹೊರಹಾಕಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:39 pm, Sat, 21 June 25