Jos Buttler IPL 2021 RR Team Player: ಐಪಿಎಲ್ ಇತಿಹಾಸದಲ್ಲಿ ಸತತ 5 ಅರ್ಧ ಶತಕಗಳನ್ನು ಬಾರಿಸಿದ ಎರಡನೇ ಆಟಗಾರ
ಬಟ್ಲರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದು ನಿಜವಾದರೂ ಅದನ್ನು ಖಾಯಂಗೊಳಿಸಿಕೊಳ್ಳಲು ವಿಫಲರಾದರು. ಆದರೆ ಶ್ರೀಲಂಂಕಾದ ವಿರುದ್ಧ ಅವರು 61-ಎಸೆತಗಳಲ್ಲಿ ಶತಕ ಬಾರಿಸಿದಾಗ ಅವರ ಪವರ್-ಹಿಟ್ಟಿಂಗ್ ಸಾಮರ್ಥ್ಯ ಅನಾವರಣಗೊಂಡಿತು.

ಇಂಗ್ಲೆಂಡ್ನಲ್ಲಿ ಅತ್ಯುತ್ತಮ ಕ್ರಿಕೆಟಿಂಗ್ ವ್ಯವಸ್ಥೆಯಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಇಂಗ್ಲಿಷ್ ಕೌಂಟಿ ಕ್ರಿಕೆಟ್ ಮತ್ತು ಸಂಡೇ ಲೀಗ್ ಹಲವಾರು ಪ್ರತಿಭಾವಂತ ಆಟಗಾರರನ್ನು ಪ್ರತಿವರ್ಷ ರಾಷ್ಟ್ರೀಯ ತಂಡಕ್ಕೆ ನೀಡುತ್ತವೆ. ಈ ಟೂರ್ನಿಗಳಲ್ಲಿ ಬೇರೆ ದೇಶದ ಆಟಗಾರರು ಸಹ ಆಡುತ್ತಾರೆ. ಈಗ ಪ್ರತಿ ಕ್ರಿಕೆಟಿಂಗ್ ರಾಷ್ಟ್ರ ತನ್ನದೇ ಆದ ಕ್ರಿಕೆಟ್ ಟೂರ್ನಿಗಳನ್ನು ಹೊಂದಿರುವುದರಿಂದ ಮತ್ತು ಟಿ20 ಕ್ರಿಕೆಟ್ ಅಬ್ಬರ ಎಲ್ಲೆಡೆ ಹಬ್ಬಿರುವುದರಿಂದ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಬಗ್ಗೆ ಹೆಚ್ಚು ಸುದ್ದಿಗಳು ಕೇಳಿಬರುತ್ತಿಲ್ಲ. ಆದರೆ, ಅವು ಎಂದಿನಂತೆ ನಡೆಯುತ್ತಿವೆ. ಈ ಕೌಂಟಿ ಕ್ರಿಕೆಟ್ ಹೊರಹಾಕಿದ ಒಂದು ಉಜ್ವಲ ಪ್ರತಿಭೆಯೆಂದರೆ ಜೊಸೆಫ್ ಬಟ್ಲರ್ ಅಥವಾ ನಾವೆಲ್ಲ ಕರೆಯುವ ಹಾಗೆ ಜೊಸ್ ಬಟ್ಲರ್
2010ರಲ್ಲಿ 19ವರ್ಷದ ಯುವಕನಾಗಿದ್ದ ಬಟ್ಲರ್, ಇಂಗ್ಲಿಷ್ ಕೌಂಟಿ ಸಾಮರ್ಸೆಟ್ ಪರ ಆಡುತ್ತಾ 40-ಓವರ್ಗಳ ಡೊಮೆಸ್ಟಿಕ್ ಸೀಸನಲ್ಲಿ 55 ರನ್ ಸರಾಸರಿಯೊಂದಿಗೆ 440 ರನ್ ಬಾರಿಸಿದರು. ಆ ಸೀಸನ್ನಲ್ಲಿ ಅವರು ತೋರಿದ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ವಿಸ್ಡನ್ ಸ್ಕೂಲ್ ಕ್ರಿಕೆಟರ್ ಆಫ್ ದಿ ಈಯರ್ ಪ್ರಶಸ್ತಿಗೆ ಪಾತ್ರರನ್ನಾಗಿ ಮಾಡಿತು.
ಹಾಗೆ ನೋಡಿದರೆ, ಪ್ರಥಮ ದರ್ಜೆ ಪಂದ್ಯಗಳಲ್ಲಿ ಬಟ್ಲರ್ ಅವರ ಸಾಧನೆ ಹೇಳಿಕೊಳ್ಳುವಂಥದ್ದೇನೂ ಅಗಿಲ್ಲ. ಅದರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅವರು ಚಾಂಪಿಯನ್ ಬ್ಯಾಟ್ಸ್ಮನ್ನಂತೆ ಆಡುತ್ತಾರೆ. ಲಂಕಾಶೈರ್ ವಿರುದ್ಧ ಆಡಿದ ತಮ್ಮ ಮೊದಲ ಪ್ರಥಮ ದರ್ಜೆಯ ಪಂದ್ಯದಲ್ಲಿ ಅವರು 30 ರನ್ ಗಳಿಸಿದರಾದರೂ ನಂತರ ಆಡಿದ ಪಂದ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡಲಿಲ್ಲ.
ಉತ್ತಮ ವಿಕೆಟ್-ಕೀಪರ್ ಸಹ ಆಗಿರುವ ಬಟ್ಲರ್ 2009-10 ಸಾಲಿನಲ್ಲಿ ಇಂಗ್ಲೆಂಡ್ ಅಂಡರ್-19 ತಂಡಕ್ಕೆ ಆಯ್ಕೆಯಾಗಿ ಬಾಂಗ್ಲಾದೇಶದ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದರು. ಮರುವರ್ಷ ಅಂದರೆ 2011ರಲ್ಲಿ ಅವರಿಗೆ ಭಾರತದ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ನಡೆದ ಏಕೈಕ ಟಿ20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಮನ್ನು ಪ್ರತಿನಿಧಿಸಲು ಬುಲಾವ್ ಬಂದಾಗ ಖುದ್ದು ಬಟ್ಲರ್ ಅವರೇ ಆಶ್ಚರ್ಯಚಕಿತರಾಗಿದ್ದರು. ಅದಾದ ಒಂದು ವರ್ಷದ ನಂತರ ಅವರು ದುಬೈನಲ್ಲಿ ಪಾಕಿಸ್ತಾನದ ವಿರುದ್ಧಒಂದು ದಿನದ ಪಂದ್ಯಗಳಿಗೂ ಪದಾರ್ಪಣೆ ಮಾಡಿದರು.

ರಾಜಸ್ತಾನ ರಾಯಲ್ಸ್ ಲೊಗೊ
ಬಟ್ಲರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದು ನಿಜವಾದರೂ ಅದನ್ನು ಖಾಯಂಗೊಳಿಸಿಕೊಳ್ಳಲು ವಿಫಲರಾದರು. ಆದರೆ ಶ್ರೀಲಂಂಕಾದ ವಿರುದ್ಧ ಅವರು 61-ಎಸೆತಗಳಲ್ಲಿ ಶತಕ ಬಾರಿಸಿದಾಗ ಅವರ ಪವರ್-ಹಿಟ್ಟಿಂಗ್ ಸಾಮರ್ಥ್ಯ ಅನಾವರಣಗೊಂಡಿತು. ಒಂದು ದಿನದ ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ದಾಖಲಾದ ಅತಿ ವೇಗದ ಶತಕ ಅದಾಗಿತ್ತು. ಅವರ ಸ್ಟ್ರೋಕ್ ಪ್ಲೇ ಕಂಡು ಶ್ರೀಲಂಕಾದ ಬೌಲರ್ಗಳು ಹೌಹಾರಿದರೆ, ಇಂಗ್ಲಿಷ್ ಕ್ರಿಕೆಟ್ ಪ್ರೇಮಿಗಳು ನಿಬ್ಬೆರಗಾದರು. 2015ರಲ್ಲಿ ಬಟ್ಲರ್ ಪಾಕಿಸ್ತಾನದ ವಿರುದ್ಧ ಕೇವಲ 46ಎಸೆತಗಳಲ್ಲಿ ಶತಕ ಬಾರಿಸಿ ತನ್ನ ದಾಖಲೆಯನ್ನು ತಾನೇ ಉತ್ತಮಪಡಿಸಿಕೊಂಡರು.
ನಂತರ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬಟ್ಲರ್ 85 ರನ್ಗಳ ಇನ್ನಿಂಗ್ಸ್ ಆಡಿ ತಾನು ಕ್ರೀಡೆಯ ಸಾಂಪ್ರದಾಯಿಕ ಆವೃತ್ತಿಗೂ ಸೈ ಅನ್ನುವುದನ್ನು ಸಾಬೀತು ಮಾಡಿದರು. 2015 ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಕಳಪೆ ಪ್ರದರ್ಶನ ನೀಡಿದ ನಂತರ ಬಟ್ಲರ್ ಸಹ ಫಾರ್ಮ್ ಕಳೆದುಕೊಂಡರು.
ಆದರೆ, ಕೆಲವೇ ತಿಂಗಳುಗಳಲ್ಲಿ ತಮ್ಮ ಸ್ಪರ್ಶವನ್ನು ಪುನಃ ಕಂಡುಕೊಂಡ ಬಟ್ಲರ್ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ತಂಡದ ಅವಿಭಾಜ್ಯ ಅಂಗವಾದರು. ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರಾಂಚೈಸಿಗಳು ಬಟ್ಲರ್ ಅವರ ಮೇಲೆ ಕಣ್ಣಿಟಿದ್ದವು. 2016ರಲ್ಲಿ ಮುಂಬೈ ಇಂಡಿಯನ್ಸ್ ಬಟ್ಲರ್ ಅವರನ್ನು ರೂ. 3.8 ಕೋಟಿಗಳಿಗೆ ಖರೀದಿಸಿತು. ಅಂಬಾನಿಗಳ ತಂಡಕ್ಕೆ ಆಡಿದ ಎರಡು ಸೀಸನ್ಗಳಲ್ಲಿ ಅವರಿಂದ ಮೈದಾನಕ್ಕೆ ಕಿಚ್ಚು ಹಚ್ಚುವಂಥ ಪ್ರದರ್ಶನಗಳು ಬರಲಿಲ್ಲವಾದರೂ ಉಪಯುಕ್ತ ಕಾಣಿಕೆಗಳನ್ನು ನೀಡಿದರು.
2018ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ತಾನ ರಾಯಲ್ಸ್ 4.4 ಕೋಟಿ ರೂಪಾಯಿಗಳಿಗೆ ಅವರನ್ನು ಖರೀದಿಸಿತು. ಈ ತಂಡಕ್ಕೆ ಆಡಿದ ಮೊದಲ ಸೀಸನ್ನಲ್ಲಿ ಅವರಿಂದ ಉತ್ತಮ ಪ್ರದರ್ಶನಗಳು ಬರಲಿಲ್ಲ. ಆದರೆ ಅವರನ್ನು ಇನ್ನಿಂಗ್ಸ್ ಆರಂಭಿಸಲು ನಿರ್ಧಾರ ರಾಜಸ್ತಾನ ತಂಡದ ಮ್ಯಾನೇಜ್ಮೆಂಟ್ ತೆಗೆದುಕೊಂಡಾಗ ಸನ್ನಿವೇಶವೇ ಬದಲಾಯಿತು. ಐಪಿಎಲ್ ಇತಿಹಾಸದಲ್ಲಿ ಸತತವಾಗಿ 5 ಅರ್ಧ ಶತಕಗಳನ್ನು ಬಾರಿಸಿದ ಕೇವಲ ಎರಡನೇ ಆಟಗಾರನೆಂಬ ಹಿರಿಮೆಗೆ ಅವರು ಪಾತ್ರರಾದರು.
ಐಪಿಎಲ್ನಲ್ಲಿ ಬಟ್ಲರ್ ಕಂಡ ಯಶವನ್ನು ಗಮನಿಸಿದ ಇಂಗ್ಲಿಷ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಪುನಃ ಅವಕಾಶ ಕಲ್ಪಿಸಿತು. ಕಳೆದ ವರ್ಷ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತೋರಿದ ಉತ್ತಮ ಬ್ಯಾಟಿಂಗ್ ಪ್ರದರ್ಶನಗಳು ಟೆಸ್ಟ್ ತಂಡದಲ್ಲೂ ಸ್ಥಾನ ಭದ್ರಪಡಿಸಿಕೊಳ್ಳಲು ನೆರವಾದವು.
2016 ಮುಂಬೈ ಇಂಡಿಯನ್ಸ್ ಪರ 14 ಪಂದ್ಯಗಳನ್ನಾಡಿದ ಬಟ್ಲರ್ 23.18 ಸರಾಸರಿಯಲ್ಲಿ 255 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 138 ಮತ್ತು ಅತ್ಯಧಿಕ ಸ್ಕೋರ್ 41 ಆಗಿತ್ತು. 2017ರಲ್ಲಿ ಅದೇ ತಂಡಕ್ಕೆ ಅವರ ಆಡಿದ್ದು 10 ಪಂದ್ಯಗಳು, 272 ರನ್, 77 ಗರಿಷ್ಠ ಸ್ಕೋರ್, ಸರಾಸರಿ 27.20 ಮತ್ತು ಸ್ಟ್ರೈಕ್ ರೇಟ್ 153.67.
2018ರಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡಲಾರಂಭಿಸಿದ ಬಟ್ಲರ್ ಆ ಸೀಸನ್ನಲ್ಲಿ 13 ಪಂದ್ಯಗಳನ್ನಾಡಿ ಅಜೇಯ 95 ಅತ್ಯಧಿಕ ಸ್ಕೊರ್ನೊಂದಿಗೆ 548 ರನ್ ಕಲೆಹಾಕಿದರು. ಅವರ ಸರಾಸರಿ 54.80 ಮತ್ತು ಸ್ಟ್ರೈಕ್ ರೇಟ್ 155.70 ಆಗಿತ್ತು. 2019ರಲ್ಲಿ ಅವರು 8 ಪಂದ್ಯಗಳನ್ನಾಡಿ 89 ಗರಿಷ್ಠ ಸ್ಕೋರ್ನೊಂದಿಗೆ 311 ರನ್ ಗಳಿಸಿದರು. ಆಗ ಸರಾಸರಿ 34.87 ಮತ್ತು ಸ್ಟ್ರೈಕ್ ರೇಟ್ 151.70 ಆಗಿತ್ತು.
ಕಳೆದ ವರ್ಷದ ಸೀಸನಲ್ಲಿ ಬಟ್ಲರ್ 12 ಪಂದ್ಯಗಳನ್ನು ಆಡಿ 70 ರನ್ ಗರಿಷ್ಠ ಸ್ಕೋರ್ನೊಂದಿಗೆ 328 ರನ್ ಬಾರಿಸುವ ಮೂಲಕ ಸರಾಸರಿ 34.92 ಮತ್ತು ಸ್ಟ್ರೈಕ್ ರೇಟ್ 144.49 ದಾಖಲಿಸಿದ್ದರು.
ಇದುವರೆಗೆ ಆಡಿರುವ ಒಟ್ಟು 58 ಪಂದ್ಯಗಳಿಂದ ಬಟ್ಲರ್ ಆರೋಗ್ಯಕರ ರೀತಿಯಲ್ಲಿ 34.82 ಸರಾಸರಿಯಲ್ಲಿ 1,714 ರನ್ ಗಳಿಸಿದ್ದು ಅಜೇಯ 95 ಅತ್ಯಧಿಕ ಸ್ಕೋರ್ ಆಗಿದೆ. 11 ಅರ್ಧ ಶತಕಗಳನ್ನು ಬಾರಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 149.56 ಆಗಿದೆ.
ಇದನ್ನೂ ಓದಿ: IPL 2021: ಚೇತೇಶ್ವರ್ ಪೂಜಾರಾ ಬ್ಯಾಟ್ನಿಂದ ಸಿಡಿಯುತ್ತಿವೆ ಸಿಕ್ಸರ್ ಮೇಲೆ ಸಿಕ್ಸರ್ಗಳು!
ಇದನ್ನೂ ಓದಿ: IPL 2021: ಮುಂಬೈ ಇಂಡಿಯನ್ಸ್ ಟೀಮಿನ ಆರಂಭಿಕ ಜೋಡಿ ವಿಧ್ವಂಸಕವಾಗಿದೆ: ಆಕಾಶ್ ಚೋಪ್ರಾ