ಕೊರೊನಾಗೆ ಲಸಿಕೆ ಬದಲಿಗೆ ಬರಲಿದೆಯಾ ಗುಳಿಗೆ? ಚುಚ್ಚುಮದ್ದಿಗೆ ಹೆದರುವವರಿಗೆ ಇಲ್ಲಿದೆ ಸಿಹಿಸುದ್ದಿ

| Updated By: ಆಯೇಷಾ ಬಾನು

Updated on: Apr 11, 2021 | 6:32 AM

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳು ನಡೆದು ಚುಚ್ಚುಮದ್ದಿನ ಸಹಾಯವಿಲ್ಲದೇ, ಸ್ವತಂತ್ರವಾಗಿ ಕೊರೊನಾ ಗುಳಿಗೆ ತಿಂದು ಸೋಂಕನ್ನು ದೂರ ಓಡಿಸುವ ಕಾಲ ಬಂದರೂ ಬರಬಹುದು.

ಕೊರೊನಾಗೆ ಲಸಿಕೆ ಬದಲಿಗೆ ಬರಲಿದೆಯಾ ಗುಳಿಗೆ? ಚುಚ್ಚುಮದ್ದಿಗೆ ಹೆದರುವವರಿಗೆ ಇಲ್ಲಿದೆ ಸಿಹಿಸುದ್ದಿ
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)
Follow us on

ಬಿಟ್ಟರೂ ಬಿಡದ ಮಾಯೆಯಾಗಿ ಕಾಡುತ್ತಿರುವ ಕೊರೊನಾ ಸೋಂಕಿನಿಂದ ಪಾರಾಗಲು ಲಸಿಕೆ ಚುಚ್ಚಿಸಿಕೊಳ್ಳುವ ಅಭಿಯಾನ ದೇಶದೆಲ್ಲೆಡೆ ನಡೆಯುತ್ತಿದೆ. ಅತ್ತ ಲಸಿಕೆಯ ಕೊರತೆ ಉಂಟಾಗಿದೆ ಎಂಬ ಕೂಗು ಸಹ ಜೋರಾಗುತ್ತಿದೆ. ಹೀಗೆಲ್ಲ ಇರುವಾಗ ಚುಚ್ಚುಮದ್ದಿಗೆ  ಹೆದರುವ ಸಾವಿರಾರು ಜನರು ನಮ್ಮಲ್ಲಿದ್ದಾರೆ. ಚುಚ್ಚುಮದ್ದು ಚುಚ್ಚಿಸಿಕೊಂಡಾಗ ತಲೆ ತಿರುಗುವುದು, ಅಲರ್ಜಿ ಆಗುವುದು ಅಥವಾ ಇನ್ನೂ ಕೆಲ ಮಟ್ಟಿನ ತೊಂದರೆ ಉಂಟಾಗುವ ಎಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇನ್ನೂ ಎಷ್ಟೋ ಜನ ಇಂಜಕ್ಷನ್ ಅಂದರೇ ಹೆದರಿ ಕಿಲೋಮೀಟರ್ ದೂರ ಓಡುತ್ತಾರೆ. ಇಂಥ ಇಂಜಕ್ಷನ್ ಫೋಬಿಯಾ ಇರುವವರು ಕೊರೊನಾ ಲಸಿಕೆ ತೆಗೆದುಕೊಳ್ಳುವುದು ಹೇಗೆ ಎಂದು ಎಂದಾದರೂ ಯೋಚಿಸಿದ್ದೀರಾ? ಇದೋ ಕೊರೊನಾ ಲಸಿಕೆಯನ್ನು ಚುಚ್ಚುಮದ್ದು ರೂಪದಲ್ಲಿ ತೆಗೆದುಕೊಳ್ಳುವವರಿಗೆ ಎಂದೇ ಒಂದು ಶುಭಸುದ್ದಿ ಇಲ್ಲಿದೆ. ಕೊರೊನಾ ಲಸಿಕೆಯನ್ನು ಗುಳಿಗೆ ರೂಪದಲ್ಲಿ ತಯಾರಿಸಲು ಕೆಲವು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.

ಅಮೆರಿಕಾದ ಲಾಸ್ ಏಂಜಲಸ್​ನ ಡಾ.ಪ್ಯಾಟ್ರಿಯಾಕ್ ಸೂನ್ ಎಂಬುವವರು ಇಮ್ಯುನಿಟಿಬಯೋ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಅವರದ್ದೊಂದು ಲ್ಯಾಬ್ ಇದೆ. ಇದೇ ಲ್ಯಾಬ್​ನಲ್ಲಿ ಕೊರೊನಾ ಲಸಿಕೆಯನ್ನು ಗುಳಿಗೆ ರೂಪದಲ್ಲಿ ತರಲು ಪ್ರಯೋಗ ಮಾಡುತ್ತಿದ್ದಾರೆ ಡಾ.ಪ್ಯಾಟ್ರಿಯಾಕ್. ಕೊರೊನಾ ಲಸಿಕೆಯ ಜತೆಗೆ ಕೊರೊನಾ ಗುಳಿಗೆಯನ್ನು ಸಹ ಹೊರತರಲು ಈ ಸಂಸ್ಥೆ ಪ್ರಯತ್ನಿಸುತ್ತಿದೆ.

ಕೊರೊನಾ ಲಸಿಕೆ ಜತೆಗೆ ಗುಳಿಗೆ ಸೇವಿಸಿದರೆ ಮಾತ್ರ ಈ ಪ್ರಯತ್ನ ಫಲಿಸುತ್ತದೆ ಎಂದು ಸಂಸ್ಥೆ ಹೇಳಿದೆ. ಸದ್ಯ ತಾನು ಕಂಡುಹಿಡಿದಿರುವ ಕೊರೊನಾ ಗುಳಿಗೆ ಜತೆಗೆ ಕೊರೊನಾ ಲಸಿಕೆ ಅಥವಾ ಚುಚ್ಚುಮದ್ದನ್ನೂ ತೆಗೆದುಕೊಳ್ಳಬೇಕು ಎಂದು ಸಂಸ್ಥೆ ಹೇಳಿದೆ. ಲಸಿಕೆ ಚುಚ್ಚಿಸಿಕೊಂಡು ಗುಳಿಗೆ ತಿಂದರೆ ಮಾತ್ರ ಕೊರೊನಾದಿಂದ ದೂರ ಇರಬಹುದು ಎಂದು ಸಂಸ್ಥೆ ತಿಳಿಸಿದೆ.

ಆದರೆ ಸದ್ಯದ ಸಂಶೋಧನೆಗಳ ಪ್ರಕಾರ ಈ ಗುಳಿಗೆ ಸ್ವತಂತ್ರವಾಗಿ ಕೊರೊನಾವನ್ನು ದೂರ ಮಾಡುವುದಿಲ್ಲ. ಲಸಿಕೆಯನ್ನೂ ಚುಚ್ಚಿಸಿಕೊಳ್ಳಲೇಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳು ನಡೆದು ಚುಚ್ಚುಮದ್ದಿನ ಸಹಾಯವಿಲ್ಲದೇ, ಸ್ವತಂತ್ರವಾಗಿ ಕೊರೊನಾ ಗುಳಿಗೆ ತಿಂದು ಸೋಂಕನ್ನು ದೂರ ಓಡಿಸುವ ಕಾಲ ಬಂದರೂ ಬರಬಹುದು. ಹಾಗೇನಾದರೂ ಆದಲ್ಲಿ ಚುಚ್ಚಿಸಿಕೊಳ್ಳುವ ಭಯ ಇದ್ದವರೂ ಸಹ ಕೊರೊನಾ ಲಸಿಕೆ  ಪಡೆಯಬಹುದು.

ಒಂದು ವೇಳೆ ಕೊರೊನಾಗೆ ಗುಳಿಗೆ ಏನಾದರೂ ಬಂದಿದ್ಧೇ ಹೌದಾದಲ್ಲಿ ಲಸಿಕೆಯಂತೆ ಶೀತಲ ವಾತಾವರಣದಲ್ಲಿ ಉಳಿಸಿಕೊಳ್ಳಬೇಕೆಂಬ ಕೆಲಸ ಇರುವುದಿಲ್ಲ. ಮತ್ತು ಇನ್ನೂ ಹೆಚ್ಚಿನ ಜನರಿಗೆ ಕೊರೊನಾ ಗುಳಿಗೆಗಳನ್ನು ಸುಲಭವಾಗಿ ತಲುಪಿಸಬಹುದು. ಆದರೆ ಯಾವಾಗ ಎಂದು ಕೊರೊನಾ ಗುಳಿಗೆ ಬರುತ್ತದೆ ಎಂಬುದಂತೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆಶಾವಾದದಿಂದ ಕಾದುನೋಡುವುದೊಂದೇ ನಮ್ಮ ಮುಂದಿರುವ ದಾರಿ.

ಇದನ್ನೂ ಓದಿ: ಮುಂದಿನ ಮೂರು ದಿನಗಳ ಕಾಲ ಯಾವುದೇ ರಾಜಕಾರಣಿಯೂ ಕೂಚ್ ಬಿಹಾರ್ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ; ಚುನಾವಣಾ ಆಯೋಗ

Karnataka Coronavirus Update: ಕರ್ನಾಟಕದಲ್ಲಿ ಇಂದು 6,955 ಜನರಿಗೆ ಕೊರೊನಾ ದೃಢ; 36 ಜನರು ಸಾವು