ಉಡುಪಿ: ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಂತಿಲ್ಲ ಎಂಬ ಆದೇಶ ಸರ್ಕಾರ ಹೊರಡಿಸಿದೆ. ಆದ್ರೂ ನಷ್ಟದ ಕಾರಣ ಹೇಳಿ ಹಲವಾರು ಕಡೆ ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ಅಂತಹ ಒಂದು ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಕೂಡ ನಡೆದಿದೆ.
ಉಡುಪಿ ಸುಬ್ರಮಣ್ಯ ನಗರದಲ್ಲಿರುವ ಬೆಲ್ ಓ ಸೀಲ್ ಎಂಬ ಕಂಪನಿ ತನ್ನ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡುತ್ತಿದ್ದು ಹಲವರು ಕಾರ್ಮಿಕರನ್ನು ಕೆಲಸದಿಂದ ಕಿತ್ತು ಹಾಕಿದೆ. ಇದನ್ನು ಖಂಡಿಸಿ ಶುಕ್ರವಾರ ಉಳಿದ ಉದ್ಯೋಗಿಗಳು ಸಹೋದ್ಯೋಗಿಗಳ ಪರವಾಗಿ ಮೌನ ಪ್ರತಿಭಟನೆ ನಡೆಸಿದ್ರು. ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಆರು ಜನರನ್ನು ಸಂಸ್ಥೆ ವಜಾ ಮಾಡಿದೆ.
ಅಲ್ಲದೆ, ಸಿಬ್ಬಂದಿಗೆ ನೀಡಿದ ವಸತಿ ವ್ಯವಸ್ಥೆಯನ್ನೂ ಕಾರ್ಖಾನೆ ಹಿಂಪಡೆದುಕೊಂಡಿದೆ. ಕೊರೊನಾ ರೋಗವಿರುವ ಹಿನ್ನೆಲೆಯಲ್ಲಿ ನಮಗೆ ಬಾಡಿಗೆ ಮನೆಗಳು ಸಿಗುವುದಿಲ್ಲ. ಜನರೂ ಕೂಡ ಹೊರಗಿನವರಿಗೆ ಬಾಡಿಗೆ ಮನೆ ಕೊಡುತ್ತಿಲ್ಲ. ಕಂಪನಿ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರನ್ನೂ ಕೆಲಸಕ್ಕೆ ಕರೆದುಕೊಳ್ಳಬೇಕು ಎಂದು ಸಿಬ್ಬಂದಿ ಕಂಪನಿ ಆಡಳಿತ ವರ್ಗವನ್ನು ಆಗ್ರಹಿಸಿದರು.