Explainer | ಆಂಧ್ರ ಸಾರಿಗೆ ನಿಗಮ ಸಿಬ್ಬಂದಿ ಈಗ ರಾಜ್ಯ ಸರ್ಕಾರಿ ನೌಕರರು: ಏನಿದು ‘ಆಂಧ್ರ ಮಾಡೆಲ್‘?
ರಾಜ್ಯದ ವಿವಿಧ ಸಾರಿಗೆ ನಿಗಮಗಳ ಸಿಬ್ಬಂದಿ ಪದೇಪದೇ ಜಪಿಸುವ ಮಂತ್ರ ‘ಆಂಧ್ರ ಮಾಡೆಲ್’. ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಸಾರಿಗೆ ನಿಗಮ ನೌಕರರ ಸಂಘದ ನಾಯಕರು ಮತ್ತು ಕೆಲ ಸಿಬ್ಬಂದಿಯನ್ನು ಆಂಧ್ರ ಪ್ರದೇಶಕ್ಕೆ ಕಳಿಸಿಕೊಡುವ ಭರವಸೆ ನೀಡಿದ್ದಾರೆ. ಏನಿದು ‘ಆಂಧ್ರ ಮಾಡೆಲ್’. ಇಲ್ಲಿದೆ ಮಾಹಿತಿ...
ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ರಾಜ್ಯದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಬೇಡಿಕೆ ಈಡೇರಿಸುವ ತನಕ ಮುಷ್ಕರ ಕೈ ಬಿಡುವುದಿಲ್ಲ ಎಂದು ನೌಕರರ ಸಂಘಟನೆಗಳ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ತಮ್ಮನ್ನು ರಾಜ್ಯ ಸರ್ಕಾರಿ ನೌಕರನ್ನಾಗಿ ಪರಿಗಣಿಸಬೇಕೆನ್ನುವ ರಾಜ್ಯದ ವಿವಿಧ ಸಾರಿಗೆ ನಿಗಮಗಳ ಸಿಬ್ಬಂದಿ ಪದೇಪದೇ ಜಪಿಸುವ ಮಂತ್ರ ‘ಆಂಧ್ರ ಮಾಡೆಲ್’. ಇದೀಗ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಸಾರಿಗೆ ನಿಗಮ ನೌಕರರ ಸಂಘದ ನಾಯಕರು ಮತ್ತು ಕೆಲ ಸಿಬ್ಬಂದಿಯನ್ನು ಆಂಧ್ರ ಪ್ರದೇಶಕ್ಕೆ ಕಳಿಸಿಕೊಡುವ ಭರವಸೆ ನೀಡಿದ್ದಾರೆ. ಏನಿದು ‘ಆಂಧ್ರ ಮಾಡೆಲ್’. ಇಲ್ಲಿದೆ ಮಾಹಿತಿ
ಏನಿದು ‘ಆಂಧ್ರ ಮಾಡೆಲ್?’ ಇದೇ ವರ್ಷ ಜನವರಿ 1ರಂದು ಆಂಧ್ರ ಪ್ರದೇಶ ರಸ್ತೆ ಸಾರಿಗೆ ನಿಗಮವನ್ನು (ಎಪಿಎಸ್ಆರ್ಟಿಸಿ) ರಾಜ್ಯ ಸರ್ಕಾರದೊಂದಿದೆ ವಿಲೀನಗೊಳಿಸಿ ಸರ್ಕಾರ ಆದೇಶ ಹೊರಡಿಸಿತು. ಇದನ್ನು ಅಲ್ಲಿನ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಹೊಸ ವರ್ಷದ ಉಡುಗೊರೆ ಎಂದಿದ್ದರು. ಎಪಿಎಸ್ಆರ್ಟಿಸಿಯನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವುದನು ಆಡಳಿತಾರೂಢ ಪಕ್ಷ ವೈಎಸ್ಆರ್ ಕಾಂಗ್ರೆಸ್ ನೀಡಿದ್ದ ಚುನಾವಣಾ ಭರವಸೆಯೂ ಆಗಿತ್ತು. ಆಂಧ್ರ ಪ್ರದೇಶ ರಸ್ತೆ ಸಾರಿಗೆ ನಿಗಮ (ಸಿಬ್ಬಂದಿಗಳನ್ನು ಸರ್ಕಾರಿ ನೌಕರರನ್ನಾಗಿ ಮಾಡುವ)ಕಾಯ್ದೆ 2019ರ ಪ್ರಕಾರ, 5000 ಎಪಿಎಸ್ಆರ್ಟಿಸಿ ನೌಕರರಿಗೆ ಸರ್ಕಾರಿ ನೌಕರರ ಸ್ಥಾನಮಾನ ದೊರೆಯಿತು.
ನವಂಬರ್ 1, 2019 ರಂದು ಎಪಿಎಸ್ಆರ್ಟಿಸಿ ಮಂಡಳಿಯು ಗೊತ್ತುವಳಿಯೊಂದನ್ನು ಜಾರಿ ಮಾಡಿತ್ತು. ಇದಾದ ನಂತರ ರಾಜ್ಯ ಸರ್ಕಾರವು ಸಾರ್ವಜನಿಕ ಸಾರಿಗೆ ಇಲಾಖೆ (ಪಿಟಿಡಿ) ಎಂಬ ಹೊಸ ಇಲಾಖೆ ರಚಿಸಿ ಸರ್ಕಾರದ ನಡಾವಳಿಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಿತ್ತು. ಈ ಪಿಟಿಡಿ ಸಹ ಜನವರಿ 1, 2020ರಂದು ಅಸ್ತಿತ್ವಕ್ಕೆ ಬಂತು.
ಇದನ್ನೂ ಓದಿ: ಸದ್ಯಕ್ಕಿಲ್ಲ ಬಸ್ | ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ಸಿಬ್ಬಂದಿ ತೀರ್ಮಾನ: ಕೋಡಿಹಳ್ಳಿ ಚಂದ್ರಶೇಖರ್
ನಿಗಮವನ್ನು ಸರ್ಕಾರಕ್ಕೆ ವಿಲೀನಗೊಳಿಸಿದ್ದರಿಂದ ನೌಕರರಿಗೆ ಏನೆಲ್ಲಾ ಲಾಭವಾಯಿತು? 1. ಹಿಂದಿನ ಆರ್ಟಿಸಿ ನಿಗಮದ ನೌಕರರೆಲ್ಲರೂ ಪಿಟಿಎ ಇಲಾಖೆಯ ನೌಕರರಾಗಿದ್ದಾರೆ. ಸರ್ಕಾರಿ ನೌಕರರಂತೆ ಇವರಿಗೂ ಸರ್ಕಾರಿ ಸಂಬಳ, ಸೌಲಭ್ಯಗಳು ಸಿಗುತ್ತಿವೆ. 2. ಎಪಿಎಸ್ಆರ್ಟಿಸಿ ನೌಕರರ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆಯಾಗಿದೆ 3. ಬಸ್ ದರ ಏರಿಕೆ ಪಾರದರ್ಶಕವಾಗಿರುತ್ತದೆ. ಬಸ್ ದರ ನಿಯಂತ್ರಣ ಪ್ರಾಧಿಕಾರವು ಇದನ್ನು ನಿರ್ಧರಿಸುತ್ತದೆ. ಹೀಗಾಗಿ ಸಾರ್ವಜನಿಕರಿಗೂ ಅನುಕೂಲ 4. ನಿಗಮದ ನಡಾವಳಿಗಳಲ್ಲಿ ನೌಕರರು ಅಥವಾ ಮಜ್ದೂರ್ ಎಂಬ ಹುದ್ದೆ ಇತ್ತು. ರಾಜ್ಯ ಸರ್ಕಾರಕ್ಕೆ ವಿಲೀನವಾದ ನಂತರ ಇದು ಪಬ್ಲಿಕ್ ಸರ್ವೆಂಟ್ (ಸರ್ಕಾರಿ ನೌಕರ) ಎಂದು ಬದಲಾಗಿದೆ. 5. ಈ ಹಿಂದೆ ನಿಗಮದ ನೌಕರರಿಗೆ ಅನ್ವಯವಾಗುತ್ತಿದ್ದ ದಿ ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಆ್ಯಕ್ಟ್ 1947, ಟ್ರೇಡ್ ಯೂನಿಯನ್ ಆ್ಯಕ್ಟ್ 1926 ಮತ್ತು ಶಿಸ್ತು ಸಂಹಿತೆ (ಕೋಡ್ ಆಫ್ ಡಿಸಿಪ್ಲಿನ್) ಈಗ ಸರ್ಕಾರಿ ನೌಕರರಾಗಿರುವವರಿಗೆ ಅನ್ವಯವಾಗುವುದಿಲ್ಲ.
ಸರ್ಕಾರದ ವಿಧಿಸಿದ್ದ ಷರತ್ತುಗಳೇನು? ಸಾರಿಗೆ ನಿಗಮವನ್ನು ಸರ್ಕಾರಕ್ಕೆ ವಿಲೀನ ಮಾಡಿಕೊಳ್ಳುವಾಗ ರಾಜ್ಯ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ನಿಗಮದ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಾಗುವುದು ಎಂದು ಹೇಳಿತ್ತು. * ನೌಕರರು ಸರ್ಕಾರದ ನೀತಿಗಳ ಬಗ್ಗೆ ಮಾಧ್ಯಮಗಳಲ್ಲಿ ಟೀಕೆ ಮಾಡುವಂತಿಲ್ಲ * ನೌಕರರು ಸರ್ಕಾರಿ ಅಧಿಕಾರಿಗಳ ತೀರ್ಮಾನವನ್ನು ಸಾರ್ವಜನಿಕವಾಗಿ ಪ್ರಶ್ನಿಸುವಂತಿಲ್ಲ * ಸರ್ಕಾರದ ವಿರುದ್ಧ ಯಾವುದೇ ಮುಷ್ಕರ ಅಥವಾ ಪ್ರತಿಭಟನೆ ಮಾಡುವಂತಿಲ್ಲ
ಇದನ್ನೂ ಓದಿ: ಚರ್ಚಿಸೋಣ ಬನ್ನಿ, ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಸಚಿವ ಸವದಿ ಮನವಿ
ಎಪಿಎಸ್ಆರ್ಟಿಸಿ ಬಲವೆಷ್ಟು?
ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (ಎಪಿಎಸ್ಆರ್ಟಿಸಿ) ಅಲ್ಲಿನ ಸರ್ಕಾರ 4 ವಲಯ ವಲಯಗಳನ್ನಾಗಿ ವಿಂಗಡಿಸಿದೆ. 12 ಪ್ರಾದೇಶಿಕ ವ್ಯವಸ್ಥಾಪಕರಿದ್ದಾರೆ. ಒಟ್ಟು 11, 678 ಬಸ್ಗಳಿವೆ (ಸರ್ಕಾರದ್ದು-8964, ಬಾಡಿಗೆಯದ್ದು 2714). 426 ಬಸ್ ನಿಲ್ದಾಣಗಳಿದ್ದು 126 ಬಸ್ ಡಿಪೊಗಳಿವೆ. 2019ರಲ್ಲಿ ಎಪಿಎಸ್ಆರ್ಟಿಸಿಯ ಒಟ್ಟು ಆದಾಯ ₹5,995 ಕೋಟಿ ಆಗಿದ್ದು, ಒಟ್ಟು ನಷ್ಟ ₹6,445 ಕೋಟಿ ಎಂದು ಅಂದಾಜಿಸಲಾಗಿದೆ.
ಸಾರಿಗೆ ನೌಕರರ ದಿಢೀರ್ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ: ಅನಂತ ಸುಬ್ಬರಾವ್
Published On - 6:29 pm, Fri, 11 December 20