ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ಎಡವಟ್ಟು ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಡೆಡ್ಲಿ ವೈರಸ್ ಅಟ್ಯಾಕ್ ಮಾಡ್ತಾ ಇದ್ರೂ ವ್ಯವಸ್ಥೆ ಬದಲಾಗಿಲ್ಲ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಯಮಯಾತನೆ ಪಡುತ್ತಿದ್ದಾರೆ. ಕೊವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ನರಕದರ್ಶನ ಆಗ್ತಿದೆಯಂತೆ. ಸೋಂಕಿತೆಯೊನ್ನರು ಕಣ್ಣೀರು ಹಾಕಿಕೊಂಡು ತಮ್ಮ ಮಗನ ಬಳಿ ನೋವು ಹಂಚಿಕೊಂಡ ಕರುಣಾಜನಕ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಮತ್ತೆ ಕೊವಿಡ್ ಆಸ್ಪತ್ರೆ ಅವ್ಯವಸ್ಥೆ ಬಟಾಬಯಲಾಗಿದೆ. ವಿಕ್ಟೋರಿಯಾದಲ್ಲಿ ಕೊರೊನಾ ಸೋಂಕಿತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಈಗಾಗಲೇ ವಿಕ್ಟೋರಿಯಾದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಸೋಂಕಿತರು ಪರದಾಡುತ್ತಿರುವ ಬಗ್ಗೆ ವರದಿ ಮಾಡಲಾಗಿದೆ. ಆದರೆ ಅಲ್ಲಿನ ಅಡಳಿತ ಮಂಡಳಿ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ತಾಯಿಯ ಕಣ್ಣೀರ ಕಥೆ
ಡಯಾಲಿಸಿಸ್ಗೆ ಅಂತ ಚಿಕಿತ್ಸೆಗೆ ಬಂದ ತುಮಕೂರು ಮೂಲದ ಮಹಿಳೆಗೆ ಕೊರೊನಾ ಅಟ್ಯಾಕ್ ಆಗಿದೆ. ಡಯಾಲಿಸಿಸ್ ಇದ್ದ ಮಹಿಳೆಗೆ 4 ದಿನ ಕಳೆದ್ರೂ ಮಾತ್ರೆ ಕೊಟ್ಟಿಲ್ಲ. 4 ದಿನಗಳ ಬಳಿಕ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಕೊವಿಡ್ ಪರೀಕ್ಷೆ ಮಾಡಿದ್ದಾರೆ. ಆಗ ಬಂದ ವರದಿಯಲ್ಲಿ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ.
ಸೋಂಕಿತೆ ತನ್ನ ಮಗನ ಬಳಿ ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ತಾಯಿ ಕಣ್ಣೀರು ಹಾಕಿದ್ದಾರೆ. ಮಗನಿಗೆ ದೂರವಾಣಿ ಕರೆ ಮಾಡಿ ನೋವು ತೋಡಿಕೊಂಡಿದ್ದಾರೆ. ನನ್ನ ಮೇಲೆ ಕೋಪಕ್ಕೆ ಇಲ್ಲಿ ತಂದು ಬಿಟ್ಟಿದ್ದೀಯಾ, ನಾನಿಲ್ಲಿ ಬದುಕಲ್ಲ.
ಕಳೆದ ನಾಲ್ಕು ದಿನಗಳಿಂದ ಒಂದೇ ಒಂದು ಮಾತ್ರೆ ಕೂಡ ಕೊಟ್ಟಿಲ್ಲ. ಕೇಳಿದ್ರೆ ಕಾಯಿಲೆ ತರಿಸಿಕೊಂಡು ಬಂದಿದ್ದೀಯಾ, ಸುಮ್ನೆ ಇರು ಅಂತಾರೆ. ನಾನು ಶೌಚಾಲಯಕ್ಕೆ ಹೋಗಿ ತಲೆ ಹೊಡೆದುಕೊಂಡು ಸತ್ತು ಹೋಗ್ತೀನಿ ಎಂದು ತುಮಕೂರು ಮೂಲದ 56 ವರ್ಷದ ಮಹಿಳೆ ಮಗನ ಬಳಿ ಕರುಣಾಜನಕ ಕಥೆಯನ್ನು ಹೇಳಿಕೊಂಡಿದ್ದಾರೆ. ನಮ್ಮ ತಾಯಿಗಾಗಿ ಇದ್ದ ಸೈಟ್ನ್ನು ಮಾರಿದ್ದೀನಿ ದಯವಿಟ್ಟು ಉಳಿಸಿಕೊಡಿ ಎಂದು ಮಗ ವೈದ್ಯರ ಬಳಿ ಮನವಿ ಮಾಡಿದ್ದಾರಂತೆ. ಆದ್ರೆ ಇಂತಹ ಪರಿಸ್ಥಿತಿ ಯಾರಿಗೂ ಬರ ಬಾರದು..
Published On - 10:27 am, Thu, 2 July 20