ಹೌರಹ್: ಆಂತರಿಕ ಜಗಳವನ್ನು ಉತ್ತೇಜಿಸುವ ಮತ್ತು ಜೈ ಶ್ರೀರಾಮ್ ಘೋಷಣೆಯನ್ನು ದ್ವೇಷಿಸುವ ಪಕ್ಷವಾದ ಟಿಎಂಸಿಯಲ್ಲಿ ಯಾರೂ ಇರಲು ಇಷ್ಟಪಡುವುದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.
ಹೌರಹ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸ್ಮೃತಿ ಇರಾನಿ, ದೀದೀ..ನೀವು ಜೈ ಶ್ರೀರಾಮ್ ಎಂಬ ಘೋಷಣೆಯನ್ನು ವರ್ಜಿಸಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮರಾಜ್ಯ ಪರಿಕಲ್ಪನೆ ಪಶ್ಚಿಮ ಬಂಗಾಳದ ಬಾಗಿಲನ್ನೂ ಬಡಿಯುತ್ತಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನಿಂದ ಬರೀ ಭ್ರಷ್ಟಾಚಾರವೇ ನಡೆಯುತ್ತಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದ ಸುಮಾರು 8 ತಿಂಗಳು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ 80 ಕೋಟಿ ಜನರಿಗೆ ಅನುಕೂಲವಾಗುವಂತೆ ಪಡಿತರ ನೀಡಿದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಇದನ್ನು ಫಲಾನುಭವಿಗಳಿಗೆ ತಲುಪಿಸದೆ ಲೂಟಿ ಮಾಡಿದೆ ಎಂದು ಸ್ಮೃತಿ ಇರಾನಿ ಆರೋಪಿಸಿದರು.
ಟಿಎಂಸಿ ಒಂದು ಖಾಸಗಿ ಕಂಪನಿ ಇನ್ನು ಕಳೆದ ತಿಂಗಳಷ್ಟೇ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಸುವೇಂದು ಅಧಿಕಾರಿ ತಮ್ಮ ಮಾಜಿ ಪಕ್ಷದ ವಿರದ್ಧ ಹರಿಹಾಯ್ದರು. ತೃಣಮೂಲ ಕಾಂಗ್ರೆಸ್ ಒಂದು ರಾಜಕೀಯ ಪಕ್ಷ ಅಲ್ಲವೇ ಅಲ್ಲ. ಅದೊಂದು ಖಾಸಗಿ ಕಂಪನಿ. ಸುಮಾರು ಫೆಬ್ರವರಿ 28ರ ಹೊತ್ತಿಗೆ ಆ ಖಾಸಗಿ ಕಂಪನಿ ಖಾಲಿಯಾಗುತ್ತದೆ. ಅಲ್ಲಿ ಯಾರೂ ಇರುವುದಿಲ್ಲ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಮಮತಾ ಬ್ಯಾನರ್ಜಿ ಒಬ್ಬಂಟಿಯಾಗುತ್ತಾರೆ..: ಗೃಹ ಸಚಿವ ಅಮಿತ್ ಶಾ