Driving Licence: ಡ್ರೈವಿಂಗ್ ಲೈಸೆನ್ಸ್ ನವೀಕರಣ ಸೇರಿ, 16 ಸೇವೆಗಳನ್ನು ಆನ್ಲೈನ್ ಮೂಲಕ ಪಡೆಯಲು ಆಧಾರ್ ದೃಢೀಕರಣ ಅಗತ್ಯ
ಸುರಕ್ಷತೆ ದೃಷ್ಟಿಯಿಂದ aadhaar authentication ಅನಿವಾರ್ಯವಾಗಿದೆ. ವಾಹನಕ್ಕೆ ಸಂಬಂಧಪಟ್ಟಂತ ನಕಲಿ ದಾಖಲೆಗಳು, ಲೈಸೆನ್ಸ್ಗಳನ್ನು ಹೊಂದುವುದನ್ನು ತಪ್ಪಿಸಲು ಇದು ಸಹಕಾರಿ ಎಂದು ಸಾರಿಗೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ.
ದೆಹಲಿ: ವಾಹನ ಮಾಲೀಕರಾಗಿದ್ದು, ವಾಹನ ಚಾಲನಾ ಪರವಾನಗಿ ಹೊಂದಿರುವವರು ಡಿಎಲ್ ನವೀಕರಣ ಸೇರಿ ಒಟ್ಟು 16 ರೀತಿಯ ಸೇವೆಗಳನ್ನು ಸಾರಿಗೆ ಇಲಾಖೆಯ ಆನ್ಲೈನ್ ಪೋರ್ಟಲ್ ಮೂಲಕ ಪಡೆಯಲು ಆಧಾರ್ ಸಂಖ್ಯೆಯ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ನೀವು ಸಾರಿಗೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡದೆ, ಸಂಪರ್ಕಿಸದೆ ಆನ್ಲೈನ್ ಮೂಲಕವೇ ಡಿಎಲ್ (ವಾಹನ ಚಾಲನಾ ಪರವಾನಗಿ) ನವೀಕರಣ, ವಾಹನ ಕಲಿಕಾ ಪರವಾನಗಿ, ವಿಳಾಸ ಬದಲಾವಣೆ, ನೋಂದಣಿ ಪ್ರಮಾಣ ಪತ್ರ, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ (international driving licence), ವಾಹನ ಮಾಲೀಕತ್ವ ವರ್ಗಾವಣೆ ಅರ್ಜಿ, ಮತ್ತು ವರ್ಗಾವಣೆ ನೋಟಿಸ್ ಪಡೆಯುವುದು ಸೇರಿ ಒಟ್ಟು 16 ರೀತಿಯ ಸರ್ವೀಸ್ ಪಡೆಯಲು ಬಯಸುತ್ತೀರಿ ಎಂದಾದರೆ ಆಧಾರ್ ದೃಢೀಕರಣ ಬೇಕೇಬೇಕು.
ಈ ಬಗ್ಗೆ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಕರಡು ಆದೇಶ ಹೊರಡಿಸಿದೆ. ಯಾರೇ ಆಗಲಿ, ಆನ್ಲೈನ್ ಮೂಲಕವೇ ನೀವು ಸರ್ವೀಸ್ ಪಡೆಯಲು ಬಯಸುತ್ತೀರಿ ಎಂದಾದರೆ ನಿಮ್ಮ ಆಧಾರ್ ದೃಢೀಕರಣ ಮಾಡಿಕೊಳ್ಳಲೇಬೇಕು. ಇನ್ನು ಹೀಗೆ ಆಧಾರ್ ದೃಢೀಕರಣಕ್ಕೆ ಒಪ್ಪದೆ ಇದ್ದವರು ಸಾರಿಗೆ ಕಚೇರಿಗೇ ಹೋಗಿ ನಿಮ್ಮ ಕೆಲಸ ಮಾಡಿಕೊಳ್ಳಬಹುದು ಎಂದೂ ಸಾರಿಗೆ ಇಲಾಖೆ ತಿಳಿಸಿದೆ.
ಉತ್ತಮ ಆಡಳಿತದ ಒಂದು ಭಾಗವಾಗಿ ಈ ಕರಡು ಆದೇಶ ಪ್ರಸ್ತಾಪಿಸಿದ್ದಾಗಿ ಸಾರಿಗೆ ಇಲಾಖೆ ಹೇಳಿಕೊಂಡಿದ್ದು, ಈಗಾಗಲೇ ಅದಕ್ಕೆ ಹಲವು ಸಲಹೆ, ಆಕ್ಷೇಪಣೆಗಳು ಬಂದಿವೆ. ಇತ್ತೀಚೆಗೆ ಆನ್ಲೈನ್ ಮೂಲಕವೇ ಎಲ್ಲ ಕೆಲಸ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಅದು ಸುಲಭವೂ ಹೌದು. ಆದರೆ ಸುರಕ್ಷತೆ ದೃಷ್ಟಿಯಿಂದ ಆಧಾರ್ಕಾರ್ಡ್ ದೃಢೀಕರಣ ಅನಿವಾರ್ಯವಾಗಿದೆ. ವಾಹನಕ್ಕೆ ಸಂಬಂಧಪಟ್ಟಂತ ನಕಲಿ ದಾಖಲೆಗಳು, ಲೈಸೆನ್ಸ್ಗಳನ್ನು ಹೊಂದುವುದನ್ನು, ಒಂದಕ್ಕಿಂತ ಹೆಚ್ಚು ಪರವಾನಗಿಗಳನ್ನು ಪಡೆಯುವುದನ್ನು ತಪ್ಪಿಸಲು ಇದು ಸಹಕಾರಿ ಎಂದು ಸಾರಿಗೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ. ಹಾಗೇ, ಇದು ಸ್ವಯಂಪ್ರೇರಿತವಾಗಿದ್ದು, ಕಡ್ಡಾಯವಲ್ಲ. ಆಯಾ ರಾಜ್ಯಸರ್ಕಾರಗಳು ಈ ಕ್ರಮವನ್ನು ಉತ್ತೇಜಿಸಬೇಕು. ಜನರಲ್ಲಿ ಅರಿವು ಮೂಡಿಸಬೇಕು ಎಂದೂ ತಿಳಿಸಿದೆ.
ಇದನ್ನೂ ಓದಿ: RBI Grade B Recruitment 2021: ಗ್ರೇಡ್ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI; ಖಾಲಿ ಇವೆ ಒಟ್ಟು 322 ಹುದ್ದೆ
Published On - 7:08 pm, Wed, 10 February 21