ರೈಲಿನ ಬೋಗಿಯಂತೆ ಕಂಗೊಳಿಸುವ ರಾಗಿ ಮೆದೆ: ಎಲ್ಲಿ ಗೊತ್ತಾ?
ರಂಗೇಗೌಡರಿಗೆ ಕೃಷಿ ಮೇಲೆ ಸಾಕಷ್ಟು ಹಂಬಲವಿದೆ. ಆದರೆ ಇಂದಿನ ದಿನಮಾನದಲ್ಲಿ ಕೂಲಿ ಆಳುಗಳ ಕೊರತೆಯಿಂದಾಗಿ ಒಮ್ಮೊಮ್ಮೆ ಕೃಷಿ ಬಿಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರು, ಆದರೆ ಇದು ಸಾಧ್ಯವಾಗದೆ ದೂರದ ರಾಯಚೂರಿನಿಂದ ಕೂಲಿ ಆಳುಗಳನ್ನು ಕರೆಸಿಕೊಂಡು ಕೃಷಿ ಕೆಲಸ ಮಾಡಿಸಿದ್ದಾರೆ.

ರಾಮನಗರ: ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಎಂದರೆ ಮೂಗು ಮುರಿಯುವವರೇ ಹೆಚ್ಚು. ಈ ಮಧ್ಯೆ ಕೆಲವೊಂದಿಷ್ಟು ಮಂದಿ ವ್ಯವಸಾಯದ ಕಡೆ ಮುಖ ಮಾಡುತ್ತಿದ್ದಾರೆ ಎನ್ನುವುದು ಖುಷಿಯ ವಿಚಾರ. ಈ ನಿಟ್ಟಿನಲ್ಲಿ ಎಂತಹದ್ದೇ ಕಷ್ಟದ ಸನ್ನಿವೇಶದಲ್ಲೂ ಎದೆ ಗುಂದದೆ ಕೃಷಿ ಮಾಡುತ್ತಾ ರಾಗಿಯಲ್ಲಿ ಅದ್ಭುತ ಫಸಲು ಪಡೆದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಗ್ಗೀಕುಪ್ಪೆ ಗ್ರಾಮದ ರೈತ ಮಂಡಿ ರಂಗೇಗೌಡ, ಇತರರಿಗೆ ಮಾದರಿಯಾಗಿದ್ದಾರೆ.
ರೈಲಿನಂತೆ ರಾಗಿ ಮೆದೆ: ಹೌದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಲ್ಯಾ ಗ್ರಾಮಕ್ಕೆ ಹೋಗುತ್ತಿದ್ದಂತೆ ರೈಲಿನ ಬೋಗಿಯಂತೆ ಉದ್ದವಿರುವ ರಾಗಿ ಮೆದೆಯೊಂದು ಕಣ್ಣಿಗೆ ಬೀಳುತ್ತದೆ. ಸುಮಾರು 25 ಮಾರು ಉದ್ದದ ರಾಗಿ ಮೆದೆ ಹಾಕಿರುವ ತಗ್ಗೀಕುಪ್ಪೆ ಗ್ರಾಮದ ರೈತ ಮಂಡಿ ರಂಗೇಗೌಡ, ಪ್ರತಿ ವರ್ಷ ತಪ್ಪದೇ ರಾಗಿ ಬಿತ್ತುವ ಕಾರ್ಯವನ್ನು ಮಾಡುತ್ತಿದ್ದಾನೆ. ತಮ್ಮ 50 ಎಕರೆಗೂ ಹೆಚ್ಚು ಜಾಗದಲ್ಲಿ ಎಂ.ಆರ್-2 ಮತ್ತು ಎಂ.ಆರ್-6 ತಳಿಯ ರಾಗಿ ಬಿತ್ತನೆ ಮಾಡಿದ್ದ ರಂಗೇಗೌಡರು, ರಾಗಿ ಬೆಳೆ ಕಟಾವು ಮಾಡಿ ಮೆದೆ ಹಾಕಲು ಸುಮಾರು 450 ಕ್ಕೂ ಹೆಚ್ಚು ಆಳುಗಳನ್ನು ಬಳಕೆ ಮಾಡಿಕೊಂಡಿದ್ದು, ಇದಕ್ಕಾಗಿ ಅವರು ಕೂಲಿಯಾಗಿ ಮೂರೂವರೆ ಲಕ್ಷ ಖರ್ಚು ಮಾಡಿದ್ದಾರೆ.
ಲಾಭದ ನಿರೀಕ್ಷೆ ಇಲ್ಲ: ರಂಗೇಗೌಡರಿಗೆ ಕೃಷಿ ಮೇಲೆ ಸಾಕಷ್ಟು ಹಂಬಲವಿದೆ. ಆದರೆ ಇಂದಿನ ದಿನಮಾನದಲ್ಲಿ ಕೂಲಿ ಆಳುಗಳ ಕೊರತೆಯಿಂದಾಗಿ ಒಮ್ಮೊಮ್ಮೆ ಕೃಷಿ ಬಿಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಇದು ಸಾಧ್ಯವಾಗದೆ ದೂರದ ರಾಯಚೂರಿನಿಂದ ಕೂಲಿ ಆಳುಗಳನ್ನು ಕರೆಸಿಕೊಂಡು ಕೃಷಿ ಕೆಲಸ ಮಾಡಿಸಿದ್ದಾರೆ. ಇನ್ನು ಉಳುಮೆ, ಕಳೆ, ಕುಂಟೆ, ಗೊಬ್ಬರ ಸೇರಿ ಲೆಕ್ಕ ಹಾಕಿದರೆ ಸುಮಾರು 10 ಲಕ್ಷ ಖರ್ಚು ಬಂದಿದ್ದು, ಕನಿಷ್ಠ ಈ ಬಾರಿ 400 ಕ್ವಿಂಟಲ್ ರಾಗಿ ಆಗಬಹುದು ಎನ್ನುವ ನೀರಿಕ್ಷೆಯಲ್ಲಿದ್ದಾರೆ.

ರಾಗಿ ಮೆದೆ
ಇನ್ನು ಏನಿಲ್ಲ ಎಂದರೂ ರಾಗಿ ಮಾರಾಟದಿಂದ 8 ಲಕ್ಷ ರೂಪಾಯಿ ಹಾಗೂ ರಾಗಿ ಹುಲ್ಲಿಗೆ 1 ಲಕ್ಷ ರೂಪಾಯಿ ಆಗಬಹುದು. ಎಲ್ಲಾ ಸೇರಿ 9 ಲಕ್ಷ ರೂಪಾಯಿ ನಿರೀಕ್ಷೆಯಲ್ಲಿದ್ದು, ಆದರೂ ಲಾಭ ನಷ್ಟ ಇದೆಲ್ಲವನ್ನು ಲೆಕ್ಕ ಹಾಕುವುದಿಲ್ಲ, ಭೂಮಿ ತಾಯಿ ಸೇವೆ ಮಾಡಬೇಕೆಂಬುವುದೇ ನನ್ನ ಆಸೆ ಮತ್ತು ಗುರಿ. ಲಾಭನಷ್ಟ ಎಲ್ಲವೂ ಭೂಮಿ ತಾಯಿಗೆ ಅರ್ಪಣೆ ಎಂದು ರೈತ ಮಂಡಿ ರಂಗೇಗೌಡ ಹೇಳಿದ್ದಾರೆ.

ರೈತ ಮಂಡಿ ರಂಗೇಗೌಡ
ರಾಮನಗರ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ನಂತರದಲ್ಲಿ ವಾಣಿಜ್ಯ ಬೆಳೆಯಾಗಿ ರಾಗಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಅದರಲ್ಲೂ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಸುಮಾರು 19,248 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯನ್ನ ಬೆಳೆಯಲಾಗಿದೆ. ಈ ಬಾರಿ ಕಟಾವು ಸಮಯದಲ್ಲಿ ಸೈಕ್ಲೋನ್ ಎಫೆಕ್ಟ್ ನಿಂದಾಗಿ ಮಳೆ ಬಂದು ರಾಗಿ ಬೆಳೆ ನಾಶವಾಗಿದೆ. ಕಳೆದ ಬಾರಿ 600 ಮೂಟೆಯಷ್ಟು ರಂಗೇಗೌಡ ರಾಗಿ ಬೆಳೆದಿದ್ದರು. ಈ ಬಾರಿ ಸೈಕ್ಲೋನ್ ಎಫೆಕ್ಟ್ನಿಂದಾಗಿ ರಾಗಿಗೆ ತೊಂದರೆ ಉಂಟಾಗಿದೆ.

ರಾಗಿ ಮೆದೆಯ ಸುತ್ತಮುತ್ತಲ ಚಿತ್ರಣ
ರಂಗೇಗೌಡರು ರಾಗಿ ಬೆಳೆಯುವುದರ ಜೊತೆಗೆ ರಾಸುಗಳನ್ನು ಸಾಕುವುದರಲ್ಲೂ ಪಳಗಿದ್ದು, ಉತ್ತಮ ರಾಸುಗಳನ್ನು ಸಾಕಿ ಮಾಗಡಿ ರಂಗನಾಥಸ್ವಾಮಿ ಜಾತ್ರೆಗಳಲ್ಲಿ ಪ್ರದರ್ಶಿಸುವ ಹವ್ಯಾಸವನ್ನು ಬೆಳೆಸಿಕೊಂಡು ಬಂದಿದ್ದಾರೆ. ಆದರೆ ವಂಶಪಾರಂಪರ್ಯವಾಗಿ ಬಂದಿರುವ ಕೃಷಿ ಬೇಸಾಯ ಬಿಡದೆ ಸುಮಾರು 80 ಎಕರೆ ಜಮೀನು ಹೊಂದಿದ್ದು, ಈ ಪೈಕಿ 50 ಎಕರೆಯಲ್ಲಿ ರಾಗಿ ಬೆಳೆ ಬೆಳೆದಿದ್ದಾರೆ.
ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ ಬಾರೆ ಹಣ್ಣು: ಸ್ವಾಭಿಮಾನದ ಬದುಕಿಗೆ ಆಸರೆಯಾಯ್ತು ಕೃಷಿ



