ನೂತನ ಕೃಷಿ ಕಾಯ್ದೆಗಳು ರೈತರ ಪರವಾಗಿವೆ, ಬೆಂಬಲ ಬೆಲೆಗೆ ತೊಡಕಿಲ್ಲ: ನರೇಂದ್ರ ಸಿಂಗ್ ತೋಮರ್

ಕೃಷಿ ಸಂಬಂಧಿ ವಿಚಾರಗಳಲ್ಲಿ ಶರದ್ ಪವಾರ್ ಪರಿಣತಿಯನ್ನು ಹೊಂದಿದ್ದಾರೆ. ಕೃಷಿ ವಲಯದಲ್ಲಿ ಇಂತಹುದೇ ಬದಲಾವಣೆಗಳನ್ನು ತರಲು ಈ ಮೊದಲು ಅವರೂ ಪ್ರಯತ್ನಿಸಿದ್ದರು ಎಂದು ತೋಮರ್ ಹೇಳಿದ್ದಾರೆ.

ನೂತನ ಕೃಷಿ ಕಾಯ್ದೆಗಳು ರೈತರ ಪರವಾಗಿವೆ, ಬೆಂಬಲ ಬೆಲೆಗೆ ತೊಡಕಿಲ್ಲ: ನರೇಂದ್ರ ಸಿಂಗ್ ತೋಮರ್
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
Follow us
TV9 Web
| Updated By: ganapathi bhat

Updated on:Apr 06, 2022 | 8:24 PM

ದೆಹಲಿ: ನೂತನ ಕೃಷಿ ಕಾಯ್ದೆಗಳು ರೈತರ ಪರವಾಗಿವೆ. ಕೃಷಿ ಕಾಯ್ದೆ ತಿದ್ದುಪಡಿಯು ಕೃಷಿ ಮಾರುಕಟ್ಟೆಗೆ ಹೊಸ ಅವಕಾಶಗಳನ್ನು ನೀಡಲಿದೆ. ತಾವು ಬೆಳೆದ ಬೆಳೆಗಳನ್ನು ಮಾರಲು ರೈತರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು. ಹೊಸ ಕಾಯ್ದೆಗಳ ಅನುಸಾರ ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಇದರಿಂದ ಬೆಂಬಲ ಬೆಲೆ ವ್ಯವಸ್ಥೆಗೆ ಯಾವುದೇ ತೊಡಕುಂಟಾಗುವುದಿಲ್ಲ ಎಂದು ಸರ್ಕಾರದ ಕಾಯ್ದೆಯ ಪರ ತೋಮರ್ ವಿವರಣೆ ನೀಡಿದರು.

ಹೊಸ ವ್ಯವಸ್ಥೆಯಿಂದ ಕೃಷಿ ಮಾರುಕಟ್ಟೆ ಮಂಡಿಗಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಬದಲಾಗಿ, ಅವು ಹೆಚ್ಚು ಸ್ಪರ್ಧಾತ್ಮಕವಾಗಯತ್ತದೆ. ಸೇವೆ ಮತ್ತು ಮೂಲಸೌಕರ್ಯ ವಿಚಾರವಾಗಿಯೂ ಹೊಸ ಕಾನೂನು ಪರಿಣಾಮಕಾರಿಯಾಗಿರುತ್ತದೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದರು. ನೂತನ ಕೃಷಿ ಕಾಯ್ದೆಗಳು ರೈತರ ಹಿತವನ್ನು ಬಯಸುತ್ತದೆ ಎಂದು ಸ್ಪಷ್ಟಪಡಿಸಿದರು.

ಶರದ್ ಪವಾರ್ ಹಿರಿಯ ರಾಜಕಾರಣಿ ಹಾಗೂ ಮಾಜಿ ಕೇಂದ್ರ ಕೃಷಿ ಸಚಿವರಾಗಿದ್ದಾರೆ. ಕೃಷಿ ಸಂಬಂಧಿ ವಿಚಾರಗಳಲ್ಲಿ ಶರದ್ ಪವಾರ್ ಪರಿಣತಿಯನ್ನು ಹೊಂದಿದ್ದಾರೆ. ಕೃಷಿ ವಲಯದಲ್ಲಿ ಇಂತಹುದೇ ಬದಲಾವಣೆಗಳನ್ನು ತರಲು ಈ ಮೊದಲು ಅವರೂ ಪ್ರಯತ್ನಿಸಿದ್ದರು. ಸದ್ಯ, ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೃಷಿ ಕಾಯ್ದೆಯ ಬಗ್ಗೆ ಶರದ್ ಪವಾರ್ ಅವರಿಗೆ ತಪ್ಪು ಮಾಹಿತಿ ಲಭಿಸಿರಬೇಕು. ಈಗ ಅವರಿಗೆ ಸರಿಯಾದ ವಿಚಾರ ಅರ್ಥವಾಗಿರಬೇಕು. ಹಾಗಾಗಿ, ಶರದ್ ಪವಾರ್ ತಮ್ಮ ನಿಲುವನ್ನು ಬದಲಿಸುತ್ತಾರೆ. ರೈತರಿಗೆ ಕೂಡ ಕೃಷಿ ಕಾಯ್ದೆ ತಿದ್ದುಪಡಿಯ ಲಾಭಗಳನ್ನು ವಿವರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಎನ್​ಸಿಪಿ ನಾಯಕ ಶರದ್ ಪವಾರ್ ಬಗ್ಗೆ ನರೇಂದ್ರ ಸಿಂಗ್ ತೋಮರ್ ಟ್ವಿಟ್ ಕೂಡ ಮಾಡಿದ್ದಾರೆ

ಇದನ್ನೂ ಓದಿ: ರಾಷ್ಟ್ರದ ಘನತೆಯನ್ನು ಗೌರವಿಸುತ್ತೇವೆ, ನಮ್ಮ ಸ್ವಾಭಿಮಾನವನ್ನೂ ರಕ್ಷಿಸಿಕೊಳ್ಳುತ್ತೇವೆ: ನರೇಶ್ ಟಿಕಾಯತ್ ಹೇಳಿಕೆ

ಶರದ್ ಪವಾರ್, ದೆಹಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದರು. ಜನವರಿ 25ರಂದು ಮುಂಬೈನಲ್ಲಿ ರೈತ ಚಳುವಳಿ ಉದ್ದೇಶಿಸಿ ಮಾತನಾಡಿದ್ದರು. ಇದೀಗ, ಜನವರಿ 26ರಂದು ನಡೆದ ಘಟನೆಗಳ ಬಳಿಕವೂ ರೈತರು ಚಳುವಳಿ ಮುಂದುವರಿಸುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದೆಹಲಿ-ಉತ್ತರ ಪ್ರದೇಶ ಗಡಿಭಾಗದಲ್ಲಿ ಹೋರಾಟ ಮುಂದುವರಿಸುತ್ತಿದ್ದಾರೆ. ನೂತನ ಕೃಷಿ ಕಾಯ್ದೆಯ ವಿರುದ್ಧ ಸಮರ ಸಾರಿದ್ದಾರೆ. ಆ ಬಳಿಕವೂ ಕೇಂದ್ರ ತನ್ನ ನಿಲುವು ಸಡಿಲಗೊಳಿಸಿದಂತೆ ಕಾಣುತ್ತಿಲ್ಲ. ನಾಳೆಯಿಂದ ಆರಂಭವಾಗಲಿರುವ ಬಜೆಟ್ ಮಂಡನೆ ಮತ್ತು ಅಧಿವೇಶನದ ಹಿನ್ನೆಲೆಯಲ್ಲೂ ತೋಮರ್ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.

ಮಾತುಕತೆ ಮೂಲಕ ರೈತ ಸಮಸ್ಯೆ ಬಗೆಹರಿಸಿಕೊಳ್ಳೋಣ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿಯಿಂದ ಮತ್ತೊಮ್ಮೆ ಚರ್ಚೆಗೆ ಆಹ್ವಾನ!

ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಅಪಮಾನವಾಗಿದೆ: ಮನ್ ಕೀ ಬಾತ್​ನಲ್ಲಿ ನರೇಂದ್ರ ಮೋದಿ ಬೇಸರ

Published On - 7:16 pm, Sun, 31 January 21