ಬಾಗಲಕೋಟೆ: ಬಾದಾಮಿ ಪಟ್ಟಣ ಹಾಗೂ ಢಾಣಕಶಿರೂರ ಗ್ರಾಮದಲ್ಲಿ ಒಂದೇ ದಿನ 13ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ತಾಲೂಕಿನಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ ಗುಳೇದಗುಡ್ಡ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿದೆ.
ಪಟ್ಟಣ ಪ್ರವೇಶಿಸುವ ನಾಲ್ಕೂ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಅನಗತ್ಯವಾಗಿ ಯಾರೂ ಪಟ್ಟಣದಲ್ಲಿ ಸಂಚರಿಸುವಂತಿಲ್ಲ. ಹೊರಗಿನಿಂದ ಬರುವ ಎಲ್ಲರಿಗೂ ಚೆಕ್ಪೋಸ್ಟ್ನಲ್ಲಿ ತಡೆದು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪಟ್ಟಣದ ಬಾದಾಮಿ ನಾಕಾ, ಬಜಾರ ರಸ್ತೆ, ಶಕ್ತಿಚಿತ್ರಮಂದಿರ ರಸ್ತೆ, ಪವರ್ ಕ್ರಾಸ್, ಟಿಎಂಸಿ ರೋಡ್ ಸಂಚಾರ ಬಂದ್ ಮಾಡಲಾಗಿದೆ. ಪಟ್ಟಣದಲ್ಲಿ ಬೆಳಗ್ಗೆ 6 ರಿಂದ 9 ಗಂಟೆ ವರೆಗೂ ಮಾತ್ರ ದಿನಸಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಈಗಾಗಲೇ ನಿಯಮ ಮೀರಿದ್ದ ಒಂದು ಕಿರಾಣಿ ಅಂಗಡಿಯನ್ನು ತಹಶೀಲ್ದಾರ್ ಸೀಜ್ ಮಾಡಿದ್ದಾರೆ. ಕೊರೊನಾ ವೈರಸ್ ಹರಡದಂತೆ ಎಲ್ಲಾ ಕಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ.