ಕರ್ನಾಟಕದಲ್ಲಿ ಜಾನುವಾರುಗಳ ಮೇಲೆ ಕ್ರೌರ್ಯ ಹೆಚ್ಚಳ: ರಾಮನಗರದಲ್ಲಿ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಾಲಿನ ಡೈರಿ ಅಧ್ಯಕ್ಷರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿರುವಂತಹ ಘಟನೆ ನಡೆದಿದೆ. ಆ ಮೂಲಕ ಕರ್ನಾಟಕದಲ್ಲಿ ಜಾನುವಾರುಗಳ ಮೇಲಿನ ಕ್ರೌರ್ಯ ಮತ್ತೆ ಮುಂದುವರಿದಿದೆ. ಇತ್ತೀಚೆಗೆ ನಡೆದ ಇಂತಹ ಘಟನೆಗಳ ಮಾಹಿತಿ ಇಲ್ಲಿದೆ.

ರಾಮನಗರ, ಜೂನ್ 21: ಕರ್ನಾಟಕದಲ್ಲಿ (Karnataka) ಜಾನುವಾರುಗಳ ಮೇಲಿನ ಕ್ರೌರ್ಯ ಮತ್ತೆ ಮುಂದುವರಿದಿದೆ. ರಾಜ್ಯದಲ್ಲಿ ಇತ್ತೀಚೆಗೆ ಕೆಲ ಕಿಡಿಗೇಡಿಗಳು ಹಸುವಿನ (cow) ಕೆಚ್ಚಲು ಕೊಯ್ದು ಕ್ರೌರ್ಯ ಮೆರೆಯುತ್ತಿರುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಚಾಮರಾಜಪೇಟೆ, ಬಾಗಲಕೋಟೆ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಸೇರಿದಂತೆ ಕೆಲವೆಡೆ ಮೂಕ ಪ್ರಾಣಿಯ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕೌರ್ಯ ಎಸಗುತ್ತಿದ್ದಾರೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿರುವಂತಹ ಘಟನೆ ನಡೆದಿದೆ. ಹಾಲಿನ ಡೇರಿ ಅಧ್ಯಕ್ಷ ಮರಿಬಸವಯ್ಯ ಎಂಬುವರಿಗೆ ಹಸು ಸೇರಿತ್ತು.
ಇದನ್ನೂ ಓದಿ: ಚಾಮರಾಜಪೇಟೆ ಬೆನ್ನಲ್ಲೇ ಮೈಸೂರಿನಲ್ಲಿ ಕರುವಿನ ಮೇಲೆ ದಾಳಿ: ಮಾರಕಾಸ್ತ್ರದಿಂದ ಬಾಲ ತುಂಡರಿಸಿ ದುಷ್ಕರ್ಮಿಗಳು ಪರಾರಿ
ಗುರುಸಿದ್ದಪ್ಪ ಎಂಬುವರರ ಜಮೀನಿನಲ್ಲಿ ಹಸುವಿನ ಮೇಲೆ ಕೌರ್ಯ ಎಸಗಲಾಗಿದ್ದು, ಅವರ ವಿರುದ್ಧ ಹಸುವಿನ ಮಾಲೀಕ ಮರಿಬಸವಯ್ಯ ಆರೋಪ ಮಾಡಿದ್ದಾರೆ. ಈ ಹಿಂದೆ ಡೇರಿ ಅಧ್ಯಕ್ಷ ಚುನಾವಣೆ ವೇಳೆ ಮರಿಬಸವಯ್ಯ ಮತ್ತು ಗುರುಸಿದ್ದಪ್ಪ ನಡುವೆ ವೈಮನಸ್ಸು ಏರ್ಪಟ್ಟಿತು. ಹೀಗಾಗಿ ಗುರುಸಿದ್ದಪ್ಪ ವಿರುದ್ಧ ಹಸುವಿನ ಕೆಚ್ಚಲು ಕೊಯ್ದಿರುವ ಆರೋಪ ಮಾಡಲಾಗಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಘಟನೆ ನಡೆದಿದೆ.
ಕರ್ನಾಟಕದ ಹಲವೆಡೆ ಕೃತ್ಯ
- ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕಿಡಿಗೇಡಿ ಕ್ರೌರ್ಯ ಮೆರೆದ ಘಟನೆ ಜನವರಿ 12ರಂದು ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ದೂರು ಸಹ ದಾಖಲಾಗಿತ್ತು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ ಸಾಕಷ್ಟು ಸುದ್ದಿಯಾಗಿತ್ತು.
- ಬೆಂಗಳೂರಿನ ಘಟನೆ ಮಾಸುವ ಮುನ್ನವೇ ಜನವರಿ 12ರಂದು ಮೈಸೂರಿನಲ್ಲಿ ಸಹ ಮಚ್ಚಿನಿಂದ ಹಸುವಿನ ಬಾಲ ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು.
- ಇನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಹಸುವಿನ ತಲೆ ಕಡಿದು ಬಳಿಕ ಅದರ ದೇಹವನ್ನು ತೆಗೆದುಕೊಂಡು ಹೋಗಲಾಗಿತ್ತು. ಕೃಷ್ಣ ಆಚಾರಿ ಎಂಬುವವರಿಗೆ ಹಸು ಸೇರಿತ್ತು.
ಇದನ್ನೂ ಓದಿ: ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
- ಜೂನ್ 13ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ನಲ್ಲಿ ಗರ್ಭಾವಸ್ಥೆಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು. ಬರಮಪ್ಪ ಎಂಬುವರಿಗೆ ಹಸು ಸೇರಿತ್ತು. ರಕ್ತಸ್ರಾವದಿಂದ ಬಳಲಿದ್ದ ಹಸುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
- ಮೇ 13 ರಂದು ಚಿಕ್ಕಮಗಳೂರಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಹಸು ಕಳ್ಳತನ ಯತ್ನ ವಿಫಲವಾದಾಗ ರೋಷದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ಕಳ್ಳರು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಹಸು ಮೃತಪಟ್ಟಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.