Budget 2021 ವಿಶ್ಲೇಷಣೆ | ಕರ್ನಾಟಕದ ಸಂಸದೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನೇ ಮರೆತರೆ?
ತಾನು ಮಂಡಿಸುವ ಮುಂಗಡಪತ್ರದ ಮೂಲಕ, ದೇಶದಲ್ಲಿರುವ ಎಲ್ಲ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ನಿರೀಕ್ಷಿಸುವುದು ದುಬಾರಿಯಾಗಬಹುದು. ಆದರೆ, ಕರ್ನಾಟಕದಂಥ ರಾಜ್ಯಕ್ಕೆ ಇನ್ನು ಹೆಚ್ಚಿನ ಒತ್ತು ಕೊಡಬಹುದಿತ್ತು ಎಂಬ ವಾದದಲ್ಲಿ ಹುರುಳಿಲ್ಲ ಎಂದು ಹೇಳಲಾಗದು.
ಕೊವಿಡ್ನಿಂದಾಗಿ ಹಳ್ಳ ಹಿಡಿದ ಭಾರತದ ಆರ್ಥಿಕತೆಯನ್ನು ದಾರಿಗೆ ತರುವ ಅತಿ ದೊಡ್ಡ ಜವಾಬ್ದಾರಿ ಹೊತ್ತು ಇಂದು ಮುಂಗಡ ಪತ್ರ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕವನ್ನೇ ಮರೆತುಬಿಟ್ಟರಾ ಎಂಬ ವಿಚಾರವನ್ನು ಕನ್ನಡಿಗರು ಮಾತನಾಡುತ್ತಿದ್ದಾರೆ. ಇದಕ್ಕೊಂದು ಕಾರಣವಿದೆ. ಅವರು ರಾಜ್ಯಸಭೆಗೆ ಹೋಗಿದ್ದು ಕರ್ನಾಟಕದಿಂದ. ಹಾಗಾಗಿ ಆರಿಸಿ ಹೋದ ರಾಜ್ಯಕ್ಕೆ ಏನಾದರೂ ಕೊಡಬಹುದು ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿತ್ತು.
ಆಯ್ಕೆಯಾದ ರಾಜ್ಯಕ್ಕೆ ಪದೇಪದೇ ಭೇಟಿ ಕೊಡದಿದ್ದರೂ, ಕರ್ನಾಟಕದ ಜನಪ್ರತಿನಿಧಿಗಳು ಹೋದಾಗ ಅತ್ಯಂತ ಕಾಳಜಿಯಿಂದ ಮಾತನಾಡಿ ಅವರ ಕೆಲಸ ಮಾಡಿಕೊಡಲು ಅವರು ಮುಂದಾಗುತ್ತಾರೆ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಅವರು ಕರ್ನಾಟಕಕ್ಕೆ ಭೇಟಿ ಕೊಡಲ್ಲ ಎನ್ನುವ ಆರೋಪವನ್ನು ಕೂಡ ಮಾಫಿ ಮಾಡಬಹುದು. ಆದರೆ, ಮುಂಗಡಪತ್ರದಲ್ಲಿ ಕರ್ನಾಟಕಕ್ಕೆ ಸ್ವಲ್ಪ ಹೆಚ್ಚು ಒತ್ತು ಕೊಡಬಹುದಿತ್ತು ಎಂಬ ವಿಚಾರದಲ್ಲಿ ಯಾರ ತಕರಾರು ಇರಲಿಕ್ಕಿಲ್ಲ.
ವಿರೋಧ ಪಕ್ಷದ ನಾಯಕ, ಸಿದ್ಧರಾಮಯ್ಯ ರಾಜಕೀಯ ಕಾರಣಕ್ಕೆ ನಿರ್ಮಲಾ ಅವರನ್ನು ವಿರೋಧಿಸುತ್ತಾರೆ ಎಂದು ಹೇಳಿ ಅವರ ವಿಚಾರವನ್ನು ತಳ್ಳಿ ಹಾಕಿಬಿಡಬಹುದು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ಜನರ ಭಾವನೆಯಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಲಾಗದು. ಉದಾಹರಣೆಗೆ, ಇಡೀ ಮುಂಗಡಪತ್ರದಲ್ಲಿ ಅವರು ಕರ್ನಾಟದ ಕುರಿತು ಎರಡು ಕಡೆ ಮಾತ್ರ ಪ್ರಸ್ತಾಪ ಮಾಡಿದ್ದಾರೆ: ಒಂದು, ಬೆಂಗಳೂರು ಮೆಟ್ರೋಗೆ ₹ 14500 ಕೋಟಿ ಹಣ ಕೊಟ್ಟಿದ್ದು. ಮತ್ತೊಂದು ಬೆಂಗಳೂರು-ಚೆನ್ನೈ ಎಕ್ಸಪ್ರೆಸ್ವೇ ರಸ್ತೆ ಅಭಿವೃದ್ದಿಗೆ ಹಣ ಕೊಡಲು ವಾಗ್ದಾನ ನೀಡಿದ್ದು. ಇವೆರಡನ್ನು ಬಿಟ್ಟರೆ ಇಡೀ ಕರ್ನಾಟಕದ ಅಭಿವೃದ್ಧಿಗೆ ಯಾವ ಒತ್ತು ಕೊಟ್ಟಿಲ್ಲ ಎಂಬ ಮಾತನ್ನು ತೆಗೆದು ಹಾಕುವಂತಿಲ್ಲ.
ಇಷ್ಟಕ್ಕೂ ಕರ್ನಾಟಕಕ್ಕೆ ಯಾಕೆ ಒತ್ತು ಕೊಡಬೇಕು? ಮೊನ್ನೆ ಮಂಡಿಸಿದ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಒಂದು ಕುತೂಹಲಕಾರಿ ಅಂಶವಿದೆ. ಅದೇನೆಂದರೆ, ಭಾರತ ಸರ್ಕಾರಕ್ಕೆ ಆದಾಯ ತರುವ ರಫ್ತಿನ ಬಾಬತ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ 12.5 ಪ್ರತಿಶತ ಇದೆ. ಇದು ಪಕ್ಕದ ತಮಿಳುನಾಡಿಗಿಂತ ಜಾಸ್ತಿ. ಇಡೀ ರಫ್ತಿನ ಬಾಬತ್ತಿನಲ್ಲಿ ಶೇ 70 ಪ್ರತಿಶತ ಆದಾಯ ಐದು ರಾಜ್ಯಗಳಿಂದ ಬರುತ್ತದೆ. ಅವೆಂದರೆ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ. ಇಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೂಡ ಇದೇ ಹಾಡು. ಪ್ರತಿ ವರ್ಷ 180 ಶತಕೋಟಿ ಡಾಲರ್ ರಫ್ತಿನಲ್ಲಿ ಬೆಂಗಳೂರಿನ ಪಾಲು ಸುಮಾರು ಶೇ 40ರಷ್ಟು ಇದೆ. ಇಷ್ಟೆಲ್ಲಾ ಕೊಡುವ ಕರ್ನಾಟಕ ಮತ್ತು ಬೆಂಗಳೂರಿನ ಬಗ್ಗೆ ಇನ್ನೊಂದಿಷ್ಟು ವಿಟಾಮಿನ್ ಕೊಡಬಹುದಿತ್ತು ಎಂಬುದರಲ್ಲಿ ತಪ್ಪಿಲ್ಲ.
ಎರಡು ವಾರದ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಒಂದೇ ಪಕ್ಷದ ಆಳ್ವಿಕೆಯಿಂದ ಡಬಲ್-ಎಂಜಿನ್ ಬೆಳವಣಿಗೆ ಸಾಧ್ಯ ಎಂದು ಹೇಳಿದ್ದಾರೆ. ಆದರೆ ಆ ರೀತಿಯ ಲಕ್ಷಣ ಕಾಣಬೇಕಿದ್ದರೆ ಮುಂಗಡಪತ್ರದಲ್ಲಿ ಇನ್ನೊಂದಿಷ್ಟು ಉತ್ತೇಜನವನ್ನು ಕರ್ನಾಟಕಕ್ಕೆ ನೀಡಬೇಕಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.
ಕೊನೆಯ ಗುಟುಕು ಕರ್ನಾಟಕದಿಂದ ಆರಿಸಿ ಹೋಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಇನ್ನೊಂದು ರೀತಿಯಲ್ಲಿ ಕೂಡ ಮಹತ್ವ ನೀಡಬಹುದಿತ್ತು. ಮುಂಗಡಪತ್ರ ಮಂಡಿಸುವಾಗ ತಿರುವಳ್ಳುವರ್ ಅವರನ್ನು ನೆನಪಿಸಿಕೊಂಡ ಅವರು ಕನ್ನಡ ಸಂಪ್ರದಾಯದಲ್ಲಿ ಬಂದ ಬಸವಣ್ಣ ಮುಂತಾದ ಸಮಾಜ ಸುಧಾರಕರ ಮಾತನ್ನು ಹೇಳಿದ್ದರೆ ಕರ್ನಾಟಕದ ಜನ ಖುಷಿಪಡುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.
Budget 2021 ವ್ಯಕ್ತಿ-ವ್ಯಕ್ತಿತ್ವ | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆದು ಬಂದ ದಾರಿ
Budget 2021 | ಗಡಿ ಸಂಘರ್ಷದ ಆತಂಕ ನಡುವೆ ರಕ್ಷಣೆಗೆ ಸಿಕ್ಕಿದ್ದು ₹ 4.78 ಲಕ್ಷ ಕೋಟಿ ಅನುದಾನ
Budget 2021 | ಚಿನ್ನ-ಬೆಳ್ಳಿ ಮೇಲೆ ಕಸ್ಟಮ್ಸ್ ಸುಂಕ ಇಳಿಸಿದ ನಿರ್ಮಲಾ ಸೀತಾರಾಮನ್: ಚಿನ್ನದ ಬೆಲೆ ದಿಢೀರ್ ಇಳಿಕೆ
Published On - 6:22 pm, Mon, 1 February 21