VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
IPL 2025 DC vs RR: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 32ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 188 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 188 ರನ್ಗಳಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತು.
ಕ್ರಿಕೆಟ್ ಅಂಗಳದಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಹೀಗೆ ಕ್ಯಾಚ್ನಿಂದಲೇ ಗೆದ್ದ ಹಲವು ಪಂದ್ಯಗಳಿವೆ. ಹಾಗೆಯೇ ಕ್ಯಾಚ್ ಚೆಲ್ಲಿ ಸೋತ ಹಲವು ನಿದರ್ಶನಗಳಿವೆ. ಇದೀಗ ಕ್ಯಾಚ್ ಕೈ ಬಿಟ್ಟು ಸೋತ ತಂಡಗಳ ಪಟ್ಟಿಗೆ ಹೊಸ ಸೇರ್ಪಡೆ ರಾಜಸ್ಥಾನ್ ರಾಯಲ್ಸ್ (RR). ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ (DC) ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಮಹೀಶ್ ತೀಕ್ಷಣ ಕೈ ಬಿಟ್ಟ ಕ್ಯಾಚ್ನಿಂದಾಗಿ ಐಪಿಎಲ್ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿತು ಎಂದರೆ ತಪ್ಪಾಗಲಾರದು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.5 ಓವರ್ಗಳಲ್ಲಿ 187 ರನ್ ಕಲೆಹಾಕಿತು. ಇನ್ನು ಸಂದೀಪ್ ಶರ್ಮಾ ಎಸೆದ 20ನೇ ಓವರ್ನ ಕೊನೆಯ ಎಸೆತದಲ್ಲಿ ಟ್ರಿಸ್ಟನ್ ಸ್ಟಬ್ಸ್ ಕ್ಯಾಚ್ ನೀಡಿದ್ದರು. ಅತ್ಯಂತ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್ ಅನ್ನು ಮಹೀಶ್ ತೀಕ್ಷಣ ಕೈ ಚೆಲ್ಲಿದ್ದರು. ಪರಿಣಾಮ ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಒಂದು ರನ್ ಲಭಿಸಿತು.
ಒಂದು ವೇಳೆ ಮಹೀಶ್ ತೀಕ್ಷಣ ಈ ಕ್ಯಾಚ್ ಹಿಡಿದಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಕೋರ್ 187 ರನ್ಗಳಿಗೆ ಅಂತ್ಯವಾಗುತ್ತಿತ್ತು. ಅತ್ತ ರಾಜಸ್ಥಾನ್ ರಾಯಲ್ಸ್ ತಂಡ 188 ರನ್ ಕಲೆಹಾಕಿ ಪಂದ್ಯವನ್ನು ಗೆಲ್ಲಬಹುದಿತ್ತು. ಆದರೆ ಕ್ಯಾಚ್ ಚೆಲ್ಲಿ ನೀಡಿದ ಒಂದು ರನ್ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 188 ರನ್ ಕಲೆಹಾಕಿದೆ.
ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 188 ರನ್ಗಳಿಸಿ ಪಂದ್ಯವನ್ನು ಟೈ ಮಾಡಿಕೊಳ್ಳಲಷ್ಟೇ ಶಕ್ತರಾದರು. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 11 ರನ್ಗಳಿಸಿ ಡೆಲ್ಲಿ ಪಡೆಗೆ 12 ರನ್ಗಳ ಗುರಿ ನೀಡಿತು. ಈ ಗುರಿಯನ್ನು 4 ಎಸೆತಗಳಲ್ಲಿ ಬೆನ್ನಟ್ಟುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ.