YS Sharmila: ತೆಲಂಗಾಣದತ್ತ ಛಲಗಾತಿ ವೈ.ಎಸ್.ಶರ್ಮಿಳಾ ಚಿತ್ತ; ಘಟಾನುಘಟಿ ನಾಯಕರಿಗೆ ಏಕಿಷ್ಟು ಹೆದರಿಕೆ?

ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಮತ್ತು ಟಿಆರ್​​ಎಸ್ ಸಹ ಶರ್ಮಿಳಾ ಹೊಸ ಪಕ್ಷ ರಚಿಸುವ ಬಗ್ಗೆ ಹಗುರವಾಗಿ ಮಾತಾಡಿವೆ. ಈ ಪಕ್ಷಗಳು ಆಡುತ್ತಿರುವ ಮಾತಿನಲ್ಲಿ ಉಡಾಫೆಗಿಂತ ಜಾಸ್ತಿ ಭೀತಿಯಿದೆ. ಅದಕ್ಕೇನು ಕಾರಣ ಗೊತ್ತೇ?

YS Sharmila: ತೆಲಂಗಾಣದತ್ತ ಛಲಗಾತಿ ವೈ.ಎಸ್.ಶರ್ಮಿಳಾ ಚಿತ್ತ; ಘಟಾನುಘಟಿ ನಾಯಕರಿಗೆ ಏಕಿಷ್ಟು ಹೆದರಿಕೆ?
ಆಂಧ್ರ ವಿಧಾನಸಭೆ ಚುನಾವಣೆ ಸಂದರ್ಭ ಹೀಗಿತ್ತು ಶರ್ಮಿಳಾ ಪ್ರಚಾರ ವೈಖರಿ (ಸಂಗ್ರಹ ಚಿತ್ರ)
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 10, 2021 | 10:06 PM

‘ಆಕೆ ಪಕ್ಷವನ್ನು ರಚಿಸುವ ಮಾತು ಹಾಗಿರಲಿ, ತೆಲಂಗಾಣ ಪ್ರತ್ಯೇಕ ರಾಜ್ಯವಾಗುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಆಕೆ ಅದಕ್ಕಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ನೂರಾರು ಜನರ ಕುಟುಂಬಗಳ ಕ್ಷಮಾಪಣೆಯನ್ನು ಮೊದಲು ಕೇಳಲಿ, ಅದಾದ ನಂತರ ತೆಲಂಗಾಣದಲ್ಲಿ ಪಕ್ಷ ರಚಿಸುವ ಬಗ್ಗೆ ಮಾತಾಡಲಿ. ತೆಲಂಗಾಣದಲ್ಲಿ ಆಕೆ ಹೊರಗಿನವರು ಎನ್ನುವುದನ್ನೂ ನೆನಪಿಟ್ಟುಕೊಳ್ಳಲಿ!’ ಹಾಗಂತ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಕಿರಿಯ ಸಹೋದರಿ ವೈ ಎಸ್ ಶರ್ಮಿಳಾ ಅವರ ಕುರಿತು ಮಾತಾಡಿದವರು ತೆಲಂಗಾಣದ ಮಲ್ಕಾಜ್​ಗಿರಿಯ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ ಅನುಮುಲ ರೇವಂತ್ ರೆಡ್ಡಿ.

ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​​ಎಸ್) ಪಕ್ಷಗಳು ಸಹ ಶರ್ಮಿಳಾ ಹೊಸ ಪಕ್ಷ ರಚಿಸುವ ಬಗ್ಗೆ ಹಗುರವಾಗಿ ಮಾತಾಡಿವೆ. ಈ ಪಕ್ಷಗಳು ಆಡುತ್ತಿರುವ ಮಾತಿನಲ್ಲಿ ಉಡಾಫೆಗಿಂತ ಜಾಸ್ತಿ ಭೀತಿ ಇದೆ ಎನ್ನುವುದು ಸ್ಪಷ್ಟ. ಯಾಕೆಂದರೆ, ಜಗನ್ ಮೋಹನ್ ರೆಡ್ಡಿ ಅವರ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷವು (ವೈಎಸ್​ಆರ್​ಸಿಪಿ) ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದ ಚಂದ್ರಬಾಬು ನಾಯ್ಡು ಮತ್ತವರ ತೆಲುಗು ದೇಶಂ ಪಕ್ಷವನ್ನು 2019ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಧೂಳೀಪಟ ಮಾಡಿ ಅಧಿಕಾರಕ್ಕೆ ಬರುವಂತೆ ಮಾಡಿದ್ದರಲ್ಲಿ ಎಲ್ಲರಿಗಿಂತ ಮಹತ್ತರ ಮತ್ತು ನಿರ್ಣಾಯಕ ಪಾತ್ರ ನಿರ್ವಹಿಸಿದ್ದು ಶರ್ಮಿಳಾ ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ.

ಈ ಚುನಾವಣೆ ನಡೆಯುವ ಮೊದಲು ಆಕೆ ಆಂಧ್ರಪ್ರದೇಶದಾದ್ಯಂತ ಬಸ್​ ಯಾತ್ರೆ ನಡೆಸಿ ತನ್ನಣ್ಣನ ಪರ ಪ್ರಚಾರ ನಡೆಸಿದ್ದರು. ಮೂಲಗಳ ಪ್ರಕಾರ ಆಕೆ ಸಮಾರು 1,600 ಕಿಲೊಮೀಟರ್​ಗಳಷ್ಟು ದೂರವನ್ನು ಕ್ರಮಿಸಿ 39 ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತಾಡಿದ್ದರು. ತಾವೇ ಖುದ್ದು ಸಹಿ ಮಾಡಿದ್ದ 20,000 ಕ್ಯಾಪ್​ಗಳನ್ನು ರಾಜ್ಯದೆಲ್ಲೆಡೆ ಹಂಚಿದ್ದರು. ಅವರು ಪ್ರಯಾಣಿಸುತ್ತಿದ್ದ ಬಸ್​ಗಳ ಮೇಲೆ, ‘ಪ್ರಜಾ ತೀರ್ಪು- ಬೈ ಬೈ ಬಾಬು’ ಎಂದು ಬರೆಯಲಾಗಿತ್ತು ಮತ್ತು ಅದೇ ವೈಎಸ್​ಆರ್​ಸಿಪಿ ಪಕ್ಷದ ಚುನಾವಣಾ ಘೋಷವಾಕ್ಯವೂ ಆಗಿತ್ತು.

ಇದನ್ನೂ ಓದಿ: ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರ ಘೋಷಿಸಿದ ವೈ.ಎಸ್.ಶರ್ಮಿಳಾ; ಟಿಆರ್​ಎಸ್ ನಾಯಕರಲ್ಲಿ ಆತಂಕ

YS Sharmila

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಕುಟುಂಬ

47-ವರ್ಷ ವಯಸ್ಸಿನ ಶರ್ಮಿಳಾ ಸುಮಾರು 10 ವರ್ಷಗಳ ಹಿಂದೆಯೇ ಪಕ್ಷವನ್ನು ಬಲಪಡಿಸಲು ಮತ್ತು 2012ರ ಆಂಧ್ರಪ್ರದೇಶ ದಲ್ಲಿ ನಡೆದ 18 ವಿಧಾನಸಭಾ ಮತ್ತು 1 ಲೋಕಸಭಾ ಉಪಚುನಾವಣೆಯಲ್ಲಿ ವೈಎಸ್​ಆರ್​ಸಿಪಿ ಪಕ್ಷದ ಪರ ಪ್ರಚಾರ ನಡೆಸುವ ಮುನ್ನ ಪಾದಯಾತ್ರೆ ನಡೆಸಿದ್ದರು. ನಿಮಗೆ ನೆನಪಿರಲಿ, ಆಗ ಜಗನ್ ಮೋಗನ್ ರೆಡ್ಡಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಆಣ್ಣನ ಗೈರು ಹಾಜರಿಯಲ್ಲಿ ತನ್ನ ತಾಯಿ ವೈ.ಎಸ್. ವಿಜಯಮ್ಮ ಅವರೊಂದಿಗೆ ಕಡಪ ಜಿಲ್ಲೆಯ ಇಡುಪುಲಪಾಯ ಹೆಸರಿನ ಊರಿನಿಂದ ಶುರುಮಾಡಿ 14 ಜಿಲ್ಲೆಗಳಲ್ಲಿ ಪಾದಯಾತ್ರೆ ಕೈಗೊಂಡ ಆಕೆ ಜನ ಮತ್ತು ಮತದಾರರ ಮೇಲೆ ಅದ್ಯಾವ ಮಟ್ಟದ ಪರಿಣಾಮ ಬೀರಿದರೆಂದರೆ 18 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಮತ್ತು ಲೋಕಸಭಾ ಕ್ಷೇತ್ರಕ್ಕಾಗಿ ನಡೆದ ಉಪಚುನಾವಣೆಯಲ್ಲೂ ವೈಎಸ್​ಆರ್​ಸಿಪಿ ದಿಗ್ವಿಜಯ ಸಾಧಿಸಿತು. ರಾಜಕೀಯಕ್ಕೆ ತಮ್ಮ ಆಗಮನವನ್ನು ಶರ್ಮಿಳಾ ಹಾಗೆ ಅಭೂತಪೂರ್ವ ರೀತಿಯಲ್ಲಿ ಸಾರಿದ್ದರೂ ಸರ್ಕಾರದ ಭಾಗವಾಗಲಿಲ್ಲ. 2019ರಲ್ಲಿ ಅಣ್ಣನೇ ರಾಜ್ಯದ ಮುಖ್ಯಮಂತ್ರಿಯಾದರೂ ಶರ್ಮಿಳಾ ಅಧಿಕಾರಕ್ಕಾಗಿ ಹಪಹಪಿಸದೆ ತೆರೆಮರೆಯಲ್ಲೇ ಉಳಿದುಕೊಂಡರು.

ವೈಎಸ್​ಆರ್​ಸಿಪಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶರ್ಮಿಳಾ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿರುವುದು ಆಂಧ್ರಪದೇಶ ಮತ್ತು ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ. ಮಂಗಳವಾರದಂದು ಅಕೆ ಹೈದರಾಬಾದಿನಲ್ಲಿರುವ ತಮ್ಮ ಲೊಟಸ್ ಪಾಂಡ್ ನಿವಾಸದಲ್ಲಿ ಆಪ್ತವಲಯದ ಬೆಂಬಲಿಗರೊಂದಿಗೆ (ಅವರಲ್ಲಿ ಹೆಚ್ಚಿನವರು ನಲಗೊಂಡ ಜಿಲ್ಲೆಯ ವೈಎಸ್​ಆರ್​ಸಿಪಿ ಪಕ್ಷದ ಪ್ರತಿನಿಧಿಗಳು) ಮಾತುಕತೆ ನಡೆಸಿದರು. ಆಕೆಯ ಮನೆಮುಂದೆ ಮತ್ತು ನಗರದ ಅನೇಕ ಭಾಗಗಳಲ್ಲಿ ಬಿಲ್​ಬೋರ್ಡ್ ಮತ್ತು ಬ್ಯಾನರ್​ಗಳನ್ನು ಕಟ್ಟಲಾಗಿತ್ತು. ಅವುಗಳಲ್ಲಿ ಆವಿಭಜಿತ ಆಂಧ್ರಪದೇಶದ ಮುಖ್ಯಮಂತ್ರಿಯಾಗಿದ್ದ ಆಕೆಯ ತಂದೆ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಮತ್ತು ತಾಯಿ ವಿಜಯಮ್ಮ ಅವರೊಂದಿಗೆ ತನ್ನ ಫೋಟೊಗಳು ಮಾತ್ರ ಇದ್ದವು. ಜಗನ್ ಮೋಹನ್​ ರೆಡ್ಡಿಯ ಭಾವಚಿತ್ರ ಒಂದರಲ್ಲೂ ಇರಲಿಲ್ಲ!

ಅದರರ್ಥ ಆಕೆ ಮತ್ತು ಜಗನ್ ನಡುವೆ ಮನಸ್ತಾಪ ಶುರುವಾಗಿದೆಯೇ?

ಮಾಧ್ಯಮವೊಂದರ ಜೊತೆ ಮಾತಾಡಿರುವ ಪಕ್ಷದ ಹಿರಿಯ ನಾಯಕ ಮತ್ತು ರೆಡ್ಡಿ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಜ್ಜಲ ರಾಮಕ್ರಿಷ್ಣಾ ರೆಡ್ಡಿ ಅವರ ಪ್ರಕಾರ ಅಣ್ಣ-ತಂಗಿಯ ನಡುವೆ ಭಿನಾಭಿಪ್ರಾಯಗಳೇನೂ ಇಲ್ಲ ಆಂತ ಹೇಳಿದರು.

‘ವೈಯಕ್ತಿಕವಾಗಿ ಜಗನ್ ಮತ್ತು ಶರ್ಮಿಳಾ ನಡುವೆ ಯಾವುದೇ ಮನಸ್ತಾಪವಿಲ್ಲ, ಅದರೆ ಅಕೆ ಹೊಸ ಪಾರ್ಟಿಯನ್ನು ಹುಟ್ಟುಹಾಕುವ ನಿರ್ಧಾರದ ಬಗ್ಗೆ ಅಪಸ್ವರಗಳಿವೆ. ಜಗನ್​ಗೆ ಆಂಧ್ರಪ್ರದೇಶದಲ್ಲೇ ಜನಸೇವೆ ಮಾಡುವ ಉದ್ದೇಶವಿರುವುದರಿಂದ ಅವರು ತೆಲಂಗಾಣದಲ್ಲಿ ಪಕ್ಷವನ್ನು ವಿಸ್ತರಿಸುವ ಬಗ್ಗೆ ಯೋಚಿಸಲಿಲ್ಲ,’ ಎಂದು ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ವೈ.ಎಸ್.ಶರ್ಮಿಳಾ ಮತ್ತೊಂದು ಪಾದಯಾತ್ರೆ: ಶೀಘ್ರ ಘೋಷಣೆ ಹೊರಬೀಳುವ ಸಾಧ್ಯತೆ

YS Sharmila

ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ

ಮಂಗಳವಾರದಂದು ನಡೆದ ಸಭೆಯಲ್ಲಿ ಶರ್ಮಿಳಾ ಹೊಸ ಪಕ್ಷವೊಂದನ್ನು ರಚಿಸುವ ಬಗ್ಗೆ ಸುಳಿವು ನೀಡಿದರಾದರೂ ಆ ಕುರಿತು ಹೆಚ್ಚಿನ ವಿವರಣೆ ನೀಡಲಿಲ್ಲ.

‘ತನ್ನಿಡೀ ಬದುಕನ್ನು ಆಂಧ್ರಪ್ರದೇಶದ ಶ್ರೇಯಸ್ಸಿಗಾಗಿ ಮೀಸಲಿಟ್ಟ ನನ್ನ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಹುಟ್ಟು ಹಾಕಿದ ಪರಂಪರೆಯನ್ನು ಪುನರ್ ಸ್ಥಾಪಿಸುವ ಉದ್ದೇಶ ನನಗಿದೆ. ತೆಲಂಗಾಣದ ಜನ ಅತೃಪ್ತಿ ಮತ್ತು ಅಸಂತುಷ್ಟಿಯ ಬೇಗುದಿಯಲ್ಲಿ ಬೇಯುತ್ತಿದ್ದಾರೆ. ಅವರು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ ಮತ್ತು ಅವರಿಗಾಗಿ ಬದಲಾವಣೆ ತರುವ ಮತ್ತು ‘ರಾಜಣ್ಣ ರಾಜ್ಯಂ’ ಪುನರ್ ಸ್ಥಾಪಿಸುವ ಗುರಿ ನನಗಿದೆ, ಎಂದು ಆಕೆ ಹೇಳಿದರು. 2004 ರಿಂದ 2009ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜಶೇಖರ ರೆಡ್ಡಿಯವರ ಅಧಿಕಾರಾವಧಿಯನ್ನು (ರಾಜಣ್ಣ ರಾಜ್ಯಂ) ಶರ್ಮಿಳಾ, ‘ಸುವರ್ಣಯುಗ’ ಎಂದು ಬಣ್ಣಿಸಿದರು

ನಿನ್ನೆ ನಡೆದ ಸಭೆಯಲ್ಲಿ ರಾಜಶೇಖರ್ ರೆಡ್ಡಿಯವರೊಂದಿಗಿದ್ದ ಪಕ್ಷದ ನಿಷ್ಠಾವಂತರೂ ಪಾಲ್ಗೊಂಡಿದ್ದರು. ತೆಲಂಗಾಣದ ಜ್ವಲಂತ ಸಮಸ್ಯೆಗಳನ್ನು ಮತ್ತು ರಾಜ್ಯದ ವಸ್ತುಸ್ಥಿತಿಯನ್ನು ತಿಳಿದುಕೊಳ್ಳುವ ಜವಾಬ್ದಾರಿಯನ್ನು ಪಕ್ಷದ ಹಿರಿಯರಿಗೆ ಶರ್ಮಿಳಾ ಒಪ್ಪಿಸಿದ್ದಾರೆ. ಸಭೆ ಮುಗಿದ ನಂತರ ಮಾಧ್ಯಮದವರು, ‘ಹಾಗಾದರೆ, ನೀವು ಹೊಸ ಪಕ್ಷ ರಚಿಸುತ್ತೀರಾ,’ ಎಂದು ಕೇಳಿದ ಪ್ರಶ್ನೆಗೆ, ಆಕೆ, ‘ಇಷ್ಟರಲ್ಲೇ ನಿಮಗೆ ಅದರ ಬಗ್ಗೆ ಗೊತ್ತಾಗಲಿದೆ’ ಎಂದು ಹೇಳಿದರು.

ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗಳು 2023ರಲ್ಲಿ ನಡೆಯಲಿವೆ. ಶರ್ಮಿಳಾಗೆ ಎರಡು ವರ್ಷಗಳ ಕಾಲಾವಕಾಶವಿದೆ. ಅಷ್ಟರಲ್ಲಿ ಅವರು ಆಂಧ್ರಪ್ರದೇಶದಲ್ಲಿ ಮಾಡಿದ ಚಮತ್ಕಾರವನ್ನು ಇಲ್ಲೂ ಪುನರಾವರ್ತಿಸುವರೇ ಎನ್ನುವುದು ಕುತೂಹಲಕಾರಿ ಆಂಶವಾಗಿದೆ.

ಶರ್ಮಿಳಾ ಅವರ ನಿರ್ಧಾರ ಕುರಿತು ಪ್ರತಿಕ್ರಿಯೆ ನೀಡಿರುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ‘ಹೊಸ ಪಕ್ಷವನ್ನು ಸ್ಥಾಪಿಸಿವುದು ಹುಡುಗಾಟಿಕೆಯ ಮಾತಲ್ಲ. ಹಿಂದೆ ತೆಲಂಗಾಣದಲ್ಲಿ ಹಲವಾರು ಜನ ಅಂಥ ಪ್ರಯತ್ನ ಮಾಡಿರುವುದನ್ನು ನಾನು ನೋಡಿದ್ದೇನೆ. ಮಾಜಿ ಲೋಕಸಭಾ ಸದಸ್ಯರಾದ ಅಲೆ ನರೇಂದ್ರ, ವಿಜಯಶಾಂತಿ ಮತ್ತು ದೇವೇಂದರ್ ಗೌಡ್​ ಮುಂತಾದವರು ಹೊಸ ಪಕ್ಷ ರಚಿಸುವ ಪ್ರಯತ್ನದಲ್ಲಿ ಮಣ್ಣುಮುಕ್ಕಿದ್ದು ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದ್ದಾರೆ.

ಕ್ರೈಸ್ತ ಧರ್ಮದವರಾಗಿರುವ ಶರ್ಮಿಳಾ ಅವರ ಪತಿ ಅನಿಲ್ ಕುಮಾರ್ ಇವಾಂಜೆಲಿಸ್ಟ್ (ಧರ್ಮ ಪ್ರಚಾರಕ) ಆಗಿದ್ದಾರೆ. ದಂಪತಿಗೆ ಇಬ್ಬರು-ರಾಜಾ ರೆಡ್ಡಿ ಮತ್ತು ಅಂಜಿಲಿ ರೆಡ್ಡಿ ಹೆಸರಿನ ಮಕ್ಕಳಿದ್ದಾರೆ. ಹೊಸ ಪಕ್ಷ ಸ್ಥಾಪಿಸುವ ಅವರ ನಿರ್ಧಾರ ತೆಲಂಗಾಣದಲ್ಲಿ ಸಂಚಲನ ಮೂಡಿಸಿರಿರುವುದು ಈ ಸಮಯದ ಸತ್ಯ ಸಂಗತಿ.

Published On - 9:56 pm, Wed, 10 February 21

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ