ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆ ಇಂದು ಮಂಗಳೂರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಪೊಲೀಸರ ಫೈರಿಂಗ್ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರ ಜೊತೆ ಸುಮಾರು ಅರ್ಧಗಂಟೆ ಚರ್ಚೆ ಮಾಡಿ ಸಮಸ್ಯೆ ಆಲಿಸಿದ್ದೇನೆ. ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಎಸ್ವೈ ಹೇಳಿದರು.
ಮ.3ರಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಕೆ:
ಜಿಲ್ಲೆಯ ಮುಖಂಡರ ಜತೆಯೂ ಅರ್ಧ ಗಂಟೆ ಕಾಲ ಚರ್ಚೆ ಮಾಡಿದ್ದೇನೆ. ಅವರೂ ಸಹ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂಗಳೂರಿನಲ್ಲಿ ಕರ್ಫ್ಯೂ ತೆಗೆಯುವಂತೆ ತಿಳಿಸಿದ್ದಾರೆ. ಮಧ್ಯಾಹ್ನ 3ರಿಂದ 6ರವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗುವುದು. ರಾತ್ರಿ ವೇಳೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮತ್ತೆ ನಾಳೆ ಹಗಲು ಹೊತ್ತಿನಲ್ಲಿ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ. ಸೋಮವಾರವೂ ಕರ್ಫ್ಯೂ ಇರುವುದಿಲ್ಲ. ಕ್ರಿಸ್ಮಸ್ಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ನಮ್ಮ ಸರ್ಕಾರ ಭೇದ ಭಾವ ಮಾಡಲ್ಲ:
ಕೇರಳದಿಂದ ಬಂದ ಪತ್ರಕರ್ತರ ಬಳಿ ಐಡಿ ಕಾರ್ಡ್ ಇರಲಿಲ್ಲ. ಅದರ ಬಗ್ಗೆ ತನಿಖೆ ನಡೆಸುವಂತೆಯೂ ತಿಳಿಸಲಾಗಿದೆ. ಇಂತಹ ಘಟನೆ ನಡೆದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಬಗ್ಗೆ ನನಗೆ ಸಮಾಧಾನವಿಲ್ಲ. ದಯಮಾಡಿ ಎಲ್ಲರೂ ಶಾಂತಿಯನ್ನು ಕಾಪಾಡಿ. ನಮ್ಮ ಸರ್ಕಾರಕ್ಕೆ ಯಾವುದೇ ರೀತಿಯ ಭೇದ ಭಾವವಿಲ್ಲ. ಈ ಹಿಂದೆಯೂ ಭೇದಭಾವ ಮಾಡಿಲ್ಲ, ಈಗಲೂ ಮಾಡ್ತಿಲ್ಲ. ಮುಂದೆಯೂ ನಾವು ಭೇದಭಾವ ಮಾಡುವುದಿಲ್ಲ. ಎಲ್ಲಾ ಧರ್ಮಗಳನ್ನು ಒಂದೇ ರೀತಿಯಲ್ಲಿ ಕಾಣುತ್ತೇವೆ ಎಂದರು.