ಕಳೆದ ಕೆಲವು ದಿನಗಳ ಹಿಂದೆ ವಾಟ್ಸ್ಆ್ಯಪ್ ಪ್ರಕಟಿಸಿದ ಹೊಸ ಗೌಪ್ಯತೆ ನೀತಿಗಳು ಸದ್ಯ ಚರ್ಚಿತ ವಿಷಯ. ಈ ನೀತಿಗಳ ಬಗ್ಗೆ ವಾಟ್ಸ್ಆ್ಯಪ್ ಮಂಗಳವಾರವೂ ಸ್ಪಷ್ಟನೆ ನೀಡಿದೆ. ಅದೇನೆಂದರೆ ಬಳಕೆದಾರರು ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಕಳುಹಿಸುವ ಸಂದೇಶಗಳಿಗೆ ಈ ನೀತಿ ಅನ್ವಯವಾಗುವುದಿಲ್ಲ. ಆದರೆ ವ್ಯಾವಹಾರಿಕ ಸಂದೇಶಗಳು (business messages) ಅಂದರೆ, ಸ್ನೇಹಿತರು ಅಥವಾ ಕುಟುಂಬದವರಿಗೆ ಕಳುಹಿಸುವ ಸಂದೇಶದ ಹೊರತಾಗಿರುವ ಸಂದೇಶಗಳನ್ನು ಫೇಸ್ ಬುಕ್ ಸಂಸ್ಥೆ ಓದುತ್ತದೆ. ವ್ಯಾವಹಾರಿಕ ಸಂದೇಶಗಳನ್ನು ಮಾತ್ರ ವ್ಯವಹಾರದ ಉದ್ದೇಶಕ್ಕಾಗಿ ಬಳಸುತ್ತದೆ. ಇತ್ತೀಚಿನ ಸ್ಪಷ್ಟೀಕರಣದಲ್ಲಿ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಂದೇಶಗಳು ಮತ್ತು ವ್ಯಾವಹಾರಿಕ ಸಂದೇಶಗಳ ನಡುವಿನ ವ್ಯತ್ಯಾಸ ಏನು ಎಂಬುದನ್ನು ಹೇಳಿದೆ. ಅದೇ ವೇಳೆ ಗೌಪ್ಯತೆ ನೀತಿಯು ಎರಡನೆಯದಕ್ಕೆ ಮಾತ್ರ ಸಂಬಂಧಿಸಿದೆ ಮತ್ತು ಹಿಂದಿನದು ಬದಲಾಗದೆ ಉಳಿದಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ.
ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತ್ರ ಸಂದೇಶ ವಿನಿಮಯ ಮಾಡಲು ವಾಟ್ಸ್ಆ್ಯಪ್ ಬಳಸುವುದು ಅಂದರೆ ಏನರ್ಥ?
ವಾಟ್ಸ್ಆ್ಯಪ್ ಅಥವಾ ಫೇಸ್‌ಬುಕ್ ನಿಮ್ಮ ಖಾಸಗಿ ಸಂದೇಶವನ್ನು ನೋಡುವುದಾಗಲೀ, ಕರೆಗಳನ್ನು ಆಲಿಸುವುದಾಗಲೀ ಮಾಡುವುದಿಲ್ಲ. ವೈಯಕ್ತಿಕ ಸಂದೇಶಗಳೆಲ್ಲವೂ end-to-end encryption ಆಗಿದ್ದು, ಈ ಗೌಪ್ಯತೆ ಹಾಗೇ ಮುಂದುವರಿಯಲಿದೆ. ಯಾವುದೇ ವ್ಯಕ್ತಿ ನಿಮಗೆ ಸಂದೇಶ ಕಳುಹಿಸಿದರೆ ಅಥವಾ ಕರೆ ಮಾಡಿದರೆ ಅದರ ಮಾಹಿತಿಯನ್ನು ವಾಟ್ಸ್ಆ್ಯಪ್ ಸಂಗ್ರಹಿಸಿಡುವುದಿಲ್ಲ. ಯಾಕೆಂದರೆ ಈ ರೀತಿ ಮಾಹಿತಿ ಸಂಗ್ರಹ ಮಾಡಿದರೆ ಅದು ಗೌಪ್ಯತೆ ಮತ್ತು ಸುರಕ್ಷತೆಗೆ ಅಪಾಯ ಇರುತ್ತದೆ .
ನಿಮ್ಮ ಸಂದೇಶ end-to-end encryption ಆಗಿರುವುದರಿಂದ ನೀವು ಇತರರೊಂದಿಗೆ ಶೇರ್ ಮಾಡಿರುವ ಲೊಕೇಷನ್ನ್ನು ವಾಟ್ಸ್ಆ್ಯಪ್ ನೋಡುವುದಿಲ್ಲ. ವಾಟ್ಸ್ಆ್ಯಪ್ ಬಳಕೆದಾರರ ಸಂಪರ್ಕ ಮಾಹಿತಿಯನ್ನು ಫೇಸ್‌ಬುಕ್ ಅಥವಾ ಇತರ ಆ್ಯಪ್ ಗಳೊಂದಿಗೆ ಹಂಚಿಕೊಳ್ಳುವುದಿಲ್ಲ.
ವಾಟ್ಸ್ ಆ್ಯಪ್ ಗ್ರೂಪ್ಗಳಿಂದ ಯಾವುದೇ ಮಾಹಿತಿಯನ್ನು ಜಾಹೀರಾತು ಉದ್ದೇಶಕ್ಕಾಗಿ ಫೇಸ್‌ಬುಕ್ ಜತೆ ಹಂಚಿಕೊಳ್ಳುವುದಿಲ್ಲ. ನೀವು ಯಾವುದೇ ಕಚೇರಿಯ ವಾಟ್ಸ್ಆ್ಯಪ್ ಗ್ರೂಪ್ ಅಥವಾ ಶಾಲೆಯ ಗ್ರೂಪ್ ಗಳಲ್ಲಿದ್ದರೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ.
ವ್ಯಾವಹಾರಿಕ ಸಂದೇಶಗಳು ಅಂದರೆ ಯಾವ ರೀತಿಯದ್ದು?
ವಾಟ್ಸ್ಆ್ಯಪ್ ಮತ್ತು ಅದರ ಮೂಲ ಕಂಪನಿಯಾದ ಫೇಸ್‌ಬುಕ್ ನಡುವಿನ ವ್ಯವಹಾರ ಹೇಗಿರುತ್ತದೆ ಎಂಬುದು ಸಂದೇಶದಿಂದ ವ್ಯವಹಾರಕ್ಕೆ ಬಂದಾಗ ಹೆಚ್ಚು ಗೋಚರಿಸುತ್ತದೆ, ಅಲ್ಲಿ ಹೊಸ ಗೌಪ್ಯತೆ ಬದಲಾವಣೆಗಳನ್ನು ಅನ್ವಯಿಸಲಾಗಿದೆ.
ಕೆಲವು ಬೃಹತ್ ಉದ್ಯಮಗಳು ತಮ್ಮ ಗ್ರಾಹಕರ ಪ್ರಶ್ನೆಗೆ ಉತ್ತರಿಸಲು, ಖರೀದಿ ರಸೀದಿ ಮೊದಲಾದ ಅಗತ್ಯ ಮಾಹಿತಿಗಳನ್ನು ಹಂಚುವುದಕ್ಕಾಗಿ ವಾಟ್ಸ್ಆ್ಯಪ್ ಚಾಟ್ ಮಾಡುತ್ತಾರೆ. ಈ ರೀತಿಯ ಚಾಟ್ ನಿರ್ವಹಿಸಲು ಫೇಸ್ ಬುಕ್ನಿಂದ ಸುರಕ್ಷಿತವಾದ ಹೋಸ್ಟಿಂಗ್ ಸೇವೆಯನ್ನು ಬಳಸುವ ಸಾಧ್ಯತೆ ಬರಬಹುದು.
ನೀವು ಫೋನ್, ಇಮೇಲ್ ಅಥವಾ ವಾಟ್ಸ್ಆ್ಯಪ್ ಮೂಲಕ ಸಂವಹನ ನಡೆಸುವಾಗ, ಸಂವಹನ ಮಾಡಿದ ವಿಷಯ ವಾಟ್ಸ್ಆ್ಯಪ್ಗೆ ಕಾಣಿಸುತ್ತದೆ. ಈ ಮಾಹಿತಿಯನ್ನು ವಾಟ್ಸ್ಆ್ಯಪ್ ಸ್ವಂತ ವ್ಯಾಪಾರ ಉದ್ದೇಶಗಳಿಗೆ ಬಳಸುವ ಸಾಧ್ಯತೆ ಇದೆ. ಫೇಸ್ಬುಕ್ನಲ್ಲಿ ಜಾಹೀರಾತಿಗಾಗಿಯೂ ಬಳಸಬಹುದು. ಆದರೆ ಫೇಸ್‌ಬುಕ್‌ನಿಂದ ಹೋಸ್ಟಿಂಗ್ ಸೇವೆಗಳನ್ನು ಬಳಸಲು ಆಯ್ಕೆ ಮಾಡುವ ವ್ಯವಹಾರಗಳ ಸಂಭಾಷಣೆಗಳನ್ನು ಸ್ಪಷ್ಟವಾಗಿ ಲೇಬಲ್ ಮಾಡಲಾಗುತ್ತದೆ ಎಂದು ವಾಟ್ಸ್ಆ್ಯಪ್ ಸ್ಪಷ್ಟನೆ ನೀಡಿದೆ.
ನೀವು ವ್ಯಾವಹಾರಿಕ ಸಂವಹನ ಮಾಡುವಾಗ ಈಗಾಗಲೇ ಈ ಲೇಬಲ್ ಗಳು ಗೋಚರಿಸುತ್ತಿವೆ. ಹಾಗಾಗಿ ತಾವು ಸಂಭಾಷಣೆ ಮಾಡುತ್ತಿರುವ ವಿಷಯವನ್ನು ಆಧಾರಿಸಿ ಉದ್ದೇಶಿತ ಜಾಹೀರಾತುಗಳು ಕಾಣಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಬಳಕೆದಾರರು ನಿರ್ಧರಿಸಬಹುದು. ವಾಟ್ಸ್ಆ್ಯಪ್ನಲ್ಲಿ ಶಾಪ್ಸ್ ( Shops ) ಫೀಚರ್ ಬಳಸುವ ಮೂಲಕ ಇನ್‌ಸ್ಟಾಗ್ರಾಮ್‌ನಂತಹ ಇತರ ಫೇಸ್‌ಬುಕ್ ಉತ್ಪನ್ನಗಳಲ್ಲಿ ಉದ್ದೇಶಿತ ಜಾಹೀರಾತುಗಳಿಗಾಗಿ ನಿಮ್ಮ ಆದ್ಯತೆ ಆಯ್ಕೆ ಮಾಡಬಹುದು. ಅಂದರೆ ವಾಟ್ಸ್ಆ್ಯಪ್ ಕ್ರಮೇಣ ಹಲವಾರು ಮಾರುಕಟ್ಟೆಗಳಲ್ಲಿ ಸಕ್ರಿಯವಾಗಿಸುವ ವ್ಯಾವಹಾರಿಕ ಸಂದೇಶವು ಅಂತಿಮವಾಗಿ ನೀವು ವ್ಯವಹಾರಕ್ಕೆ ತೋರಿಸಿದ ಆದ್ಯತೆಗಳ ಆಧಾರದ ಮೇಲಷ್ಟೇ ಜಾಹೀರಾತುಗಳು ಕಾಣಿಸುವಂತೆ ಮಾಡುತ್ತದೆ.
ನೀವು ವ್ಯಾಪಾರಕ್ಕಾಗಿ ವಾಟ್ಸ್ಆ್ಯಪ್ ಬಳಸುತ್ತಿದ್ದು ನಿಮ್ಮಲ್ಲಿ ನಿಮ್ಮ ಗ್ರಾಹಕ ಪಟ್ಟಿಯಿರುತ್ತದೆ. ವ್ಯಾಪಾರದ ಇನ್ನೊಂದು ಬದಿಯಲ್ಲಿರುವವರು ನಿಮ್ಮ ಸಂಭಾಷಣೆ ನೋಡುತ್ತಾರೆ. ಮತ್ತು ನಿಮ್ಮ ಆದ್ಯತೆಗಳನ್ನು ಗಮನಿಸುತ್ತಾರೆ. ಹೀಗಾದರೆ ಫೇಸ್ಬುಕ್ನಲ್ಲಿ ಇದಕ್ಕೆ ಸಂಬಂಧಿಸಿದ ಜಾಹೀರಾತುಗಳು ಕಾಣಿಸಿಕೊಳ್ಳಬಹುದು. ನೀವು ಉದ್ಯಮಿ ಆಗಿದ್ದರೆ ನಿಮ್ಮ ಗ್ರಾಹಕರನ್ನು ಗುರಿಯಾಗಿರಿಸಿ ಫೇಸ್‌ಬುಕ್ ಮತ್ತು ಇತರ ಸೇವೆಗಳಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುವಂತೆ ಮಾಡಬಹುದು.
ಈಗ ಬದಲಾವಣೆ ಆಗಿರುವುದೇನು?
ನೀವು ಫೇಸ್‌ಬುಕ್ ಬಳಕೆದಾರರಾಗಿದ್ದರೆ ನಿಮ್ಮ ವೈಯಕ್ತಿಕ ಚಾಟ್ಗಳ ವಿಷಯಕ್ಕೆ ಬಂದರೆ ಏನೂ ಬದಲಾಗಿಲ್ಲ. ಆದರೆ ನೀವು ವ್ಯಾಪಾರ ಸಂಬಂಧಿ ಸಂವಹನ ಮಾಡುವುದಾದರೆ ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ಈ ಸಂಸ್ಥೆಯ ಇತರ ಉತ್ಪನ್ನಗಳಲ್ಲಿ ಸಂಬಂಧಿತ ಜಾಹೀರಾತು ಕಾಣಿಸಿಕೊಳ್ಳುವುದು.
ನೀವು ವಾಟ್ಸ್ಆ್ಯಪ್ ಬಳಸುತ್ತಿದ್ದು ಫೇಸ್ ಬುಕ್ ಬಳಕೆದಾರರಲ್ಲದೇ ಇದ್ದರೆ ಯಾವುದೇ ಜಾಹೀರಾತುಗಳು ಫೇಸ್ ಬುಕ್ ನಲ್ಲಿ ಕಾಣಿಸುವುದಿಲ್ಲ. ನಿಮ್ಮ ಫಾಲೋವರ್ ಗಳ ಸಂಖ್ಯೆ ಜಾಸ್ತಿ ಇದ್ದರೆ ನೀವು ವಾಟ್ಸ್ಆ್ಯಪ್ನಲ್ಲಿ ಒಬ್ಬ ವ್ಯಕ್ತಿ ಅಥವಾ ಗುಂಪಿನಲ್ಲಿ ಮಾಡಿದ ಚಾಟ್ಗಳು ಸುರಕ್ಷಿತವಾಗಿಯೇ ಇರುತ್ತವೆ. ಆದಾಗ್ಯೂ, ಬ್ಯುಸಿನೆಸ್ ಫೀಚರ್ ಬಳಸುವಾಗ ಜಾಗರೂಕರಾಗಿರಿ.
How to | ಸಿಗ್ನಲ್ ಆ್ಯಪ್ ಬಳಕೆ ಹೇಗೆ? ಡೆಸ್ಕ್ಟಾಪ್ಗೆ ಡೌನ್ಲೋಡ್ ಮಾಡಬಹುದಾ?
Published On - 5:58 pm, Thu, 14 January 21