Narendra Modi In Lok Sabha | ಕೃಷಿ ಸುಧಾರಣೆಗೆ ಸರ್ಕಾರದ ಮಧ್ಯಪ್ರವೇಶ ಅನಿವಾರ್ಯ; ನೂತನ ಕೃಷಿ ಕಾಯ್ದೆಗಳಿಗೆ ನರೇಂದ್ರ ಮೋದಿ ಸಮರ್ಥನೆ
Parliament Live: ರೈತರಿಗೆ ಏನಾದರೂ ಸಮಸ್ಯೆ ಇದ್ದರೆ ಅದು ನಮಗೂ ಸಮಂಜಸ ಎನಿಸಿದರೆ ನಾವು ಕಾಯ್ದೆಯಲ್ಲಿ ತಿದ್ದುಪಡಿ ಮಾಡುತ್ತೇವೆ. ಕೃಷಿ ಕಾಯ್ದೆಗಳನ್ನು ಬದಲಿಸಲು ನಮಗೇನೂ ಅಭ್ಯಂತರವಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣಕ್ಕೆ ವಂದನೆ ಅರ್ಪಿಸಿ ಮಾತನಾಡಿದ ನರೇಂದ್ರ ಮೋದಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು. ಪ್ರಧಾನಿ ಕೃಷಿ ಕಾಯ್ದೆ ಬಗ್ಗೆ ಮಾತು ಆರಂಭಿಸುತ್ತಿದ್ದಂತೆ ವಿಪಕ್ಷಗಳ ಸದಸ್ಯರು ಕಾಯ್ದೆ ವಾಪಸ್ ತೆಗೆದುಕೊಳ್ಳಿ ಎಂದು ಘೋಷಣೆ ಕೂಗಿದರು.
ಈ ಕೊರೊನಾ ಕಾಲದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ತಂದೆವು. ಇದು ಅತ್ಯಗತ್ಯವಾಗಿತ್ತು. ನಾವು ಭವಿಷ್ಯದಲ್ಲಿ ಎದುರಿಸಬಹುದಾದ ಕೃಷಿ ಕ್ಷೇತ್ರದ ಸವಾಲುಗಳನ್ನು ಮನಗಂಡಿದ್ದೇವೆ. ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಪಂಜಾಬ್ನಲ್ಲಿ ಆರಂಭವಾಗಿತ್ತು. ಆಗಲೇ ನಾವು ರೈತರ ಜತೆ ಚರ್ಚಿಸಿದ್ದೆವು . ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈತರು ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರೈತರಿಗೆ ಏನಾದರೂ ಸಮಸ್ಯೆ ಇದ್ದರೆ ಅದು ನಮಗೂ ಸಮಂಜಸ ಎನಿಸಿದರೆ ನಾವು ಕಾಯ್ದೆಯಲ್ಲಿ ತಿದ್ದುಪಡಿ ಮಾಡುತ್ತೇವೆ. ಕೃಷಿ ಕಾಯ್ದೆಗಳನ್ನು ಬದಲಿಸಲು ನಮಗೇನೂ ಅಭ್ಯಂತರವಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು.
ಕೃಷಿ ಕಾಯ್ದೆ ಅನುಷ್ಠಾನ ಮಾಡಿದ ನಂತರ ಕನಿಷ್ಠ ಬೆಂಬಲ ಬೆಲೆ (MSP) ವ್ಯವಸ್ಥೆ ಮತ್ತು ಮಂಡಿ ನಿಂತಿಲ್ಲ. ಕನಿಷ್ಠ ಬೆಂಬಲ ಬೆಲೆಯ ಮೊತ್ತ ಹೆಚ್ಚಾಗಿದೆ ಎಂದು ಮೋದಿ ನುಡಿದರು. ಮೋದಿ ಈ ಮಾತು ಹೇಳುತ್ತಿದ್ದಂತೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ ಕಾಯ್ದೆ ವಾಪಸ್ ತೆಗೆದುಕೊಳ್ಳಿ ಎಂದು ಗಟ್ಟಿದನಿಯಲ್ಲಿ ಘೋಷಣೆ ಕೂಗಿದರು.
ಕೃಷಿ ಕಾಯ್ದೆಗಳನ್ನು ಅನುಷ್ಠಾನ ಮಾಡಿದ ನಂತರ ಈಗಿರುವ ಯಾವುದಾದರೂ ಸೌಲಭ್ಯವನ್ನು ಅದು ಕಿತ್ತುಕೊಂಡಿದೆಯೇ ಎಂದು ನಾನು ರೈತರಲ್ಲಿ ಕೇಳುತ್ತೇನೆ. ಎಲ್ಲಿ ಲಾಭಾಂಶ ಜಾಸ್ತಿ ಇದೆಯೋ ಅಲ್ಲಿ ಹೋಗಲು ರೈತರಿಗೆ ಆಯ್ಕೆ ಇದೆ. ಈ ಕೃಷಿ ಕಾಯ್ದೆಗಳು ರೈತರನ್ನು ನಿರ್ಬಂಧಿಸುವುದಿಲ್ಲ. ಅವರಿಗೆ ಹಲವು ಆಯ್ಕೆಗಳನ್ನು ನೀಡಿದೆ. ಹೀಗಿರುವಾಗ ವಿರೋಧ ಯಾಕೆ ಎಂದು ಮೋದಿ ಪ್ರಶ್ನಿಸಿದರು.
ಇದನ್ನೂ ಓದಿ: ಲೋಕಸಭೆಯಲ್ಲಿ ಕೃಷಿ ಕಾಯ್ದೆ ಸಮರ್ಥಿಸಿಕೊಂಡ ನರೇಂದ್ರ ಮೋದಿ; ಕಾಂಗ್ರೆಸ್ ಸಭಾತ್ಯಾಗ
ಕೇಂದ್ರ ಬಜೆಟ್ ನಲ್ಲಿ ಕೃಷಿ ಕೇತ್ರದ ಮೂಲಸೌಕರ್ಯ ಮತ್ತು ಮಂಡಿಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ. ಇದೇ ಮೊದಲ ಬಾರಿ ನಾನು ನನ್ನ ಕಿವಿಗೆ ಬಿದ್ದ ವಿಷಯ ಏನೆಂದರೆ ನಾವು (ಜನರು) ಇದನ್ನು ಕೇಳಿಲ್ಲ. ಮತ್ತೇಕೆ ನೀವು ಅದನ್ನು ಕೊಡುತ್ತಿದ್ದೀರಿ ಎಂಬುದು. ಜನರು ವರದಕ್ಷಿಣೆ ವಿರೋಧಿ ಕಾನೂನು ಬೇಕು ಎಂದು ಕೇಳಿಲಿಲ್ಲ. ಆದರೆ ನಾವು ತಂದೆವು. ಜನರು ವಿವಾಹದ ವಯಸ್ಸು ಬಗ್ಗೆ ಕಾನೂನು ತನ್ನಿ ಎಂದು ಹೇಳಿಲ್ಲ. ನಾವು ತಂದೆವು. ಇದೆಲ್ಲವೂ ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಬೇಕಾದವು ಎಂದು ಬಜೆಟ್ನಲ್ಲಿ ಕೃಷಿಗೆ ಮೀಸಲಿಟ್ಟ ಅನುದಾನ ಮತ್ತು ಕೃಷಿ ಕ್ಕ್ಷೇತ್ರದ ಸುಧಾರಣೆ ಆಲೋಚನೆಯನ್ನು ಮೋದಿ ಸಮರ್ಥಿಸಿಕೊಂಡರು.
ಪೂರ್ವ ಯೋಜಿತ ನಿರ್ಧಾರದಂತೆ ಕೆಲವರು ಸದನದಲ್ಲಿ ಗದ್ದಲವನ್ನುಂಟು ಮಾಡುತ್ತಿದ್ದಾರೆ. ಜನರು ಸತ್ಯವನ್ನು ನೋಡುತ್ತಿದ್ದಾರೆ ಎಂಬುದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಈ ಆಟದಿಂದ ಜನರ ವಿಶ್ವಾಸವನ್ನು ಗೆಲ್ಲಲು ಸಾಧ್ಯವಿಲ್ಲ. ನಾವು ದೇಶದ ಹಿತಾಸಕ್ತಿಯನ್ನು ಪರಿಗಣಿಸಿ ಕೆಲಸ ಮಾಡುತ್ತಿದ್ದೇವೆ. ಯಾರೊಬ್ಬರೂ ಜನ್ ಧನ್ ಯೋಜನೆ, ಆಯುಷ್ಮಾನ್ ಭಾರತ್, ಸ್ವಚ್ಛ ಭಾರತಕ್ಕಾಗಿ ಬೇಡಿಕೆ ಮಾಡಿಲ್ಲ, ನಾವು ಈ ಯೋಜನೆಗಳನ್ನು ತಂದೆವು. ಕೇಳಿದರಷ್ಟೇ ಕೊಡುವ ಕಾಲ ಹೋಯಿತು. ಜನರು ಸರ್ಕಾರವನ್ನು ಕೇಳುತ್ತಾ ಇರುವ ಯಾಚಕರು ಆಗಬೇಕಿಲ್ಲ. ಜನರ ಅಗತ್ಯಗಳನ್ನು ಸರ್ಕಾರಗಳು ಅರಿತುಕೊಂಡು ಸ್ಪಂದಿಸಬೇಕಾದ ಕಾಲ ಬಂದಿದೆ ಎಂದು ಹೇಳಿದರು.
ಕೃಷಿ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹಬ್ಬಗಳು, ಸಂಪ್ರದಾಯಗಳು ಕೃಷಿ ಮತ್ತು ಕೊಯ್ಲಿಗೆ ಸಂಬಂಧಿಸಿವೆ. 2011ರ ಗಣತಿ ಪ್ರಕಾರ ಜಮೀನು ರಹಿತ ರೈತರ ಪ್ರಮಾಣ ಶೇ 28ರಿಂದ ಶೇ 55ಕ್ಕೇರಿದೆ. ಈ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಬೇಕಾದ ಅಗತ್ಯವಿದೆ. ಕೃಷಿಯಲ್ಲಿ ಆಧುನೀಕರಣವಿಲ್ಲದೆ ನಾವು ಪ್ರಗತಿ ಹೊಂದುವುದಿಲ್ಲ. ರೈತರು ಆತ್ಮನಿರ್ಭರ್ ಆಗುವುದಿಲ್ಲ. ರೈತರು ಪ್ರಗತಿ ಸಾಧಿಸಬೇಕಾದರೆ ನಾವು ಅವರ ಕೈ ಹಿಡಿಯಬೇಕು, ಅವರಿಗೆ ಬೆಂಬಲ ನೀಡಬೇಕು. ನಾವು ನಮ್ಮ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ನಾವು ಕೃಷಿ ಆಧರಿತ ಕೈಗಾರಿಕೋದ್ಯಮಗಳನ್ನು ಬಲಪಡಿಸಬೇಕು . ನಮ್ಮ ರೈತರು ಸ್ವಾವಲಂಬಿಗಳಾಗಬೇಕು. ಅವರಿಗೆ ಅವರ ಉತ್ಪನ್ನಗಳನ್ನು ಮಾರುವ ಸ್ವಾತಂತ್ರ್ಯಬೇಕು. ರೈತರ ಸಮಸ್ಯೆಯನ್ನು ಕಡಿಮೆಗೊಳಿಸುವುದೇ ನಮ್ಮ ಉದ್ದೇಶ. ಕೃಷಿ ಕಾಯ್ದೆ ಕೂಡಾ ಇದೇ ಉದ್ದೇಶವನ್ನು ಹೊಂದಿದೆ ಎಂದು ನರೇಂದ್ರ ಮೋದಿ ನುಡಿದರು.
ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಾದರೆ ಉದ್ಯೋಗವಕಾಶವೂ ಏರಿಕೆಯಾಗಲಿದೆ. ಕೋವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ನಾವು ಕೃಷಿ ರೈಲನ್ನು ಬಳಸಿದೆವು. ಕಿಸಾನ್ ಆಂದೋಲನ (ರೈತ ಚಳವಳಿ) ಪವಿತ್ರವಾದುದು. ಆದರೆ ಆಂದೋಲನ್ ಜೀವಿಗಳು ಈ ಪವಿತ್ರ ಚಳವಳಿಯನ್ನು ಹೈಜಾಕ್ ಮಾಡಿದರು. ಗಂಭೀರ ಅಪರಾಧ ಮಾಡಿ ಜೈಲು ಸೇರಿದವರ ಫೋಟೊ ಪ್ರದರ್ಶಿಸಿದರು. ಇದರಿಂದ ಏನಾದರೂ ಪ್ರಯೋಜನವಿದೆಯೇ? ಟೋಲ್ ಪ್ಲಾಜಾಗಳ ಕಾರ್ಯಕ್ಕೆ ಅಡ್ಡಿ ಪಡಿಸಿದರು, ಟೆಲಿಕಾಂ ಟವರ್ಗಳನ್ನು ಧ್ವಂಸ ಮಾಡಿದರು. ಇದೇನಾ ಪವಿತ್ರ ಪ್ರತಿಭಟನೆಯ ಉದ್ದೇಶ?
21ನೇ ಶತಮಾನದ ಕೃಷಿ ವಲಯದ ಸಮಸ್ಯೆಗಳನ್ನು 18ನೇ ಶತಮಾನದ ಚಿಂತನೆಯಿಂದ ಬಗೆಹರಿಸಲು ಸಾಧ್ಯವಿಲ್ಲ. ನಾವು ಅದನ್ನು ಬದಲಿಸಲೇ ಬೇಕಿದೆ. ಯಾರೊಬ್ಬರೂ ರೈತರು ಬಡವರಾಗಿಯೇ ಉಳಿಯಬೇಕೆಂದು ಬಯಸುವುದಿಲ್ಲ, ಅವರಿಗೆ ಬದುಕುವ ಹಕ್ಕು ಸಿಗಬಾರದು ಎಂದು ಹೇಳುವುದಿಲ್ಲ. ರೈತರು ಬೇರೆ ಯಾರನ್ನೂ ಅವಲಂಬಿಸಬಾರದು ಎಂಬುದು ನನ್ನ ಆಶಯ. ಅದು ನಮ್ಮ ಹೊಣೆಯಾಗಿದೆ ಎಂದು ಹೇಳಿದ ಮೋದಿ ಕೃಷಿ ಕಾಯ್ದೆ ಬಗ್ಗೆ ಚರ್ಚಿಸಲು ರೈತರಿಗೆ ಆಹ್ವಾನ ನೀಡಿದ್ದಾರೆ.
Published On - 5:52 pm, Wed, 10 February 21