ಸುದ್ದಿ ವಿಶ್ಲೇಷಣೆ | ಕುರುಬ ರ‍್ಯಾಲಿಗೆ ಬೆದರಿ ತಪ್ಪು ನಡೆ ಇಡಲು ಮುಂದಾಗಿದ್ದಾರಾ ಸಿದ್ದರಾಮಯ್ಯ?
2005 ರಲ್ಲಿ ಮಾಡಿದಂತೆ ಹಿಂದ ಸಮಾವೇಶ ಮಾಡಿ ಬಿಜೆಪಿಯ ಕೆ. ಎಸ್. ಈಶ್ಬರಪ್ಪ ಅವರಿಗೆ ಟಾಂಗ್ ಕೊಡಲು ಹೊರಟಿರುವ ಸಿದ್ದರಾಮಯ್ಯ ಅವರ ತಂತ್ರದಿಂದ ಅವರ ಪಕ್ಷದ ಘನತೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ.
ಕಳೆದ ರವಿವಾರ ಬೆಂಗಳೂರಿನ ಹೊರವಲಯದಲ್ಲಿ ನಡೆದ ಕುರುಬ ಸಮುದಾಯದ ಬೃಹತ್ ಸಮಾವೇಶ, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ನಡುಗಿಸಿದಂತೆ ಕಾಣುತ್ತಿದೆ. ಕುರುಬ ಸಮಾಜ ತನ್ನನ್ನು ಬಿಟ್ಟು ಬೇರೆ ಯಾರನ್ನೂ ನಾಯಕ ಎಂದು ಒಪ್ಪಿಕೊಳ್ಳುವುದಿಲ್ಲ ಎಂಬ ನೇತ್ಯಾತ್ಮಕ ದೃಷ್ಟಿಕೋನದಿಂದ ಇದ್ದ ಸಿದ್ದರಾಮಯ್ಯ ಈಗ ಎಚ್ಚೆತ್ತುಕೊಂಡು, ಕೆ.ಎಸ್. ಈಶ್ವರಪ್ಪ ಅವರ ರ‍್ಯಾಲಿಗೆ ಟಾಂಗ್ ಕೊಡಲು ನಿರ್ಧರಿಸಿದ್ದಾರೆ. ಸಿದ್ದರಾಮಯ್ಯ ಮಾರ್ಚ್ ಎರಡನೇ ವಾರದಿಂದ ರಾಜ್ಯಾದ್ಯಂತ ಪ್ರವಾಸ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಪ್ರತಿ ಕಂದಾಯ ವಿಭಾಗದಲ್ಲಿಯೂ ಒಂದು ಕುರುಬ ಸಮಾವೇಶ ಮಾಡಿ, ಇತ್ತೀಚೆಗೆ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಆರಿಸಿ ಬಂದ ಸಮುದಾಯದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಆ ಮೂಲಕ, ಕುರುಬ ಸಮುದಾಯದ ವಿಶ್ವಾಸವನ್ನು ಪುನಃ ಗಳಿಸುವ ಪ್ರಯತ್ನ ಮಾಡಲು ಯೋಜನೆಯೊಂದನ್ನು ರೂಪಿಸಿದ್ದಾರೆ. ಪಂಚಾಯತ್ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ, ಕೆ.ಎಸ್. ಈಶ್ವರಪ್ಪ ಮತ್ತು ಎಚ್.ಎಮ್. ರೇವಣ್ಣ ಮತ್ತು ಸಮುದಾಯದ ಪೀಠಾಧಿಪತಿಗಳು ಸೇರಿ ನಡೆಸಿದ ಕುರುಬ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸುಮಾರು 1.5 ಲಕ್ಷ ಜನ ಬಂದಿದ್ದರು. ಕಂದಾಯ ಸಚಿವ, ಆರ್. ಅಶೋಕ ಸರಕಾರದ ಪರವಾಗಿ ಹಾಜರಿದ್ದು ಸಮುದಾಯದ ನಾಯಕರು ಕೊಟ್ಟ ಜ್ಞಾಪನಾ ಪತ್ರವನ್ನು ಸ್ವೀಕರಿಸಿದರು. ನಾಯಕರ ಹೇಳಿಕೆ ಪ್ರಕಾರ ತಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಮತ್ತು ಇದನ್ನು ಯಾವ ವಿಳಂಬವಿಲ್ಲದೇ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಒಂದು ವಿಶೇಷ ಎಂದರೆ, ಸಿದ್ದರಾಮಯ್ಯ ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳದಿರುವುದು. ಮೂಲಗಳ ಪ್ರಕಾರ ಇಡೀ ಕಾರ್ಯಕ್ರಮ ರೂಪಿಸುವಾಗ, ಸಿದ್ದರಾಮಯ್ಯ ಅವರ ಗಮನಕ್ಕೆ ಈ ವಿಚಾರಗಳು ಬಂದಿದ್ದವು. ಆಗ ಪಾದಯಾತ್ರೆಗೆ ತಾತ್ವಿಕ ಒಪ್ಪಿಗೆ ಕೊಟ್ಟಿದ್ದ ಸಿದ್ದರಾಮಯ್ಯ ಕೊನೆಗೆ ಪಾದಯಾತ್ರೆಗೂ ಸೇರಿಕೊಳ್ಳಲಿಲ್ಲ ಮತ್ತು ಪಾದಯಾತ್ರೆ ಬೆಂಗಳೂರಿಗೆ ತಲುಪಿ ಇಲ್ಲಿ ನಡೆದ ಸಮಾವೇಶದಲ್ಲಿ ಕೂಡ ಭಾಗವಹಿಸಲಿಲ್ಲ.
ಆಗಿದ್ದೇ ಬೇರೆ ಕುರುಬರನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದನ್ನು ಕೇಂದ್ರವೇ ಜಾರಿಗೊಳಿಸಬೇಕು. ಕುರುಬರ ಪಾದಯಾತ್ರೆಗೂ ಮುಂಚೆ ಅವರ ಲೆಕ್ಕಾಚಾರವೇ ಬೇರೆ ಆಗಿತ್ತು. ತಾನು ಅಧಿಕಾರದಲ್ಲಿ ಇದ್ದಾಗ ಗೊಂಡ ಮತ್ತು ರಾಜಗೊಂಡ ಎಂಬ ಎರಡು ಸಮುದಾಯಗಳನ್ನು ಎಸ್ಟಿಗೆ ಸೇರಿಸಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದೆ. ಕೇಂದ್ರ ಸರಕಾರ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಶಿಫಾರಸ್ಸನ್ನು ಕೇಂದ್ರಕ್ಕೆ ಕಳಿಸಬೇಕು. ಅದನ್ನು ಒಪ್ಪಿಕೊಳ್ಳುತ್ತೆ ಎಂಬ ನಂಬಿಕೆ ಇಲ್ಲ, ಹಾಗಾಗಿ ಈ ಪಾದಯಾತ್ರೆ ಮತ್ತು ಸಮಾವೇಶ ಮಾಡಿ ಪ್ರಯೋಜನವಿಲ್ಲ ಎಂಬುದು ಸಿದ್ದರಾಮಯ್ಯನವರ ವಾದವಾಗಿತ್ತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮಣಿಸಲು ಮಾಡಿರೋ ತಂತ್ರದ ಭಾಗವಾಗಿ ಮಾಡಿದರೋ ಅಥವಾ ನಿಜವಾಗಿಯೂ ಕಳಕಳಿಯಿಂದ ಮಾಡಿದರೋ, ಸಮಾಜದ ಇತರೇ ನಾಯಕರ ಜೊತೆಗೆ ಚಳುವಳಿಯ ಮೊದಲ ಹಂತದ ಯಶಸ್ಸಿಗೆ ಈಶ್ವರಪ್ಪನವರ ಕಾಣಿಕೆ ತುಂಬಾ ಇತ್ತು. ರವಿವಾರ ನಡೆದ ಆ ಸಮಾವೇಶದಲ್ಲಿ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಎಚ್.ಎಮ್. ರೇವಣ್ಣನವರನ್ನು ಬಿಟ್ಟರೆ ಬೇರೆ ಯಾರೋಬ್ಬರೂ ಸಿದ್ದರಾಮಯ್ಯ ಅವರ ಹೆಸರು ಹೇಳಿದಂತೆ ಕಾಣಲಿಲ್ಲ. ರೇವಣ್ಣ ಸಿದ್ದರಾಮಯ್ಯನವರ ಹೆಸರೆತ್ತಿದಾಗ ಸುಮಾರು ಹತ್ತು ನಿಮಿಷ ಜನ ಸೀಟಿ ಹೊಡೆದು ತಮ್ಮ ಹರ್ಷ ವ್ಯಕ್ತ ಪಡಿಸಿದ್ದರು. ಇದನ್ನು ನೋಡಿದರೆ ಗೊತ್ತಾಗುತ್ತೆ: ಸಿದ್ದರಾಮಯ್ಯ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ ಎಂದು.
ಅದರೂ ಮೊನ್ನೆ ನಡೆದ ಸಮಾವೇಶ ನೋಡಿ ಸ್ವಲ್ಪ ವಿಚಲಿತರಾಗಿರುವಂತೆ ಕಾಣುತ್ತಿರುವ ಸಿದ್ದರಾಮಯ್ಯ ಈಗ ಪ್ರತಿ ಕಂದಾಯ ವಿಭಾಗದಲ್ಲಿ ಒಂದೊಂದು ಸಮಾವೇಶ ಮಾಡಿ ಗ್ರಾಮ ಪಂಚಾಯತ ಸದಸ್ಯರನ್ನು ಸನ್ಮಾನಿಸಲು ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಹಾಗೂ ಆ ಸಮಾರಂಭಗಳಲ್ಲಿ ತಾನು ಕುರುಬ ಸಮುದಾಯಕ್ಕೆ ಏನೆಲ್ಲಾ ಮಾಡಿದ್ದೇನೆ ಎಂದು ಹೇಳುವ ಉದ್ದೇಶವಿಟ್ಟುಕೊಂಡಿದ್ದಾರೆ. ಆದರೆ, ಆ ಸಮಾರಂಭಗಳಿಗೂ ಮೊನ್ನೆ ನಡೆದ ಸಮಾವೇಶಕ್ಕೂ ವ್ಯತ್ಯಾಸವಿದೆ ಎಂಬುದನ್ನು ಅವರು ಮರೆತಂತಿದೆ. ಅವರು ಏನೇ ಮಾಡಿದರೂ ಮೊನ್ನೆ ನಡೆದ ಸಮಾವೇಶಕ್ಕೆ ಸಿಕ್ಕ ಪ್ರಚಾರ ಸಿದ್ದರಾಮಯ್ಯ ಅವರು ನಡೆಸಲು ಉದ್ದೇಶಿಸಿರುವ ಸಮಾರಂಭಗಳಿಗೆ ಸಿಗುವ ಸಾಧ್ಯತೆ ಕಡಿಮೆ.
ಹಾಗಾದರೆ, ಬಿಜೆಪಿ ನಾಯಕರು ಕೇಳಿದಂತೆ, ಸಿದ್ದರಾಮಯ್ಯ ಇದನ್ನು ಪಕ್ಷದ ಬ್ಯಾನರಿನ ಅಡಿ ಏಕೆ ಮಾಡುತ್ತಿಲ್ಲ? ಕೆಲವೇ ಜಾತಿಯ ಗ್ರಾಮ ಪಂಚಾಯತ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಸನ್ಮಾನ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ನಿಯತ್ತಾಗಿರುವ ಆದರೆ, ಸ್ವತಂತ್ರವಾಗಿ ಗೆದ್ದಿರುವ ಬೇರೆ ಜಾತಿಯ ಗ್ರಾಮ ಪಂಚಾಯತ ಸದಸ್ಯರಿಗೆ ಬೇಸರ ಆಗುವುದಿಲ್ಲವೇ? ಖಂಡಿತ. ಹಾಗೊಮ್ಮೆ ಸಿದ್ದರಾಮಯ್ಯ ಇದನ್ನು ಮಾಡಿದರೆ ಪಕ್ಷದ ಘನತೆಗೆ ಪೆಟ್ಟು ಬೀಳುತ್ತೆ ಎಂದು ಪಕ್ಷ ಹೇಳುವ ಸಾಧ್ಯತೆ ಇದೆ. ಈ ಹಿಂದೆ 2005 ರಲ್ಲಿ ಅಹಿಂದ ಸಮಾವೇಶ ಮಾಡಿದಾಗಲೂ ಕಾಂಗ್ರೆಸ್ ನಾಯಕರು ಆಕ್ಷೇಪ ಮಾಡಿದ್ದರು. ಆದ್ದರಿಂದ ಈಗಲೂ, ಪಕ್ಷ ಇಂತಹ ಸಮಾವೇಶಕ್ಕೆ ಅವಕಾಶ ಕೊಡುವ ಸಾಧ್ಯತೆ ತುಂಬಾ ಕಡಿಮೆ. ಹಾಗಾಗಿ ತಮ್ಮದೇ ಸಮುದಾಯದ ಒಂದು ಸಂಸ್ಥೆ ಮೂಲಕ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಅವರು ಮುಂದಾಗಿದ್ದಾರೆ. ಇದರಿಂದ ಅವರು ಸಮಾಜಕ್ಕೆ ಒಂದು ಸಂದೇಶ ಕೊಡುವಲ್ಲಿ ಸಫಲರಾಗಬಹುದು, ಆದರೆ, ಬೇರೆ ವರ್ಗದ ಗ್ರಾಮ ಪಂಚಾಯತ ಸದಸ್ಯರು ಅವರಿಂದ ಮತ್ತೂ ಕಾಂಗ್ರೆಸ್ ಜೊತೆ ಬೇಸರಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಎಸ್ಟಿ ಪ್ರವರ್ಗದ ಬೇಡಿಕೆಯೊಂದಿಗೆ ರವಿವಾರ ಕುರಬ ಸಮಾಜದ ಬೃಹತ್ ರ‍್ಯಾಲಿ.. ಸಿದ್ದು, ಇನ್ನೂ ಕೆಲವರ ಗೈರು ಸಾಧ್ಯತೆ
Published On - 7:21 pm, Thu, 11 February 21