ಕಲಬುರಗಿ: ಆ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ತನ್ನದ ಆದ ಶ್ರೇಷ್ಠ ಕೊಡುಗೆ ನೀಡಿದೆ. ಕನ್ನಡದ ಮೊದಲ ಗ್ರಂಥ ಅಮೋಘವರ್ಷನ ಕವಿರಾಜಮಾರ್ಗ ಸೇರಿ ಅನೇಕ ಶ್ರೇಷ್ಠ ಕವಿಗಳನ್ನ, ಲೇಖಕರಿಗೆ ಜನ್ಮ ನೀಡಿದ ಭೂಮಿ. ಇಂತಹ ಮಣ್ಣಲ್ಲಿ ಇದೀಗ ಕನ್ನಡದ ನುಡಿ ಜಾತ್ರೆಯ ಸಂಭ್ರಮ ಮೇಳೈಸಿದೆ.
‘ತೊಗರಿ ಕಣಜ’ದಲ್ಲಿ ಇಂದಿನಿಂದ 3 ದಿನ ‘ನುಡಿಜಾತ್ರೆ’!
ತೊಗರಿಯ ಕಣಜ… ಬಿಸಿಲೂರು ಅನ್ನೋ ಖ್ಯಾತಿ ಪಡೆದ ಜಿಲ್ಲೆ ಕಲಬುರಗಿ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಿರುವ ಕಲಬುರಗಿ ನೆಲದಲ್ಲಿ ಇದೀಗ ನುಡಿಜಾತ್ರೆಯಲ್ಲಿ ಅಕ್ಷರಗಳ ಹಬ್ಬವೇ ಮೇಳೈಸಲಿದೆ. ಇಂದಿನಿಂದ ಮೂರು ದಿನ ಬರೀ ಕನ್ನಡದ್ದೇ ಸದ್ದು. 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರಗಿ ವೇದಿಕೆಯಾಗಿದ್ದು, ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ.
‘ನುಡಿಜಾತ್ರೆ’ಯ ಸಡಗರ:
ಇಂದು ಮುಂಜಾನೆ 8 ಗಂಟೆಗೆ ವಿವಿ ಆವರಣದಲ್ಲಿರುವ ಮುಖ್ಯ ವೇದಿಕೆ ಮುಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಪರಿಷತ್ನ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಕಲಬುರಗಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ್ಯ ವೀರಭದ್ರಪ್ಪ ಸಿಂಪಿ ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಇದಾದ ಬಳಿಕ ಬೆಳಗ್ಗೆ 8:30ಕ್ಕೆ ಸಮ್ಮೇಳನಾಧ್ಯಕ್ಷ ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿ ಅವ್ರ ಮೆರವಣಿಗೆ ನಡೆಯಲಿದೆ. ನಗರದ ಎಸ್. ಎಮ್. ಪಂಡಿತ್ ರಂಗ ಮಂದಿರದಿಂದ ವಿಶ್ವವಿದ್ಯಾಲಯದ ಮುಖ್ಯ ವೇದಿಕೆವರಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ತೊಂಬತ್ತಕ್ಕೂ ಹೆಚ್ಚು ವಿವಿಧ ಕಲಾ ತಂಡಗಳು ಭಾಗಿಯಾಗಲಿದ್ದು,ಮೆರವಣಿಗೆಯ ಗತ್ತನ್ನು ಹೆಚ್ಚಿಸಲಿವೆ.
ಬೆಳಗ್ಗೆ 11:30ಕ್ಕೆ ಮುಖ್ಯವೇದಿಕೆಯಾಗಿರುವ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಚ್ ಎಸ್ ವೆಂಕಟೇಶಮೂರ್ತಿ ಭಾಷಣ ಮಾಡಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಕಂಬಾರ ಸೇರಿ ಅನೇಕ ಸಾಹಿತಿಗಳು ಮತ್ತು ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
ಬೃಹತ್ ವೇದಿಕೆಯಲ್ಲಿ ಸಂಭ್ರಮದ ಸಾಹಿತ್ಯ ಜಾತ್ರೆ!
ಸಮ್ಮೇಳನಕ್ಕೆ ಆಗಮಿಸುವವರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ. ಇನ್ನು ಸಮ್ಮೇಳನದಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಬಿಗಿ ಪೊಲೀಸ್ ಬಂದೂಬಸ್ಥ್ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡದ ಹಬ್ಬಕ್ಕೆ ಬರೋರಿಗೆ ಭೂರಿ ಭೋಜನ ಸಜ್ಜಾಗಿವೆ. ಶೇಂಗಾ ಹೋಳಿಗೆ, ಮೈಸೂರು ಪಾಕ್, ಬೂಂದಿ ಸೇರಿ ಅನೇಕ ಸಿಹಿ ತಿನಿಸುಗಳ ಜೊತೆಗೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಶೇಂಗಾ ಹಿಂಡಿ, ಗೋದಿ ಹುಗ್ಗಿಯನ್ನ ನೀಡಲಾಗ್ತಿದೆ.
ಮೂರು ದಶಕಗಳ ನಂತರ ಕಲಬುರಗಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ತಯಾರಿ ಜೋರಾಗಿದೆ. ಎಲ್ಲಡೆ ಇದೀಗ ಸಾಹಿತ್ಯದ ಘಮ ಕಂಪು ಸೂಸುತ್ತಿದೆ. ಸಾಹಿತ್ಯಾಸಕ್ತರನ್ನು ಕಲಬುರಗಿ ಜನರು ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ. ಸಮ್ಮಳನದಲ್ಲಿ ಭಾಗಿಯಾಗಿ, ಕನ್ನಡದ ಅಸ್ಮಿತೆಯನ್ನು ಹೆಚ್ಚಿಸುವ ಕೆಲಸ ಎಲ್ಲ ಕನ್ನಡಪರ ಮನಸುಗಳಿಂದ ಆಗಬೇಕಿದೆ.
Published On - 7:38 am, Wed, 5 February 20