ಕೊಲ್ಕತ್ತಾ ನೈಟ್ ರೈಡರ್ಸ್ ಟೀಮಿನ ಎಕ್ಸ್-ಫ್ಯಾಕ್ಟರ್ ಆಂದ್ರೆ ರಸ್ಸೆಲ್ ಕೈಯಲ್ಲಿ ಬ್ಯಾಟ್ ಹಿಡಿದು ಕ್ರೀಸಿನೆಡೆ ನಡೆದು ಬರುವ ದೃಶ್ಯ, ಬೌಲರ್ನೊಬ್ಬನ ಖ್ಯಾತಿ ಏನೇ ಆಗಿರಲಿ, ಭೀತಿ ಹುಟ್ಟಿಸೋದು ಮಾತ್ರ ನಿಶ್ಚಿತ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಾಡುವ ಹಲವಾರು ಬೌಲರ್ಗಳಿಗೆ ಅವರು ದುಸ್ವಪ್ನವಾಗಿ ಕಾಡಿದ್ದಾರೆ. ಚೆಂಡಿರೋದೆ ಚಚ್ಚೋದಿಕ್ಕೆ ಅನ್ನುವ ತತ್ವದಲ್ಲಿ ನಂಬಿಕೆಯಿರುವ ಆಟಗಾರ ರಸ್ಸೆಲ್. ಅವರ ಬಗ್ಗೆ ಮಾತಾಡುವ ಮೊದಲು 2019ರಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ಗಳನ್ನು ಹೇಗೆ ಚಚ್ಚಿದರು ಅನ್ನೋದನ್ನು ಮೆಲುಕು ಹಾಕುವ. ಓದುಗರಿಗೂ ಆ ಪಂದ್ಯ ಚೆನ್ನಾಗಿ ನೆನೆಪಿರಬಹುದು. ವಿರಾಟ್ ಕೊಹ್ಲಿ ಪಡೆಯ ಕೈಯಲ್ಲಿದ್ದ ಗೆಲುವನ್ನು ರಸ್ಸೆಲ್ ಆಕ್ಷರಶ: ಕಿತ್ತುಕೊಂಡರು. ಅವರ ಪವರ್-ಹಿಟ್ಟಿಂಗ್ ಇತರ ಬ್ಯಾಟ್ಸ್ಮನ್ಗಳ ಎಣಿಕೆ ನಿಲುಕದಂಥದ್ದು.
ಅವತ್ತು ಆಗಿದ್ದೇನು? ಓಕೆ, ಪಂದ್ಯದ 37.2 ಓವರ್ಗಳವರೆಗೆ ಕೆಕೆಆರ್ ತಂಡಕ್ಕೆ ರಸ್ಸೆಲ್ ಅವರ ಕಾಂಟ್ರಿಬ್ಯೂಷನ್ ಏನೆಂದರೆ ಏನೂ ಇರಲಿಲ್ಲ. ಟೀಮ್ ಫೀಲ್ಡಿಂಗ್ ಮಾಡುವಾಗ ಅವರು ಇಂದು ಓವರ್ ಬೌಲ್ ಮಾಡಿ ಅದರಲ್ಲಿ 16 ರನ್ ನೀಡಿದರು. ಆರ್ಸಿಬಿ ಟೀಮಿನ ಎಬಿ ಡಿ ವಿಲಿಯರ್ಸ್ ಅ ಓವರ್ನಲ್ಲಿ ಎರಡು ಸಿಕ್ಸ್ ಬಾರಿಸಿದರು. ಟೀಮಿನ ನಾಯಕ ದಿನೇಶ್ ಕಾರ್ತೀಕ್ ಪುನಃ ಅವರಿಗೆ ಬೌಲ್ ಮಾಡಲು ಕರೆಯಲಿಲ್ಲ. ಹಾಗಾಗಿ ಈ ವಿಭಾಗದಲ್ಲಿ ಅವರ ಕೊಡುಗೆ ಜಿರೊ.
ಓಕೆ, ಅವರು ಬ್ಯಾಟ್ ಮಾಡಲು ಬಂದಾಗ ಆಸ್ಕಿಂಗ್ ರೇಟ್ ಪ್ರತಿ ಓವರ್ಗೆ 20 ರಷ್ಟಿತ್ತು. ಕೊನೆಯ ಮೂರು ಓವರ್ಗಳಲ್ಲಿ ಕೆಕೆಆರ್ಗೆ 51 ರನ್ ಬೇಕಿತ್ತು. ಕೊಹ್ಲಿ ಮತ್ತು ಆರ್ಸಿಬಿ ಪಂದ್ಯವನ್ನು ಗೆದ್ದಿರುವ ಹಾಗೆ ಬೀಗುತ್ತಿದ್ದರು. ಯಾಕೆಂದರೆ, ತಾನೆದುರಿಸಿದ ಮೊದಲ4 ಎಸೆತಗಳಲ್ಲಿ ಕೇವಲ1 ರನ್ ಮಾತ್ರ ಗಳಿಸಲು ಸಮರ್ಥರಾಗಿದ್ದ ರಸ್ಸೆಲ್ ತಮ್ಮ ಗೆಲುವಿಗೆ ಅಡ್ಡಿಯಾಗಲಾರರು ಅಂತ ಅವರು ಅಂದುಕೊಂಡಿದ್ದರು. ಆದರೆ ರಸ್ಸೆಲ್ರನ್ನು ಅಂಡರ್ ಎಸ್ಟಿಮೇಟ್ ಮಾಡುವುದು ಸರ್ವಥಾ ತಪ್ಪು ಅನ್ನೋದು ಅವರಿಗೆ ಪಂದ್ಯದ ನಂತರ ಗೊತ್ತಾಯಿತು.
ಮೊದಲ 4 ಎಸೆತಗಳಲ್ಲಿ 1 ರನ್ ಗಳಿಸಿದ್ದ ರಸ್ಸೆಲ್ ಮುಂದಿನ 9 ಎಸೆತಗಳಲ್ಲಿ 47 ರನ್ ಬಾರಿಸಿ ಇನ್ನೂ 5 ಎಸೆತಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಿಬಿಟ್ಟರು. ಆ 9 ಎಸೆತಗಳಲ್ಲಿ ಅವರು 7 ಬಾರಿ ಚೆಂಡನ್ನು ಮೈದಾನದಾಚೆ ಕಳಿಸಿದರು! ಅವರ ಸ್ಟ್ರೈಕ್ರೇಟ್ 300ಕ್ಕಿಂತ ಜಾಸ್ತಿ!
ಆ ಸೀಸನ್ನಲ್ಲಿ ರಸ್ಸೆಲ್ 204.81 ಸ್ಟ್ರೈಕ್ರೇಟ್ನೊಂದಿಗೆ 510 ರನ್ ಚಚ್ಚಿದರು. ಇದುವರೆಗಿನ ಐಪಿಲ್ ಸೀಸನ್ಗಳಲ್ಲಿ ಯಾವೊಬ್ಬ ಬ್ಯಾಟ್ಸ್ಮನ್ಗೂ 500 ರನ್ ಮಾತು ಹಾಗಿರಲಿ, 200 ರನ್ ಸಹ 200ರ ಸ್ಟ್ರೈಕ್ರೇಟ್ನಲ್ಲಿ ಗಳಿಸಲು ಸಾಧ್ಯವಾಗಿಲ್ಲ.
2019ರ ಸೀಸನ್ ಪಂದ್ಯಗಳ19 ನೇ ಓವರ್ಗಳಲ್ಲಿ ಅವರು 118 ರನ್ಗಳನ್ನು 302.56 ಸ್ಟ್ರೈಕ್ರೇಟ್ನಲ್ಲಿ ಬಾರಿಸಿದರು. 18ನೇ ಓವರ್ಗಳಲ್ಲಿ ಅವರ ಸ್ಟ್ರೈಕ್ರೇಟ್ ಇನ್ನೂ ಉತ್ತಮವಾಗಿದೆ. 36 ಎಸೆತಗಳಲ್ಲಿ 110 ರನ್ 305.55 ಸ್ಟ್ರೈಕ್ರೇಟ್!
32 ವರ್ಷ ವಯಸ್ಸಿನ ರಸ್ಸೆಲ್ ಅವರನ್ನು ಶಾರೂಖ್ ಖಾನ್ 8.5 ಕೋಟಿ ರೂಪಾಯಿ ನೀಡಿ ಖರೀದಿಸಿದ್ದು ಉತ್ಪ್ರೇಕ್ಷೆ ಅನಿಸುತ್ತದೆಯೇ? ಖಂಡಿತ ಇಲ್ಲ. ಕೆಕೆಆರ್ ರಸ್ಸೆಲ್ರನ್ನು ರಿಲೀಸ್ ಮಾಡಿದರೆ ಬೇರೆ ಫ್ರಾಂಚೈಸಿಗಳು 20 ಕೋಟಿಗಿಂತ ಜಾಸ್ತಿ ಹಣ ನಿಡಲು ತಯಾರಿದ್ದಾರೆ. ಅವರ ಖ್ಯಾತಿ ಹಾಗಿದೆ. ಕ್ರಿಕೆಟ್ ಬಾಲನ್ನು ರಸ್ಸೆಲ್ ಅವರಷ್ಟು ಭೀಕರವಾಗಿ, ಶಕ್ತಿಶಾಲಿಯಾಗಿ, ನಿರ್ದಯತೆಯಿಂದ ಚಚ್ಚುವವರು ಬೇರೆ ಯಾರೂ ಇಲ್ಲ, ಅವರ ದೇಶದವರೇ ಆಗಿರುವ (ಜಮೈಕ) ಆಗಿರುವ ಕ್ರಿಸ್ ಗೇಲ್ ಸಹ ಅಂಥ ಪಾಶವೀ ಶಕ್ತಿಯೊಂದಿಗೆ ಚೆಂಡನ್ನು ಬಾರಿಸಲಾರರು.
ಅವರ ಬಗ್ಗೆ ಮತ್ತೊಂದು ಕುತೂಹಲಕಾರಿ ಸಂಗತಿ ನಿಮಗೆ ಗೊತ್ತಾ? ಐಪಿಎಲ್ನಲ್ಲಿ ಅವರು ಫೋರ್ಗಳಿಗಿಂತ ಜಾಸ್ತಿ ಸಿಕ್ಸ್ಗಳನ್ನು ಬಾರಿಸಿದ್ದಾರೆ. ಆವರ ಬ್ಯಾಟ್ನಿಂದ 105 ಬೌಂಡರಿಗಳು ಬಂದಿದ್ದರೆ 129 ಸಿಕ್ಸ್ಗಳು ಸಿಡಿದಿವೆ. 2012ರಿಂದ ಐಪಿಎಲ್ ಆಡುತ್ತಿರುವ ರಸ್ಸೆಲ್ ಇದುವರೆಗೆ ಒಟ್ಟು 74 ಪಂದ್ಯಗಳನಾಡಿದ್ದು ಅಜೇಯ 88 ರನ್ಗಳ ಗರಿಷ್ಠ ಸ್ಕೋರಿನೊಂದಿಗೆ 29.74 ಸರಾಸರಿಯಲ್ಲಿ 1,517 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ರೇಟ್ 182.33 ಅಗಿದೆ ಮತ್ತು 8 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ, 28.08 ಸರಾಸರಿಯಲ್ಲಿ 61 ವಿಕೆಟ್ಗಳನ್ನು ರಸ್ಸೆಲ್ ಪಡೆದಿದ್ದು 8.96 ಅವರ ಎಕಾನಮಿ ರೇಟ್ ಆಗಿದೆ.
2021 ರ ಸೀಸನ್ನಲ್ಲೂ ಅವರ ಬ್ಯಾಟ್ ಚಮಾತ್ಕಾರ ಮಾಡುವುದನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: IPL 2021: ಮುಂಬೈ ಇಂಡಿಯನ್ಸ್ ಟೀಮಿನ ಆರಂಭಿಕ ಜೋಡಿ ವಿಧ್ವಂಸಕವಾಗಿದೆ: ಆಕಾಶ್ ಚೋಪ್ರಾ