ಹಳೆಯದನ್ನೆಲ್ಲ ನೆನೆದು ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದರು ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ !

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 28, 2021 | 12:19 AM

ಸಿದ್ದರಾಮಯ್ಯ ತಮ್ಮನ್ನು ಬಿಜೆಪಿಯ ಬಿ ಟೀಮ್ ಅಂತ ಹೇಳಿದ್ದನ್ನು ನೆನೆಪಿಸಿಕೊಂಡು ಕೆಂಡಾಮಂಡಲರಾದ ಗೌಡರು ಬದುಕಿನುದ್ದಕ್ಕೂ ಜಾತ್ಯಾತೀತ ತತ್ವವನ್ನು ಪಾಲಿಸಕೊಂಡ ಬಂದ ತಮಗೆ ಸಿದ್ದರಾಮಯ್ಯ ಹಾಗೆ ಹೇಳಿದ್ದು ಅಕ್ಷಮ್ಯ ಎಂದು ಗುಡುಗಿದರು.

ಅದೊಂದು ಕಾಲವಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ ಅವರ ಬಲಗೈಯಂತಿದ್ದ ಕಾಲ, ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಲ್ಲ ಶಕ್ತಿ ಎಂದು ದೇವೇಗೌಡರು ಹೇಳುತ್ತಿದ್ದ ಕಾಲ. ಹಳಬರು ಹೇಳುವ ಹಾಗೆ ಗೌಡರಿಗೆ ಸಿದ್ದರಾಮಯ್ಯ ಮೇಲಿದ್ದಷ್ಟು ವಿಶ್ವಾಸ, ನಂಬಿಕೆ ಮತ್ತು ಪ್ರೀತಿ ತಮ್ಮ ಮಗ ಹೆಚ್ ಡಿ ಕುಮಾರ ಸ್ವಾಮಿ ಅವರ ಮೇಲಿರಲಿಲ್ಲ. ಸಿದ್ದಾರಾಮಯ್ಯನವರನ್ನೇ ಹೆಚ್ ಡಿಡಿ ತಮ್ಮ ಉತ್ತರಾಧಿಕಾರಿ ಅಂತ ಪರಿಗಣಿಸಿದ್ದರು ಅಂತಲೂ ಅವರು ಹೇಳುತ್ತಾರೆ. ಆದರೆ ಅದೇ ಹಳಬರ ಮತ್ತೊಂದು ಗುಂಪು ಇದಕ್ಕೆ ತದ್ವಿರುದ್ಧವಾದ ಅಂಶವನ್ನು ಹೇಳುತ್ತಾರೆ. ಗೌಡರ ಪುತ್ರ ವ್ಯಾಮೋಹ ಕಂಡೇ ಸಿದ್ದರಾಮಯ್ಯ ಜೆಡಿಎಸ್ ನಿಂದ ಹೊರನಡೆದರಂತೆ. ಬಿಡಿ, ಆಗ ಏನು ನಡೆಯಿತೆನ್ನುವುದು ಈಗ ಮುಖ್ಯವಲ್ಲ. ಸದ್ಯದ ವಾಸ್ತವವೇನೆಂದರೆ, ಅವರಿಬ್ಬರು ರಾಜಕೀಯವಾಗಿ ಕಡುವೈರಿಗಳು.

ಸಾಮಾನ್ಯವಾಗಿ, ಸಿದ್ದರಾಮಯ್ಯ ಬಗ್ಗೆ ಬಹಿರಂಗ ಟೀಕೆಗಳನ್ನು ಮಾಡದ ಗೌಡರು ಸೋಮವಾರ ರಾಮನಗರದಲ್ಲಿ ತಮ್ಮ ಹಳೆಯ ಶಿಷ್ಯನ ವಿರುದ್ಧ ಬೆಂಕಿಯುಗುಳಿದರು. ಹಿಂದೆ ಹಾಸನದಲ್ಲಿ, ಸಿದ್ದರಾಮಯ್ಯ ತಮ್ಮನ್ನು ಬಿಜೆಪಿಯ ಬಿ ಟೀಮ್ ಅಂತ ಹೇಳಿದ್ದನ್ನು ನೆನೆಪಿಸಿಕೊಂಡು ಕೆಂಡಾಮಂಡಲರಾದ ಗೌಡರು ಬದುಕಿನುದ್ದಕ್ಕೂ ಜಾತ್ಯಾತೀತ ತತ್ವವನ್ನು ಪಾಲಿಸಕೊಂಡ ಬಂದ ತಮಗೆ ಸಿದ್ದರಾಮಯ್ಯ ಹಾಗೆ ಹೇಳಿದ್ದು ಅಕ್ಷಮ್ಯ ಎಂದು ಗುಡುಗಿದರು.

ಶಿವ ಸೇನೆ ಜೊತೆ ಮೈತ್ರಿ ಬೆಳಸುವ ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ಗೌಡರು ಪ್ರಶ್ನಿಸಿದರು.

ಹಿಂದೆ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಜಮೀರ್ ಅಹ್ಮದ್ ಹಾಗೂ ಅತೀಕ್ ಹೆಸರಿನ ಅಧಿಕಾರಿಯೊಂದಿಗೆ ಸೇರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ನಾಶ ಮಾಡುವ ಪ್ರಯತ್ನ ಮಾಡಿದರೆಂದು ಗೌಡರು ಹೇಳಿದರು. ಅವರು ಮಸೀದಿಗಳಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆ ಅಂತ ತಮಗೆ ಗೊತ್ತಿದೆ, ಸುಳ್ಳುಗಳನ್ನು ಹೇಳಿ ದೊಡ್ಡ ನಾಯಕನೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಸಿದ್ದರಾಮಯ್ಯ ಬಿಡಬೇಕು ಅಂತ ಗೌಡರು ಚುಚ್ಚಿದರು.

ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ ಕಾಂಗ್ರೆಸ್ಗೆ ಪ್ರತಿ ಜಿಲ್ಲೆಯಲ್ಲಿ ಸವಾಲು ಒಡ್ಡುವುದಾಗಿ ದೇವೇಗೌಡರು ಗುಡುಗಿದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿರುವುದಕ್ಕೆ ಬಲವಾದ ಕಾರಣಗಳೇ ಇಲ್ಲ ಎಂದು ದೇವೇಗೌಡರು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕುಣಿದು ಕುಪ್ಪಳಿಸಿದ ಹಾಡಿ ಜನರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್