ಯೂನಿವರ್ಸಿಟಿ ರ‍್ಯಾಂಕ್‌ ವಿದ್ಯಾರ್ಥಿಗಳ ಪರದಾಟ.. ಕಣ್ತೆರೆದು ನೋಡಬಾರದೇ ಸರ್ಕಾರ!?

| Updated By:

Updated on: Jul 10, 2020 | 10:39 PM

ಬೆಳಗಾವಿ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಘಟಿಕೋತ್ಸವವನ್ನ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಆದ್ರೆ ಹೀಗೆ ಘಟಿಕೋತ್ಸವ ಮುಂದೂಡಿದ ಪರಿಣಾಮ ನೂರಾರು ರ‍್ಯಾಂಕ್‌ ವಿದ್ಯಾರ್ಥಿಗಳು ತಮಗೆ ಬರಬೇಕಿದ್ದ ಪ್ರೋತ್ಸಾಹ ಧನ ಸಿಗದೆ ಒದ್ದಾಡಬೇಕಾದ ಪರಿಸ್ಥಿತಿ ಬಂದಿದೆ. ಹೌದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಸ್ನಾತಕೋತ್ತರ ಪದವಿಯಲ್ಲಿ 1ರಿಂದ 3ನೇ ರ‍್ಯಾಂಕ್‌ ಪಡೆದ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರೋತ್ಸಾಹ ಧನಕ್ಕೆ ಕೊರೊನಾ ವೈರಸ್ ಕಂಟಕವಾಗಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಘಟಿಕೋತ್ಸವವನ್ನ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಇದರಿಂದಾಗಿ […]

ಯೂನಿವರ್ಸಿಟಿ ರ‍್ಯಾಂಕ್‌ ವಿದ್ಯಾರ್ಥಿಗಳ ಪರದಾಟ.. ಕಣ್ತೆರೆದು ನೋಡಬಾರದೇ ಸರ್ಕಾರ!?
Follow us on

ಬೆಳಗಾವಿ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಘಟಿಕೋತ್ಸವವನ್ನ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಆದ್ರೆ ಹೀಗೆ ಘಟಿಕೋತ್ಸವ ಮುಂದೂಡಿದ ಪರಿಣಾಮ ನೂರಾರು ರ‍್ಯಾಂಕ್‌ ವಿದ್ಯಾರ್ಥಿಗಳು ತಮಗೆ ಬರಬೇಕಿದ್ದ ಪ್ರೋತ್ಸಾಹ ಧನ ಸಿಗದೆ ಒದ್ದಾಡಬೇಕಾದ ಪರಿಸ್ಥಿತಿ ಬಂದಿದೆ.

ಹೌದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಸ್ನಾತಕೋತ್ತರ ಪದವಿಯಲ್ಲಿ 1ರಿಂದ 3ನೇ ರ‍್ಯಾಂಕ್‌ ಪಡೆದ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರೋತ್ಸಾಹ ಧನಕ್ಕೆ ಕೊರೊನಾ ವೈರಸ್ ಕಂಟಕವಾಗಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಘಟಿಕೋತ್ಸವವನ್ನ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಇದರಿಂದಾಗಿ ಬಡ ಮತ್ತು ಗ್ರಾಮೀಣ ಭಾಗದ ಸ್ನಾತಕೋತ್ತರ ಪದವಿ ಮುಗಿಸಿದ ರ‍್ಯಾಂಕ್‌ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೇ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಟಾಪ್‌ ರ‍್ಯಾಂಕ್‌ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನ ಇನ್ನೂ ನೀಡಿಲ್ಲ
ವಿವಿಗಳಲ್ಲಿ ಒಂದರಿಂದ ಮೂರನೆ ರ‍್ಯಾಂಕ್‌ ಪಡೆದ ಪರಿಶಿಷ್ಟ ಜಾತಿಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 50 ಸಾವಿರ ಮೊತ್ತದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಆದ್ರೆ ಈ ಬಾರಿ ಬೆಳಗಾವಿಯ ಚೆನ್ನಮ್ಮ ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ವಿವಿಗಳಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪ್ರೋತ್ಸಾಹ ಧನ ಇನ್ನೂ ಸಿಕ್ಕಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಬೇಕಿದ್ದ ವಿಶ್ವವಿದ್ಯಾಲಯಗಳು, ಕೊರೊನಾ ವೈರಸ್ ನೆಪವೊಡ್ಡಿ ಪ್ರೋತ್ಸಾಹ ಧನವನ್ನ ನೀಡುತ್ತಿಲ್ಲ.

ಸಮಾಜ ಕಲ್ಯಾಣ ಇಲಾಖೆಯ ತಗಾದೆ
ಈಗಾಗಲೇ ಪ್ರೋತ್ಸಾಹ ಧನಕ್ಕೆ ಅರ್ಹರಾದ ವಿದ್ಯಾರ್ಥಿಗಳ ಮನೆಗಳಿಗೆ 50 ಸಾವಿರ ರೂ. ಮೊತ್ತದ ಪ್ರೋತ್ಸಾಹ ಧನದ ಪತ್ರಗಳನ್ನು ಕಳುಹಿಸಲಾಗಿದೆ. ಘಟಿಕೋತ್ಸವದಲ್ಲಿ ನೀಡಲಾಗುವ ರ‍್ಯಾಂಕ್‌ ಪ್ರಮಾಣ ಪತ್ರವನ್ನು ನೀಡಿದ್ರೆ ಮಾತ್ರ ಹಣ ಮಂಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ವಿದ್ಯಾರ್ಥಿಗಳ ಪರಿಸ್ಥಿತಿ.

ತೊಂದರೆಯಲ್ಲಿ ವಿದ್ಯಾರ್ಥಿಗಳು
ಪ್ರೋತ್ಸಾಹ ಧನ ನೀಡಲು ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ನೀಡುವ ಸ್ನಾತಕೋತ್ತರ ಪದವಿ ರ‍್ಯಾಂಕ್‌ ಪ್ರಮಾಣ ಪತ್ರ ಕಡ್ಡಾಯ. ಆದ್ರೇ ಇದೀಗ ಕೊರೊನಾ ಹಿನ್ನೆಲೆಯಲ್ಲಿ ಘಟಿಕೋತ್ಸವ ಮಾಡುವ ಸ್ಥಿತಿಯಲ್ಲಿ ವಿವಿಗಳು ಇಲ್ಲ. ಈ ಕಾರಣಕ್ಕೆ ಸದ್ಯದ ನಿಯಮಾವಳಿಗಳನ್ನು ಬದಿಗೊತ್ತಿ ರ‍್ಯಾಂಕ್‌ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಕೆಲಸವನ್ನ ಸರ್ಕಾರ ಮತ್ತು ಇಲಾಖೆ ಮಾಡಬೇಕಿದೆ. ಇಲ್ಲದಿದ್ರೆ ಹೆಚ್ಚಿನ ವ್ಯಾಸಂಗ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವ ಬಡ ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ ಅನ್ನೋದು ಬಹುತೇಕ ವಿದ್ಯಾರ್ಥಿಗಳ ಅಳಲು.
-ಸಹದೇವ ಮಾನೆ

Published On - 8:14 pm, Fri, 10 July 20