ಕಲಬುರಗಿ: ಅಂತರ್ಜಾಲದಲ್ಲಿ ವಿಶ್ವವಿದ್ಯಾಲಯಗಳ ಲೋಗೋಗಳನ್ನು ತೆಗೆದುಕೊಂಡು ಅವುಗಳನ್ನೇ ಬಳಸಿ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿ ಲಕ್ಷಾಂತರ ರೂ. ಹಣಕ್ಕೆ ಮಾರಾಟ ಮಾಡುತ್ತಿದ್ದ ಜಾಲವನ್ನು ಕಲಬುರಗಿ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಗರದ ಏಷಿಯನ್ ಮಾಲ್‌ನ ಮೊದಲ ಮಹಡಿಯಲ್ಲಿರುವ ‘ಐ4ಯು’ ಗ್ಲಾಮ್ ಚಾಯ್ಸ್ ಬಟ್ಟೆ ಅಂಗಡಿಯ ಬಟ್ಟೆ ವ್ಯಾಪಾರಿ ಇಂತಹ ಖತರ್ನಾಕ್ ದಂಧೆಯಲ್ಲಿ ತೊಡಗಿದ್ದ ಎಂಬುದು ಬಯಲಿಗೆ ಬಂದಿದೆ. ಮೇಲ್ನೋಟಕ್ಕೆ ಬಟ್ಟೆ ವ್ಯಾಪಾರಿ ಮಾಡುತ್ತಿದ್ದವರ ಹಾಗೆ ನಟಿಸುತ್ತಿದ್ದ ವ್ಯಕ್ತಿ, ಬಟ್ಟೆ ಅಂಗಡಿಯೊಳಗೆ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದ.
ಕಲಬುರಗಿ ನಗರದ ತಾರ್ ಫೈಲ್ ಬಡಾವಣೆಯ ಗೌಸ್ ನಗರದ ನಿವಾಸಿ ಮಹ್ಮದ ಖಾನ್ ಎಂಬಾತ ಈಗ ಮಾಡಬಾರದ ಕೆಲಸ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಬಟ್ಟೆ ಅಂಗಡಿಯಲ್ಲಿ ಅಂಕಪಟ್ಟಿಗಳ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ, ಉಪ ಅಯುಕ್ತ ಡಿ.ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಸ್ಟೇಷನ್ ಬಜಾರ್ ಠಾಣೆಯ ಇನ್ಸ್ ಪೆಕ್ಟರ್ ಎಲ್.ಎಚ್ ಗೌಂಡಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಖದೀಮನನ್ನು ಬಂಧಿಸಿದ್ದಾರೆ.
ಯಾವುದೇ ಶಿಕ್ಷಣ ಸಂಸ್ಥೆಯನ್ನೂ ಹೊಂದಿರದ ಆರೋಪಿ ಮಹ್ಮದ್, ಎಸ್ಸೆಸ್ಸೆಲ್ಸಿಯಿಂದ ಹಿಡಿದು ಬಿಇ., ಬಿ.ಟೆಕ್, ಎಂ.ಟೆಕ್. ವರೆಗೂ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದ್ದ. ಯಾರೇ ಕೇಳಿದರೂ ಕೇವಲ 30-40 ದಿನದಲ್ಲೇ ಅಂಕಪಟ್ಟಿಗಳನ್ನು ನೀಡುತ್ತಿದ್ದ. ಒಂದೊಂದು ಹಂತದ ಪದವಿ ಮಾರ್ಕ್ಸ್ ಕಾರ್ಡ್ ಗೂ ಇಂತಿಷ್ಟು ಎಂದು ಹಣ ನಿಗದಿ ಮಾಡಿದ್ದ. ತನ್ನ ಈ ಕೃತ್ಯಕ್ಕೆ ದೊಡ್ಡ-ದೊಡ್ಡ ವಿಶ್ವವಿದ್ಯಾಲಯಗಳ ಲೋಗೋಗಳನ್ನೇ ಬಳಕೆ ಮಾಡಿಕೊಳ್ಳುತ್ತಿದ್ದ.
ಯಾವ ಅಂಕಪಟ್ಟಿಗೆ ಎಷ್ಟು ಹಣ?
ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಬಿ.ಟೆಕ್, ಎಬಿಎ, ಎಂಸಿಎ., ಎಂ.ಟೆಕ್. ಪದವಿ ಪ್ರಮಾಣಪತ್ರಗಳನ್ನು ಬಟ್ಟೆ ಅಂಗಡಿಯಲ್ಲೇ ಖದೀಮ ಸೃಷ್ಟಿಸುತ್ತಿದ್ದ. ಬಿ.ಇ. ಬಿ.ಟೆಕ್ ಪದವಿ ಅಂಕಪಟ್ಟಿಗಳಿಗೆ 3 ಲಕ್ಷ ದಿಂದ 3.5 ಲಕ್ಷ ರೂ. ಎಂಬಿಎ ಪದವಿಗೆ 1.5 ಲಕ್ಷ ರೂ. ಎಂಸಿಎ ಪದವಿಗೆ 90 ಸಾವಿರ ರೂ., ಬಿಕಾಂ, ಬಿಎಸ್ಸಿ ಪದವಿ ಅಂಕಪಟ್ಟಿಗಳಿಗೆ 50ರಿಂದ 60 ಸಾವಿರ ರೂ., ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಮತ್ತಿತರ ಅಂಕಪಟ್ಟಿಗೆ 30 ರಿಂದ 40 ಸಾವಿರ ರೂ. ದರ ನಿಗದಿ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ತಿಳಿಸಿದ್ದಾರೆ.
ಅಲ್ಲದೇ, ವಿದೇಶದಲ್ಲಿ ಕೆಲಸ ಮಾಡಲು ದೃಢಿಕರಣ ಸಹ ಮಾಡಿಸಿಕೊಟ್ಟಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸೇಂಟ್ ಅಲೋಶಿಯಸ್ ಅಂತರ್ ರಾಷ್ಟ್ರೀಯ ವಿವಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಸಾಂಗೈ ಅಂತಾರಾಷ್ಟ್ರೀಯ ವಿವಿ, ಹಿಮಾಲಯನ್ ಯೂನಿವರ್ಸಿಟಿ, ಸ್ವಾಮಿ ವಿವೇಕಾನಂದ ವಿವಿ ಹೀಗೆ ವಿವಿಧ ವಿಶ್ವವಿದ್ಯಾಲಯಗಳ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ಬಗ್ಗೆ ಆರೋಪಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.
ಬಂಧಿತನಿಂದ 2.20 ಲಕ್ಷ ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಆತನ ಅಂಗಡಿಯ ಕೋಣೆಯಲ್ಲಿ ಒಂದು ಹಾರ್ಡ್ ಡಿಸ್ಕ್, ಅನೇಕ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಕಲು ಅಂಕಪಟ್ಟಿಗಳು ಹಾಗೂ ಎಲೆ ಜೆನ್ಸ್ ಟೆಕ್ನಾಲಜಿ ಫೆಸ್‌ಮೆಂಟ್ ಬ್ಯುರೊ ಎಂಬ ಹೆಸರಿನ ಬಿಲ್ ಬುಕ್ ಮತ್ತು ಲೆಟರ್ ಪ್ಯಾಡ್‌ಗಳು ಪತ್ತೆಯಾಗಿವೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ವಿನ ತನಿಖೆ ನಡೆಸಲಾಗುತ್ತಿದೆ.
-ಸಂಜಯ್ ಚಿಕ್ಕಮಠ
Published On - 8:05 pm, Fri, 10 July 20