VIDEO: ನೋ ಬಾಲ್, ಫ್ರೀ ಹಿಟ್, ರನೌಟ್: ಸೂಪರ್ ಓವರ್ನಲ್ಲಿ ಡೆಲ್ಲಿಗೆ ರೋಚಕ ಜಯ
IPL 2025 DC vs RR: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 188 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ ಕೂಡ 188 ರನ್ಗಳಿಸಿದೆ. ಇದರೊಂದಿಗೆ ಪಂದ್ಯವು ಸೂಪರ್ ಓವರ್ನತ್ತ ಸಾಗಿತು. 6 ಎಸೆತಗಳಲ್ಲಿ ಹೋರಾಟದಲ್ಲಿ ಆರ್ಆರ್ ಪಡೆಯನ್ನು ಮಣಿಸುವಲ್ಲಿ ಡಿಸಿ ಪಡೆ ಯಶಸ್ವಿಯಾಗಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 32ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ (RR) ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂದ್ಯವು ಟೈನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಶಿಮ್ರೋನ್ ಹೆಟ್ಮೆಯರ್ ಹಾಗೂ ರಿಯಾನ್ ಪರಾಗ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಮಿಚೆಲ್ ಸ್ಟಾರ್ಕ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ. 2ನೇ ಎಸೆತದಲ್ಲಿ ಹೆಟ್ಮೆಯರ್ ಫೋರ್ ಬಾರಿಸಿದರು. ಇನ್ನು ಮೂರನೇ ಎಸೆತದಲ್ಲಿ 1 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ರಿಯಾನ್ ಪರಾಗ್ ಫೋರ್ ಬಾರಿಸಿದರು. ಇದು ನೋ ಬಾಲ್ ಕೂಡ ಆಗಿತ್ತು.
ಮರು ಎಸೆತದಲ್ಲಿ ರಿಯಾನ್ ಪರಾಗ್ ಯಾವುದೇ ರನ್ ಗಳಿಸಿರಲಿಲ್ಲ. ಆದರೆ ನಾನ್ ಸ್ಟ್ರೈಕ್ನಿಂದ ಹೆಟ್ಮೆಯರ್ ರನ್ಗಾಗಿ ಓಡಿದರು. ಅಷರಲ್ಲಿ ಕೆಎಲ್ ರಾಹುಲ್ ಚೆಂಡನ್ನು ಸ್ಟಾರ್ಕ್ಗೆ ನೀಡುವ ಮೂಲಕ ರಿಯಾನ್ ಪರಾಗ್ ಅವರನ್ನು ರನೌಟ್ ಮಾಡಿದರು. ಇನ್ನು 5ನೇ ಎಸೆತದಲ್ಲಿ 2 ರನ್ ಓಡುವ ತವಕದಲ್ಲಿ ಯಶಸ್ವಿ ಜೈಸ್ವಾಲ್ ಕೂಡ ನಾನ್ ಸ್ಟ್ರೈಕ್ನಲ್ಲಿ ರನೌಟ್ ಆದರು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು 5 ಎಸೆತಗಳಲ್ಲಿ 11 ರನ್ಗಳಿಸಿ ಸೂಪರ್ ಓವರ್ ಕೊನೆಗೊಳಿಸಿತು.
12 ರನ್ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಸೂಪರ್ ಓವರ್ನಲ್ಲಿ ಕಣಕ್ಕಿಳಿದರು. ಸಂದೀಪ್ ಶರ್ಮಾ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ಕೆಎಲ್ ರಾಹುಲ್ 2 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ಫೋರ್ ಬಾರಿಸಿದರು. ಇನ್ನು ಮೂರನೇ ಎಸೆತದಲ್ಲಿ ರಾಹುಲ್ 1 ರನ್ ಓಡಿದರು. ಇನ್ನು 4ನೇ ಎಸೆತದಲ್ಲಿ ಸ್ಟ್ರೈಕ್ ಪಡೆದ ಟ್ರಿಸ್ಟನ್ ಸ್ಟಬ್ಸ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಜಯ ತಂದುಕೊಟ್ಟರು. ಇದೀಗ ಈ ರಣರೋಚಕ ಸೂಪರ್ ಓವರ್ ವಿಡಿಯೋ ವೈರಲ್ ಆಗಿದೆ.