ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೀನ್ ಅಭಿಮಾನಿಗಳಿಗೆ ಒಂದು ನಿರಾಶಾದಾಯಕ ಸುದ್ದಿ. ಭಯಂಕರ ವೇಗ ಮತ್ತು ನಿಖರತೆಯಿದ ಬೌಲರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸ್ಟೀನ್ ಈ ವರ್ಷ ನಡೆಯುವ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಆಡುವುದಿಲ್ಲ.
ಸರಣಿ ಟ್ವೀಟ್ಗಳ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿರುವ 37ರ ಪ್ರಾಯದ ಸ್ಟೀನ್ ಸ್ವಲ್ಪ ಸಮಯದವರೆಗೆ ಕ್ರೀಡೆಯಿಂದ ದೂರವಿರಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
‘ಚಿಕ್ಕ ಸಂದೇಶದ ಮೂಲಕ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ನಾನು ಆರ್ಸಿಬಿ ಪರ ಆಡುತ್ತಿಲ್ಲ. ಹಾಗಂತ ನಾನು ಬೇರೆ ಟೀಮಿಗೆ ಆಡಬೇಕೆನ್ನುವ ನಿರ್ಧಾರ ಮಾಡಿಲ್ಲ. ಸ್ವಲ್ಪ ಸಮಯದವರೆಗೆ ಕ್ರಿಕೆಟ್ನಿಂದ ದೂರವಿರಲು ನಿಶ್ಚಯಿಸಿಕೊಂಡಿದ್ದೇನೆ,’ ಅಂತ ಸ್ಟೀನ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಸ್ಟಿನ್, ‘ಖಂಡಿತವಾಗಿಯೂ ಬೇರೆ ಲೀಗ್ಗಳಲ್ಲಿ ಆಡುವ ಇಚ್ಛೆ ನನಗಿಲ್ಲ. ಕ್ರೀಡೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ, ಅಷ್ಟೆ. ನನ್ನನ್ನು ಅರ್ಥಮಾಡಿಕೊಂಡಿರುವುದಕ್ಕೆ ಆರ್ಸಿಬಿಗೆ ಧನ್ಯವಾದಗಳು,’ ಎಂದು ಬರೆದುಕೊಂಡಿದ್ದಾರೆ.
ಸೀಮಿತ ಓವರ್ಗಳ ಕ್ರಿಕೆಟ್ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಸ್ಟೀನ್ 2019 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದರು. ಕೊವಿಡ್-19 ಪಿಡುಗಿನಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಸ್ಥಳಾಂತರಗೊಂಡ ಐಪಿಎಲ್ 2020 ಸೀಸನ್ನಲ್ಲಿ ಸ್ಟೀನ್ ಕಳಾಹೀನ ಬೌಲಿಂಗ್ ಪ್ರದರ್ಶನ ನೀಡಿದರು. ಆಡಿದ 3 ಪಂದ್ಯಗಳಲ್ಲಿ ಅವರು ಕೇವಲ ಒಂದು ವಿಕೆಟ್ ಮಾತ್ರ ಪಡೆದರು. ಹಾಗಂತ ಎಲ್ಲಾ ಫಾರ್ಮಾಟ್ಗಳಿಂದ ಕ್ರಿಕೆಟ್ನಿಂದ ಸನ್ಯಾಸ ತೆಗೆದುಕೊಳ್ಳುವ ನಿರ್ಧಾರಕ್ಕೇನೂ ಸ್ಟೀನ್ ಬಂದಿಲ್ಲ.
‘ಕ್ರಮೇಣವಾಗಿ ಮತ್ತು ಹಂತಹಂತವಾಗಿ ನಾನು ಬೇರೆ ಬೇರೆ ಲೀಗ್ಗಳಲ್ಲಿ ಆಡುತ್ತೇನೆ. ನಾನು ಕ್ರಿಕೆಟ್ನಿಂದ ಸನ್ಯಾಸ ತೆಗೆದುಕೊಳ್ಳುತ್ತಿದ್ದೇನೆ ಅಂತ ಯಾರೂ ಭಾವಿಸಬಾರದು’ ಎಂದು ಇನ್ನೊಂದು ಟ್ವೀಟ್ನಲ್ಲಿ ಸ್ಟೀನ್ ಹೇಳಿದ್ದಾರೆ.
Published On - 7:04 pm, Sat, 2 January 21