ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ

ಎಡ ಬಲದ ಜಂಜಾಟಕ್ಕೆ ಹೋಗದೇ ತಾನಾಯಿತು, ತನ್ನ ಸಂಶೋಧನೆ ಆಯಿತು ಎಂದು ಸದಾ ರೈತರ ಮತ್ತು ಗ್ರಾಮೀಣ ಜನರ ಮಧ್ಯೆ ಓಡಾಡುವ ಎಮ್.ಎಸ್.ಶ್ರೀರಾಮ ಬರೀ ಕತೆಗಾರರಲ್ಲ. ದೈತ್ಯ ಸಂಶೋಧಕ ಕೂಡ. ಈಗ ನಡೆಯುತ್ತಿರುವ ರೈತೆ ಹೋರಾಟದ ಬಗ್ಗೆ ಮನ ಬಿಚ್ಚಿ ಮಾತಾಡಿರುವ ಶ್ರೀರಾಮ್ ತುಂಬಾ ಅರ್ಥಗರ್ಭೀತವಾಗಿ ಇಡೀ ಬೆಳೆವಣಿಗೆಯನ್ನು ವಿಶ್ಲೇಷಿಸಿದ್ದಾರೆ.

ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
bhaskar hegde

| Edited By: sadhu srinath

Dec 12, 2020 | 10:09 AM

ಕನ್ನಡದ ಶ್ರೇಷ್ಠ ಕತೆಗಾರರಾಗಿರುವ ಎಮ್.ಎಸ್​. ಶ್ರೀರಾಮ್ ಕರ್ನಾಟಕ ಕಂಡ ಅಪರೂಪದ ಸಂಶೋಧಕರೂ ಹೌದು. ಹಣಕಾಸು, ಬ್ಯಾಂಕಿಂಗ್, ರೈತರ ವಿಷಯದಲ್ಲಿ ಆಳವಾಗಿ ಅಭ್ಯಸಿಸಿದವರು. ಕರ್ನಾಟಕ ಸೇರಿದಂತೆ ಆರೇಳು ರಾಜ್ಯದ ಗ್ರಾಮೀಣ ಭಾಗದಲ್ಲಿ ಕಳೆದ ಎರಡುವರೆ ದಶಕಗಳಿಗಂತಲೂ ಹೆಚ್ಚಿನ ಅವಧಿ ಕೆಲಸ ಮಾಡಿದ ಅನುಭವ ಅವರದ್ದು.

ಸದ್ಯ, ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವ್ಯವಹಾರ ನಿರ್ವಹಣಾ ಸಂಸ್ಥೆಯಲ್ಲಿ (IIMB) ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ್ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ: ತಾವು ಹಣಕಾಸು, ಬ್ಯಾಂಕಿಂಗ್, ಕೃಷಿ ಮತ್ತು ಸಹಕಾರ ವಲಯದಲ್ಲಿ ಆಳವಾಗಿ ಅಧ್ಯಯನ, ಸಂಶೋಧನೆ ನಡೆಸಿದ್ದೀರಿ. ನಿಮ್ಮ ಪ್ರಕಾರ, ಕೃಷಿ ವಲಯದಲ್ಲಿ ಇರುವ ಸಮಸ್ಯೆ ಎಲ್ಲಾ ಕಡೆಯೂ ಒಂದೇ ರೀತಿಯದಾಗಿದೆಯೋ? ಒಂದೊಂದು ರಾಜ್ಯ ಒಂದೊಂದು ಸಮಸ್ಯೆ ಹೊಂದಿದೆ ಎನ್ನಿಸುತ್ತಾ?

ಉ: ರೈತ ವಲಯದ ಸಮಸ್ಯೆ ತೀರಾ ಸಂಕೀರ್ಣವಾಗಿದೆ. ಕೃಷಿ ಮಣ್ಣಿನ ಗುಣ, ನೀರಿನ ಲಭ್ಯತೆ, ಕೃಷಿ ಚಟುವಟಿಯಲ್ಲಿ ತೊಡಗಿಸಿದ ಗೊಬ್ಬರ ಮತ್ತು ಇನ್ನಿತರೆ ಪರಿಕರಗಳು, ಸಹಾಯಕ ಸೇವೆ ಮತ್ತು ಮಾರುಕಟ್ಟೆಯನ್ನು ಅವಲಂಬಿಸಿದೆ. ಕೃಷಿ ಒಂದು ಏಕ ಶಿಲೆಯ ಶಿಲ್ಪದಂತಲ್ಲ. ಅದೊಂದು ಸ್ವತಂತ್ರ ವ್ಯವಹಾರ. ಪ್ರತಿ ರೈತ ಕೂಡ ವ್ಯವಹಾರ ಮಾಡುವ ವ್ಯವಹಾರಸ್ಥ (entrepreneur). ಪ್ರತಿಯೊಬ್ಬರೂ ತಮ್ಮ ಹಿಂದಿನ ಅನುಭವದಲ್ಲಿ ಕಂಡ ಕಾಣ್ಕೆಯೊಂದಿಗೆ ಕೃಷಿಯಲ್ಲಿ ತೊಡಗಿರುತ್ತಾನೆ.

ಪ್ರ: ದೆಹಲಿಯಲ್ಲಿ ಚಳವಳಿ ನಿರತ ರೈತರು ಎಮ್​ಎಸ್​ಪಿ ಅಂದರೆ ಕನಿಷ್ಠ ಬೆಂಬಲ ಬೆಲೆ ವಿಚಾರವೂ ಸೇರಿ ಹಲವಾರು ಬೇಡಿಕೆ ಮುಂದಿಟ್ಟುಕೊಂಡು ಹೋರಾಡುತ್ತಿದ್ದಾರೆ. ತಮ್ಮ ಅನುಭವದ ಪ್ರಕಾರ ಈಗ ರೈತರು ಕೇಳುತ್ತಿರುವ ಎಮ್​ಎಸ್​ಪಿ ರೈತರಿಗೆ ಅನುಕೂಲ ಮಾಡಿಕೊಡುತ್ತೆ ಎನ್ನಿಸುತ್ತಾ?

ಉ: ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಓರ್ವ ಬಿಸಿನೆಸ್​ಮ್ಯಾನ್ ಒಂದು ವ್ಯವಹಾರ ಮಾಡಬೇಕಾದರೆ ಏನನ್ನು ನೋಡುತ್ತಾನೆ ಗೊತ್ತಾ? ತಾನು ಉತ್ಪಾದಿಸುವ ವಸ್ತುವಿಗೆ ಏನು ಮಾರುಕಟ್ಟೆ ಇದೆ ಹಾಗೂ ತಾನು ಹಾಕಿದ ಹಣಕ್ಕೆ ತಿರುಗಿ ಎಷ್ಟು ಲಾಭ ಸಿಗಬಹುದು ಎಂದು ನೋಡುತ್ತಾನೆ. ಅಷ್ಟೇ ಅಲ್ಲ, ಹಾನಿ ಆಗುವ ಲಕ್ಷಣ ಕಂಡರೆ ಅಥವಾ ಮಾರುಕಟ್ಟೆ ಸಿಗುತ್ತಿಲ್ಲ ಎಂದಾಗ ಆತ ಬಿಸಿನೆಸ್​ ನಿಲ್ಲಿಸುತ್ತಾನೆ. ಕೃಷಿಯಲ್ಲಿ ಹಾಗಲ್ಲ. ಆತ ಅಷ್ಟು ಬೇಗನೇ ತನ್ನ ಕೃಷಿ ಚಟುವಟಿಕೆಯಿಂದ ಅಥವಾ ಹಾಕಿದ ಬೆಳೆ ಬದಲು ಮಾಡಲಾಗದು. ಹಾಗಾಗಿ ರೈತನಿಗೆ ಒಂದು ರೀತಿಯಲ್ಲಿ ಮೊದಲೇ ಭರವಸೆ ನೀಡುವದೇ ಈ ಎಮ್​ಎಸ್​ಪಿ ಅಂದರೆ ಕನಿಷ್ಠ ಬೆಂಬಲ ಬೆಲೆ. ನೋಡಿ, ವಿದ್ಯುತ್ ಉತ್ಪಾದನೆ ಮಾಡುವವರು ಮೊದಲೇ ಖರೀದಿ ಒಪ್ಪಂದ ಮಾಡಿಕೊಂಡಿರುತ್ತಾರೆ. ಇದು ಏನು? ಇದು ಕೂಡ ಎಮ್ ಎಸ್ ಪಿ ಥರಾನೇ ಅಲ್ಲವೇ? ಲಾಕ್​ಡೌನ್​ ಸಮಯದಲ್ಲಿ ಎಲ್ಲ ಚಟುವಟಿಕೆ ನಿಂತಿತ್ತು. ಆದರೆ ಕೃಷಿ ಚಟುವಟಿಕೆ ನಿಂತಿರಲಿಲ್ಲ. ನೋಡಿ ರಾಷ್ಟ್ರದ ಬೇರೆ ಎಲ್ಲ ಆರ್ಥಿಕ ಸೂಚ್ಯಾಂಕ ನಮ್ಮ ಎಕಾನಮಿ ಬೀಳುತ್ತಿರುವುದನ್ನು ತೋರಿಸಿದರೆ ಕೃಷಿ ವಲಯ ಮಾತ್ರ ಉತ್ತಮ ಭರವಸೆ ನೀಡಿದೆ.

ಇದನ್ನೂ ಓದಿ: Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

ಪ್ರತಿಭಟನಾ ನಿರತ ರೈತರು

ಪ್ರ: ಹಾಗಾದರೆ ಎಲ್ಲ ಬೆಳೆಗಳಿಗೆ, ಕೃಷಿ ಚಟುವಟಿಕೆಗೂ ಬೆಂಬಲ ಬೆಲೆ ನಿರ್ಧರಿಸಬೇಕಾ?

ಉ: ಹಾಗೇನಿಲ್ಲ. ಕೆಲವು ಬೆಳೆಗಳಿಗೆ ಮತ್ತು ಉತ್ಪನ್ನಗಳಿಗೆ ತುಂಬಾ ಉತ್ತಮ ಮಾರುಕಟ್ಟೆ ಇದೆ. ಉದಾಹರಣೆಗೆ ಡೇರಿ, ಕುಕ್ಕುಟ, ತೋಟಗಾರಿಕೆ ಬೆಳೆಗಳಿಗೆ ಒಳ್ಳೆ ಮಾರುಕಟ್ಟೆ ಇದೆ. ಹಾಗಾಗಿ ಅವಕ್ಕೆ ಎಮ್ಎಸ್​ಪಿ ಬೇಕಾಗಲ್ಲ. ನಾವು ಚರ್ಚಿಸುತ್ತಿರೋದು, ಸಿರಿಧಾನ್ಯ, ಬೇಳೆಕಾಳು, ಆಲೂಗಡ್ಡೆಯಂಥ ಬೆಳೆಗಳು ಮತ್ತು ಸಕ್ಕರೆಗೆ ಎಮ್​ಎಸ್​ಪಿ ಅಥವಾ ಸಮಗ್ರ ನೀತಿ ಬೇಕಾಗುತ್ತೆ.

ಪ್ರ: ಹಾಗಾದರೆ, ಭಾರತ, ಈ ಎಮ್​ ಎಸ್​ ಪಿಗಿಂತ ಮುಂದೆ ಬೇರೆ ಯಾವುದಾದರೂ ಹೊಸ ವ್ಯವಸ್ಥೆ ಕಂಡು ಕೊಳ್ಳೋದು ಸಾಧ್ಯವೇ?

ಉ: ಇದಕ್ಕೆ ಉತ್ತರ ಕೊಡೋದು ಸ್ವಲ್ಪ ಕಷ್ಟ ಏಕೆಂದರೆ ಇಡೀ ವಿಚಾರವೇ ತುಂಬಾ ಸಂಕೀರ್ಣವಾಗಿದೆ. ಆದರೆ ಒಂದು ವಿಚಾರ ಹೇಳಬಹುದು. ಹಾಲಿನ ಉತ್ಪನ್ನದ ಮಾರಾಟಕ್ಕೆ ಹೇಗೆ ಒಂದು ಮೌಲ್ಯವರ್ಧಿತ ದಾರಿ ನಿರ್ಮಿತವಾಗಿದೆಯಲ್ಲ. ಹಾಂ! ಹಾಲಿನ ಉತ್ಪನ್ನ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ಖಾಸಗೀ ಪಾಲದಾರರು ಬಂದು ರೈತನಿಗೆ ಸಹಾಯವಾಗಲಿಲ್ಲ (ಸಹಕಾರಿ ಕ್ಷೇತ್ರದಿಂದ ಅದು ಬೆಳೆಯಿತು). ನಾವು ಎಮ್​ಎಸ್​ಪಿಗಿಂತ ಮುಂದೆ ಹೋಗಬೇಕು ಎಂದರೆ ರೈತರ ಚಟುವಟಿಕೆಗೆ ಹಣಕಾಸಿನ ಪೂರೈಕೆ ನಿಲ್ಲದಂತೆ ನೋಡಿಕೊಳ್ಳಬೇಕಾಗುತ್ತೆ. ಹಾಗೂ ಆತನಿಗೆ ಬೆಳೆ ಮತ್ತು ಮಾರುಕಟ್ಟೆ ವಿಚಾರದಲ್ಲಿ ಅವನಿಗೆ ಆಯ್ಕೆ ಇರುವಂತೆ ನೋಡಿಕೊಳ್ಳಬೇಕಾಗುತ್ತೆ. ಆದರೆ ಈಗಿನ ವ್ಯವಸ್ಥೆ (infrastructure) ಅದನ್ನು ಪೂರೈಸುವಂತೆ ಕಾಣುತ್ತಿಲ್ಲ.

ಪ್ರ: ಕೇಂದ್ರ ಸರಕಾರ ತಂದಿರುವ ಮೂರು ಕಾಯ್ದೆಗಳ ವಿಚಾರಕ್ಕೆ ಬರೋಣ. ಮೂರು ಕಾಯ್ದೆಗಳು ಇವತ್ತಿನ ದಿನಕ್ಕೆ ಬೇಕು ಅಂತ ಅನ್ನಿಸುತ್ತಾ? ತಂದಿರುವ ಸಮಯ ಸರೀನಾ?

ಉ: ಇಲ್ಲ, ಇದು ಜಾರಿಗೆ ತಂದಿರುವ ಸಮಯ ಸರಿ ಇಲ್ಲ ಹಾಗಾಗಿ ಇದರ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ.

ಇದನ್ನೂ ಓದಿ: Fact Check | ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನ್ ಪೋಸ್ಟರ್: ವೈರಲ್ ಫೋಟೊ ಹಿಂದಿರುವ ಸತ್ಯಾಸತ್ಯತೆ ಏನು?

ದೆಹಲಿ ಚಲೋದಲ್ಲಿ ಭಾಗವಹಿಸಿರುವ ಪಂಜಾಬಿ ರೈತ

ಪ್ರ: ಹೋರಾಟ ನಿರತ ರೈತರ ಪ್ರಕಾರ ಈ ಕಾಯ್ದೆಗಳು ಕಾರ್ಪೊರೇಟ್​ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವಂಥದ್ದು, ನಿಮಗೇನು ಅನ್ನಿಸುತ್ತೆ?

ಉ: ಇದು ಬಂದ ಸಮಯ ನೋಡಿದಾಗ ಹಾಗೆ ಅನ್ನಿಸುತ್ತೆ. ಈಗ ಒಂದು ವಿಚಾರ ನೋಡಿ: ಆಡಳಿತ ಪಕ್ಷಕ್ಕೆ ಹತ್ತಿರವಿರುವ ರೈತ ಸಂಘಟನೆಗಳನ್ನೂ ಸೇರಿಸಿಕೊಂಡು ಯಾರೂ ಇದನ್ನು ಸ್ವಾಗತಿಸಿಲ್ಲ. ರೈತರು ಒಪ್ಪಂದ ಮಾಡಿಕೊಳ್ಳುವ ವ್ಯವಸ್ಥೆ ಮತ್ತು ಬೃಹತ್ ಪ್ರಮಾಣದಲ್ಲಿ ಸಂಗ್ರಹಣಾ ವ್ಯವಸ್ಥೆ ಮಾಡಿಕೊಳ್ಳುವುದನ್ನು ಈ ಮೂರು ಕಾಯ್ದೆಗಳು ಒತ್ತಿ ಹೇಳುತ್ತವೆ. ಅಂದರೆ, ಸರಕಾರ ಇಲ್ಲಿ ಹಣ ತೊಡಗಿಸಲು ಮುಂದೆ ಬರುತ್ತಿಲ್ಲ ಎಂದಂತಾಯ್ತು. ಆದ್ದರಿಂದ, ಬಂಡವಾಳ ಖಾಸಗೀ ವಲಯದಿಂದಲೇ ಬರಬೇಕಾಗುತ್ತದೆ. ಖಾಸಗೀ ವಲಯ ಎಂದರೆ ಕಾರ್ಪೊರೇಟ್ ಅಂತ ಅಲ್ಲವೇ? ಇಲ್ಲಿ ರೈತರಿಗೆ ವಿಶೇಷ ಹಕ್ಕಿನ ಪ್ರಸ್ತಾಪ ಮಾಡಿಲ್ಲ. ಹಾಗಾಗಿ ಅವರಿಗೆ ಭಯ ಮತ್ತು ವಿರೋಧಿಸಲು ಸಕಾರಣವಿದೆ.

ಪ್ರ: ಇದೇ ಕಾರಣಕ್ಕೆ ಪಂಜಾಬ್ ಮತ್ತು ಹರ್ಯಾಣ ರಾಜ್ತದ ರೈತರು ಹೋರಾಟ ಮಾಡುತ್ತಿದ್ದಾರೆ ಅಂತ ಅನ್ನಿಸುತ್ತಾ?

ಉ: ಪ್ರಾಯಶಃ ಅವರಿಗೆ ಈ ಹೊಸ ವ್ಯವಸ್ಥೆಯ ಪರಿಣಾಮ ಏನು ಎಂಬುದು ಗೊತ್ತಿರಬಹುದು. ಪಾಲುಗಾರಿಕೆ, ಮೂಲ ಸೌಕರ್ಯ ವ್ಯವಸ್ಥೆ ಮತ್ತು ಬೆಳೆ ಸಂಗ್ರಹಣಾ ವ್ಯವಸ್ಥೆಯನ್ನು ಅವರು ಈಗಾಗಲೇ ನೋಡಿದ್ದಾರೆ. ಹೊರ ಜಗತ್ತಿನ ಆರ್ಥಿಕ ಚಟುವಟಿಕೆಗಳನ್ನು ಅವರು ನೋಡಿದ್ದಾರೆ ಆದ್ದರಿಂದಲೇ ಅವರು, ದೀರ್ಘ ಹೋರಾಟಕ್ಕೆ ತಯಾರಾಗಿದ್ದಾರೆ. ನಾವು ಅವರನ್ನು ಶ್ರೀಮಂತ ರೈತರು ಎಂದು ದೂಷಿಸುವುದು ತಪ್ಪು. ಆ ಶ್ರೀಮಂತ ರೈತರ ಬಗ್ಗೆ ನಾವು ಖುಷಿ ಪಡಬೇಕು.

ಪ್ರ: ಹಾಗಾದರೆ, ಬೇರೆ ರಾಜ್ಯದ ರೈತರು ಯಾಕೆ ಈ ಚಳುವಳಿಗೆ ಸೇರಿಲ್ಲ?

ಉ: ಅವರು ಕೂಡ ಚಳವಳಿ ಸೇರಿದ್ದಾರೆ. ಆದರೆ, ಪಂಜಾಬ್ ಮತ್ತು ಹರ್ಯಾಣ ರಾಜ್ಯದ ರೈತರಷ್ಟು ಸಂಖ್ಯೆಯಲ್ಲಿ ಇರಲಿಕ್ಕಿಲ್ಲ. ನಾನು ಮೊದಲೇ ಹೇಳಿದಂತೆ, ಒಂದೊಂದು ರಾಜ್ಯದ ಸಮಸ್ಯೆ ಒಂದೊಂದು. ಬೇರೆ ರಾಜ್ಯದಲ್ಲಿ ಸಮಸ್ಯೆ ಇನ್ನೂ ತೀವ್ರವಾಗಿದೆ. ಕಾಂಟ್ರಾಕ್ಟ್​ ಕೃಷಿಯಿಂದ (ಗೇಣಿ ಕೃಷಿ) ಆಗುವ ಸಂಕಷ್ಟ ಪಂಜಾಬಿನ ರೈತರಿಗೆ ಗೊತ್ತಿದೆ. ಈ ದೊಡ್ಡ ಕಾರ್ಪೊರೇಟ್​ಗಳು ಬಂದಾಗ ರೈತರಿಗೆ ಮಾತುಕತೆ ಮಾಡಿಕೊಳ್ಳಲು ಅವಕಾಶವಿಲ್ಲದಿರುವುದನ್ನ ಅವರು ನೋಡಿದ್ದಾರೆ. ಹಾಗಾಗಿ ಚಳುವಳಿಗೆ ಇಳಿದಿದ್ದಾರೆ ಅಂತ ನನಗನ್ನಿಸುತ್ತೆ.

ಇದನ್ನೂ ಓದಿ: ಚಳಿಗೆ ದೆಹಲಿ ಗಢಗಢ, ಆದ್ರೆ ಅವಡುಗಚ್ಚಿ ಅಚಲವಾಗಿ ಕುಳಿತ ಪಂಜಾಬ್ ರೈತರು!

ದೆಹಲಿಯ ಗಢಿಭಾಗದಲ್ಲಿ ಪ್ರತಿಭಟನಾನಿರತ ರೈತರು

ಪ್ರ: ಅಂದರೆ, ಈ ಚಳವಳಿಯಲ್ಲಿ, ನೀವು ರಾಜಕೀಯ ಕಂಡಿದ್ದೀರಾ?

ಉ: ಇಲ್ಲೀತನಕ ಇಲ್ಲ. ಹಾಗೆ ನೋಡಿದರೆ ರಾಜಕೀಯ ಯಾವತ್ತೂ ಜನರನ್ನು ಬಿಟ್ಟಿಲ್ಲ. ಒಂದು ದೃಷ್ಟಿಯಲ್ಲಿ ರಾಜಕೀಯ ಎಂದರೆ ಜನರ ಸಮಸ್ಯೆಯನ್ನು ಹೇಳುವುದೇ (articulate) ಅಲ್ಲವೇ? ಉದಾಹರಣೆಗೆ ನಾನು ಕೆಲಸ ಮಾಡೋ ಐಐಎಮ್​ನ ಕ್ಯಾಂಟೀನ್ ಬಗ್ಗೆ ಯಾವುದಾದರೂ ರಾಜಕಾರಿಣಿ ಮಾತನಾಡೋಕ್ಕಾಗುತ್ತಾ? ಅವರ ಮಾತು ಜನರಲ್ಲಿ ಅನುರಣನಗೊಳ್ಳಬೇಕು. ಆಗಲೇ ಅದಕ್ಕೆ ಬೆಲೆ. ನನ್ನ ಪ್ರಕಾರ ಇನ್ನೂ ಹೆಚ್ಚಿನ ರಾಜಕೀಯ ರೈತರ ವಿಚಾರದಲ್ಲಿ ಇರಬೇಕು. ನಾವು ರೈತರ ವಿಚಾರವನ್ನು ತುಂಬಾ ಕಡಿಮೆ ಚರ್ಚಿಸುತ್ತೇವೆ.

ಪ್ರ: ಹಾಗಾದರೆ, ಮುಂದಿನ ದಾರಿ ಹೇಗೆ?

ಉ: ಸರಕಾರ ಪ್ರತಿಷ್ಠೆ ಬಿಡಬೇಕು. ಒಂದು ಸುದೀರ್ಘ ಕೃಷಿ ನೀತಿಯನ್ನು ಪ್ರಸ್ತುತಪಡಿಸಬೇಕು. ಈ ನೀತಿ, ಪ್ರತಿ ಬೆಳೆಗೆ ಬೇಕಾಗುವ ನೀರು, ಬೆಳೆ ಬೆಳೆಯುವ ವಿಧಾನ, ವಿದ್ಯುತ್, ಫಸಲು ಸಂಗ್ರಹಣಾ ವಿಧಾನ, ಗೋದಾಮು, ಮಾರುಕಟ್ಟೆ ಮತ್ತು ಮೂಲಸೌಕರ್ಯ ಇವೆಲ್ಲವುದರ ಬಗ್ಗೆ ವಿಸ್ತೃತವಾಗಿ ಹೇಳಬೇಕಾಗುತ್ತೆ. ಆ ನೀತಿಯಲ್ಲಿ, ರೈತರಿಗೆ ಫಸಲು ಮಾರಾಟಕ್ಕೆ ಇರುವ ಹಲವಾರು ದಾರಿಯನ್ನು ಗುರುತಿಸಬೇಕು ಮತ್ತು ಬಹು ಮುಖ್ಯವಾಗಿ ಇಡೀ ಚಟುವಟಿಕೆಗೆ ಹಣಕಾಸನ್ನು ನಿಲ್ಲದಂತೆ ಕೊಡುವ  ವ್ಯವಸ್ಥೆ ಇರಬೇಕು.  ಇದರ ಇನ್ನೊಂದು ಕೊಂಡಿ ನಮ್ಮ ಸಾರ್ವಜನಿಕ ವಿತರಣಾ ವ್ಯವಸ್ಥೆ ಜೊತೆಗೆ ಸೇರಿರಬೇಕು. ಒಂದು ಸುದೀರ್ಘ ಚಿಂತನೆ ಮೂಲಕ ನೀತಿ ಹುಟ್ಟಬೇಕೇ ವಿನಹ ಯಾವುದೇ ಅಧ್ಯಾದೇಶದ ಮೂಲಕ ಅಲ್ಲ.

ಪ್ರ: ಹಾಗಾದರೆ, ನಿಮ್ಮ ಪ್ರಕಾರ ಈಗ ತಂದಿರುವ ಕಾನೂನನ್ನು ಹಿಂತೆಗೆದುಕೊಳ್ಳಬೇಕು ಅಂತ ಅನ್ನಿಸುತ್ತಾ?

ಉ: ಖಂಡಿತ. ಯಾಕೆಂದರೆ, ಅವರು ಸಾಕಷ್ಟು ಪರಾಮರ್ಶೆ ಮಾಡಿ ಈ ಕಾನೂನು ತಂದಿದ್ದಾರೆ ಎಂದು ನನಗನ್ನಿಸುವುದಿಲ್ಲ.

ಕೃಷಿ ತಿದ್ದುಪಡಿ ಕಾಯ್ದೆ: ರೈತರು ಈ ಪರಿ ರೊಚ್ಚಿಗೇಳಲು ಕಾರಣವೇನು? ನೀವು ತಿಳಿದುಕೊಳ್ಳಬೇಕಿರುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ

Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada