Telangana Politics: ತೆಲಂಗಾಣದಲ್ಲಿ ವೈ.ಎಸ್.ಶರ್ಮಿಳಾ ಮತ್ತೊಂದು ಪಾದಯಾತ್ರೆ: ಶೀಘ್ರ ಘೋಷಣೆ ಹೊರಬೀಳುವ ಸಾಧ್ಯತೆ
Telangana Politics: ಹೈದರಾಬಾದ್ನಲ್ಲಿ ಅಭಿಮಾನಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಶರ್ಮಿಳಾ ತನ್ನ ಅಪ್ಪ ಅಧಿಕಾರದಲ್ಲಿದ್ದ 2004- 2009ರ ಅವಧಿಯು ಸುವರ್ಣ ಕಾಲವಾಗಿತ್ತು. ಅದೇ ಕಾಲವನ್ನು ತೆಲಂಗಾಣಕ್ಕೆ ಮರಳಿ ತರಬೇಕು ಎಂದು ನಾನು ಬಯಸುತ್ತೇನೆ ಎಂದಿದ್ಗಾರೆ.
ಹೈದರಾಬಾದ್: ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸೋದರಿ ವೈ.ಎಸ್.ಶರ್ಮಿಳಾ ನಿವಾಸ ಲೋಟಸ್ ಪಾಂಡ್ ಬಳಿ ಬುಧವಾರವೂ (ಫೆ.10) ಚುರುಕಿನ ರಾಜಕೀಯ ಚಟುವಟಿಕೆಗಳು ಕಂಡುಬಂದವು. ತೆಲಂಗಾಣದ ಹಲವು ಜಿಲ್ಲೆಗಳಿಂದ ಬಂದಿದ್ದ ಸಂಯುಕ್ತ ಆಂಧ್ರದ ದಿವಂಗತ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅಭಿಮಾನಿಗಳನ್ನು ಶರ್ಮಿಳಾ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಜಿಲ್ಲಾವಾರು ಸಭೆಗಳನ್ನು ನಡೆಸಿ ಅಭಿಪ್ರಾಯ ತಿಳಿದುಕೊಂಡ ಶರ್ಮಿಳಾ, ನಿನ್ನೆ (ಫೆ.9) ನಡೆದ ಸಮಾವೇಶದ ಆಗುಹೋಗುಗಳ ಬಗ್ಗೆ ಚರ್ಚಿಸಿದರು. ತಮಗೆ ತೆಲಂಗಾಣದಲ್ಲಿ ಇರಬಹುದಾದ ಜನಬೆಂಬಲದ ಬಗ್ಗೆ ಮಾಹಿತಿ ಪಡೆದುಕೊಂಡರು.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಳ್ಲ ಪಟ್ಟಣದಿಂದ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಪಾದಯಾತ್ರೆ ಆರಂಭಿಸುವ ಬಗ್ಗೆ ಅಭಿಮಾನಿಗಳ ಜೊತೆಗೆ ಚರ್ಚಿಸಿದರು. ಈ ಬಗ್ಗೆ ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ತೆಲಂಗಾಣ ಜನರು ಸಂತೋಷವಾಗಿಲ್ಲ ತಮ್ಮ ರಾಜಕೀಯ ನಡೆ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಶರ್ಮಿಳಾ, ಸಂಯುಕ್ತ ಆಂಧ್ರಪ್ರದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮಪ್ಪ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪರಂಪರೆಯನ್ನು ಮರಳಿ ತರುವ ಪ್ರಯತ್ನ ಮಾಡುತ್ತಿದ್ದೇನೆ. ತೆಲಂಗಾಣದ ಜನರು ಸಂತೋಷವಾಗಿಲ್ಲ. ಅವರು ಬದಲಾವಣೆ ಬಯಸುತ್ತಿದ್ದಾರೆ. ನಾವು ‘ರಾಜಣ್ಣ ರಾಜ್ಯಂ’ ಮರಳಿ ತರಲಿದ್ದೇವೆ ಎಂದಿದ್ದಾರೆ. ವೈ.ಎಸ್.ರಾಜಶೇಖರ ರೆಡ್ಡಿ ಅವಧಿಯಲ್ಲಿ ಸಂಯುಕ್ತ ಆಂಧ್ರಪ್ರದೇಶವನ್ನು ‘ರಾಜಣ್ಣ ರಾಜ್ಯಂ’ ಎಂದು ಬಿಂಬಿಸಲಾಗಿತ್ತು.
ಹೊಸ ಪಕ್ಷ ಘೋಷಿಸುವ ಯೋಜನೆಯಿದೆಯೇ ಎಂದು ಕೇಳಿದಾಗ, ಈ ಬಗ್ಗೆ ಶೀಘ್ರದಲ್ಲೇ ನಿಮಗೆ ತಿಳಿಯಲಿದೆ ಎಂದು ಶರ್ಮಿಳಾ ಉತ್ತರಿಸಿದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಏತನ್ಮಧ್ಯೆ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಜಗನ್ ಮೋಹನ್ ರೆಡ್ಡಿ ಮತ್ತು ಶರ್ಮಿಳಾ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಆದರೆ ಅವರಿಬ್ಬರ ರಾಜಕೀಯ ಚಿಂತನೆಗಳು ಭಿನ್ನವಾಗಿವೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈಎಸ್ ಆರ್ ಪಕ್ಷದ ನಾಯಕಿ ಸಜ್ಜಲಾ ರಾಮಕೃಷ್ಣ ರೆಡ್ಡಿ, ಅವರಿಬ್ಬರ ನಡುವೆ ಅಭಿಪ್ರಾಯ ವ್ಯತ್ಯಾಸಗಳು ಇಲ್ಲ. ಆದರೆ ಆಕೆಯ ರಾಜಕೀಯ ಪ್ರವೇಶದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಜಗನ್ ಅವರು ತೆಲಂಗಾಣದಲ್ಲಿ ತಮ್ಮ ಪಕ್ಷವನ್ನು ವಿಸ್ತರಿಸಿಲ್ಲ. ಅವರು ಆಂಧ್ರಪ್ರದೇಶದ ಜನರ ಸೇವೆ ಮಾಡಲು ಇಚ್ಛಿಸುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರ ಘೋಷಿಸಿದ ವೈ.ಎಸ್.ಶರ್ಮಿಳಾ; ಟಿಆರ್ಎಸ್ ನಾಯಕರಲ್ಲಿ ಆತಂಕ
ಮಂಗಳವಾರ ಹೈದರಾಬಾದ್ನಲ್ಲಿ ಜನಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಶರ್ಮಿಳಾ ತನ್ನ ಅಪ್ಪ ಅಧಿಕಾರದಲ್ಲಿದ್ದ 2004- 2009ರ ಅವಧಿಯು ಸುವರ್ಣ ಕಾಲವಾಗಿತ್ತು. ಅದೇ ಕಾಲವನ್ನು ತೆಲಂಗಾಣಕ್ಕೆ ಮರಳಿ ತರಬೇಕು ಎಂದು ನಾನು ಬಯಸುತ್ತೇನೆ. ನನಗೆ ಇಲ್ಲಿನ ವಾಸ್ತವ ಸಂಗತಿ ಬಗ್ಗೆ ನಿಮ್ಮಷ್ಟು ತಿಳಿದಿಲ್ಲ. ನಿಮ್ಮ ಸಲಹೆ, ಸೂಚನೆಗಳನ್ನು ನೀಡಿ. ನಾನು ಇದನ್ನೆಲ್ಲ ಅರಿಯಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ವ್ಯಂಗ್ಯ ಈ ನಡುವೆ ಶರ್ಮಿಳಾ ಅವರು ಪ್ರತ್ಯೇಕ ಪಕ್ಷ ರಚನೆ ಮಾಡುವ ಸಾಧ್ಯತೆ ಇದೆ ಎಂಬ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿ , ಅದನ್ನು ಮುನ್ನಡೆಸುವುದಕ್ಕೆ ಹೆಚ್ಚು ಶ್ರಮ ಬೇಕು ಎಂದಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ರಾವ್, ತೆಲಂಗಾಣದಲ್ಲಿ ಈ ಹಿಂದೆಯೂ ಕೆಲವು ಪ್ರಾದೇಶಿಕ ಪಕ್ಷಗಳು ರಚನೆಯಾಗಿದ್ದವು. ಅದು ಮಾಜಿ ಸಂಸದ ಅಲೆ ನರೇಂದ್ರ, ವಿಜಯಶಾಂತಿ ಮತ್ತು ದೇವೆಂದರ್ ಗೌಡ್ ಯಾರದ್ದೇ ಪಕ್ಷವಾಗಿರಲಿ ಅವೆಲ್ಲವೂ ಹೇಳಹೆಸರಿಲ್ಲದಾದವು ಎಂದಿದ್ದಾರೆ.