ಮೈಸೂರು: ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಅವರಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿದಾಗ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಅದನ್ನು ಪಡೆಯಬೇಕೆಂದು ಚಡಪಡಿಸುತ್ತಾರೆ. ಹೀಗಾಗಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ (Donald Trump) ಇದ್ದಂತೆ. ಟ್ರಂಪಾಯಣದಂತೆ ಸಿದ್ದರಾಮಾಯಣ (Siddaramaiah) ನಡೆಯುತ್ತಿದೆ. ಸೋಲನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಸಿದ್ಧರಿಲ್ಲ. ಅವರದು ಕಾಂಗ್ರೆಸ್ ಸಂಸ್ಕಾರ; ಸಂಸ್ಕೃತಿ ಇಲ್ಲದ ಮನುಷ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಚಾನಕ್ ಆಗಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ಗೆ ಕರೆತಂದೆ ಎಂದು ಮಾತನಾಡಿದ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಅದೃಷ್ಟದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರು ಯಾರ ಯಶಸ್ಸನ್ನೂ ಸಹಿಸುವುದಿಲ್ಲ. ಜೊತೆಗೆ ತಮ್ಮ ಸಮುದಾಯದ ಸ್ವಾಮೀಜಿ ಹೋರಾಟ ಸಹ ಸಹಿಸಲ್ಲ. ಇವರಿಗೆ ಸ್ವಾರ್ಥ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಹೇಳಿದರು.
ನಾನು ಎನ್ನುವ ಸ್ವಾರ್ಥ ಸಿದ್ದರಾಮಯ್ಯಗೆ; ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಬಲರಾಗುತ್ತಿದ್ದಾರೆ
ರಾಜ್ಯದಲ್ಲಿ ಯಾವ ಅಹಿಂದ ಹೋರಾಟವೂ ಇಲ್ಲ. ಸಿದ್ದರಾಮಯ್ಯ, ಮಹದೇವಪ್ಪರ ಸ್ವಾರ್ಥದ ಹೋರಾಟ. ಸ್ವಾರ್ಥಕ್ಕಾಗಿ ಹಿಂದ, ಅಹಿಂದ ಎಂದು ಚಡಪಡಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಅಸ್ತಿತ್ವ ಮತ್ತು ಅಭದ್ರತೆ ಕಾಡುತ್ತಿದೆ. ಅವರಿಲ್ಲದೆ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಲಕ್ಷಾಂತರ ಜನರನ್ನು ಸೇರಿಸಿ ಯಶಸ್ಸು ಕಂಡಿದ್ದೇವೆ. ಸಿದ್ದರಾಮಯ್ಯಗೆ ನಾನು ಎನ್ನುವ ಸ್ವಾರ್ಥ ಇತ್ತು. ಆದರೆ ಈಗ ಸಮುದಾಯ ಅವರ ಜೊತೆ ಇಲ್ಲವೆಂದು ಅನಿಸುತ್ತಿದೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಬಲರಾಗುತ್ತಿದ್ದಾರೆ. ಪಕ್ಷ, ಸಮುದಾಯ ಎರಡರಲ್ಲೂ ಏಕಾಂಗಿಯಾಗುತ್ತಿದ್ದಾರೆ. ಹೀಗಾಗಿ ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ ಎಂದು ಹೇಳಿದರು.
ನಾನು ಮತ್ತು ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದವರು. ಸಿದ್ದರಾಮಯ್ಯ ಯಾವ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ. ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಅಹಿಂದ ಬಳಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಬಿಟ್ಟು ಹಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ. ಅಲ್ಲದೇ ಮುಸ್ಲಿಂರನ್ನು ಸಾಕಷ್ಟು ಬಾರಿ ಸೋಲಿಸಲು ಕಾರಣರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಕುರುಬ ರ‍್ಯಾಲಿಗೆ ಬೆದರಿ ತಪ್ಪು ನಡೆ ಇಡಲು ಮುಂದಾಗಿದ್ದಾರಾ ಸಿದ್ದರಾಮಯ್ಯ?