Driving Test ಇಲ್ಲದೇ ಲೈಸೆನ್ಸ್! ಕೇಂದ್ರ ಸರ್ಕಾರದಿಂದ ಮಹತ್ವದ ಪ್ರಸ್ತಾವನೆ; ಆದರೆ ಅದು ಅಪಾಯಕಾರಿ ಅಲ್ಲವೇ?
Driving License ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸದ್ಯ ಒಂದು ಕರಡು ಅಧಿಸೂಚನೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಅದರಲ್ಲಿ ಲೈಸೆನ್ಸ್ ಪಡೆಯುವ ಹೊಸ ನಿಯಮದ ಬಗ್ಗೆ ವಿವರಿಸಿದೆ.
ಡ್ರೈವಿಂಗ್ ಕಲಿಯುವುದಕ್ಕಿಂತ ಡ್ರೈವಿಂಗ್ ಲೈಸೆನ್ಸ್ ಪಡೆಯುವುದೇ ಕಷ್ಟ ಎಂಬಂತಾಗಿದೆ. ವಾಹನ ಚಲಾಯಿಸುವುದನ್ನು ಎಷ್ಟೇ ಸರಿಯಾಗಿ ಕಲಿತು, ಪರವಾನಗಿ ಪಡೆಯಲು ಆರ್ಟಿಒಗೆ ಹೋದರೂ ಅಲ್ಲಿ ಟೆಸ್ಟ್ ಎದುರಿಸಲೇಬೇಕು. ಅವರು ಹೇಳಿದ ರಸ್ತೆಯಲ್ಲಿ ಗಾಡಿ ಓಡಿಸಿ, ತೋರಿಸಬೇಕು.. ಅದೆಲ್ಲ ಆದರೂ ಲೈಸೆನ್ಸ್ ಬೇಗ ಸಿಗುವುದಿಲ್ಲ. ಹಣ ಕೊಡಬೇಕು.. ಕಾಯಬೇಕು ಹೀಗೆ ಒಂದೆರಡು ರಗಳೆಗಳೇ ಅಲ್ಲ!
ಆದರೆ ಕೇಂದ್ರ ಸರ್ಕಾರ ಈಗೊಂದು ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಈ ನಿಯಮ ಅಧಿಕೃತವಾಗಿ ಜಾರಿಗೆ ಬಂದರೆ ಲೈಸೆನ್ಸ್ ಪಡೆಯುವಾಗ ಆರ್ಟಿಒ (ಪ್ರಾದೇಶಿಕ ರಸ್ತೆ ಕಚೇರಿಗೆ) ಹೋದರೆ ನೀವಲ್ಲಿ ಮತ್ತೆ ಟೆಸ್ಟ್ ಎದುರಿಸುವ ಅಗತ್ಯವೇ ಇರುವುದಿಲ್ಲ.
ಖಾಸಗಿಯಾಗಿ ವಶೀಲಿಬಾಜಿ ಶುರುವಾಗುವುದಿಲ್ಲವಾ? ಆದರೆ ಅದು ಅಪಾಯಕಾರಿಯಾಗಲಿದೆ ಎಂಬ ಕೂಗೂ ಕೇಳೀಬಂದಿದೆ. ಎಲ್ಲ ಕಡೆಯೂ (ಅಂದ್ರೆ ಪಟ್ಟಣ ಪ್ರದೇಶಗಳಲ್ಲಿ) ಚಾಲನಾ ತರಬೇತಿ ಕೇಂದ್ರಗಳು ಇರಬೇಕಲ್ಲವಾ? ಎಂದು ಮೂಗೆಳೆದಿದ್ದಾರೆ. ಖಾಸಗಿ ವಲಯದ ಚಾಲನಾ ತರಬೇತಿ ಕೇಂದ್ರಗಳಲ್ಲಿ ವಶೀಲಿಬಾಜಿ ಶುರುವಾಗುವುದಿಲ್ಲವಾ? ಇಲ್ಲಿ ಕೊಡುವ ಹಣ ಅಲ್ಲಿ ಚಾಲನಾ ತರಬೇತಿ ಕೇಂದ್ರಗೆ ಕೊಡುವಂತಾಗುವುದಿಲ್ಲವಾ? ಚಾಲನಾ ತರಬೇತಿ ಕೇಂದ್ರಗಳ ಸಕ್ಷಮತೆ ಅಳೆಯುವುದು ಹೇಗೆ? ಚಾಲನಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ ಮೇಲೆ ಕಲಿಕೆ ಎಷ್ಟೇ ಆಗಿದ್ದರೂ ಬಾಧ್ಯತೆಗೊಳಪಟ್ಟು ಅನುಮೋದನೆ ನೀಡತೊಡಗಿದರೆ ಗತಿಯೇನು? ಎಂಬೆಲ್ಲಾ ಪ್ರಶ್ನೆಗಳು ಅದಾಗಲೇ ಕೇಳಿಬರುತ್ತಿವೆ.
ಏನಿದು ಹೊಸ ನಿಯಮ? ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸದ್ಯ ಒಂದು ಕರಡು ಅಧಿಸೂಚನೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಅದರಲ್ಲಿ ಲೈಸೆನ್ಸ್ ಪಡೆಯುವ ಹೊಸ ನಿಯಮದ ಬಗ್ಗೆ ವಿವರಿಸಿದೆ. ಅದರ ಅನ್ವಯ ಈಗ ದೇಶಾದ್ಯಂತ ಇರುವ ಚಾಲನಾ ತರಬೇತಿ ಕೇಂದ್ರಗಳಲ್ಲಿರುವ ವ್ಯವಸ್ಥೆ, ಚಾಲಕರ ಕ್ಷಮತೆಗಳನ್ನು ಪರಿಶೀಲಿಸಿ ಮಾನ್ಯತಾ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗೆ ಪ್ರಮಾಣ ಪತ್ರ ನೀಡುವ ತರಬೇತಿ ಕೇಂದ್ರಗಳು, ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡುವ ನಿಯಮಗಳನ್ನೂ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಇಂಥ ಮಾನ್ಯತೆ ಪಡೆದ ಡ್ರೈವಿಂಗ್ ಟ್ರೇನಿಂಗ್ ಸೆಂಟರ್ಗಳಲ್ಲಿ ಚಾಲನಾ ತರಬೇತಿ ಪಡೆಯುವವರು ಲೈಸೆನ್ಸ್ ಪಡೆಯಲು ಆರ್ಟಿಒಕ್ಕೆ ಹೋದರೆ ಮತ್ತೆ ಅಲ್ಲಿ ಟೆಸ್ಟ್ ಪಡೆಯುವ ಅಗತ್ಯ ಇರುವುದಿಲ್ಲ. ಇನ್ನು ಈ ಕೇಂದ್ರಗಳ ಹೊರತಾಗಿ ಬೇರೆಯವರ ಬಳಿ ಚಾಲನಾ ತರಬೇತಿ ಪಡೆಯುವವರು, ಸ್ವಂತವಾಗಿ ಕಲಿಯುವವರು ಆರ್ಟಿಒದಲ್ಲಿ ಲೈಸೆನ್ಸ್ ಪಡೆಯುವಾಗ ಮೊದಲಿನಂತೆ ಟೆಸ್ಟ್ಗೆ ಒಳಗಾಗಬೇಕು.
ಹೀಗೆ ಮಾನ್ಯತೆ ನೀಡಲಾಗುವ ತರಬೇತಿ ಕೇಂದ್ರಗಳಲ್ಲಿ ಯಾರು ಯಶಸ್ವಿಯಾಗಿ ಡ್ರೈವಿಂಗ್ ಟ್ರೈನಿಂಗ್ ಮುಗಿಸುತ್ತಾರೋ, ಅವರು ಆರ್ಟಿಒದಲ್ಲಿ ಲೈಸೆನ್ಸ್ಗೆ ಅಪ್ಲೈ ಮಾಡುವಾಗ ಯಾವುದೇ ಟೆಸ್ಟ್ ಪಡೆಯುವ ಅಗತ್ಯ ಇರುವುದಿಲ್ಲ. ಈ ಕ್ರಮದಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಸಚಿವಾಲಯ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.
2025ರ ಹೊತ್ತಿಗೆ ಅರ್ಧದಷ್ಟಾದರೂ ರಸ್ತೆ ಅಪಘಾತಗಳನ್ನು ತಡೆಯಬೇಕು ಎಂಬುದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯದ ಗುರಿ. ಆದರೆ ನಿಧಾನವಾಗಿ ಅನುಷ್ಠಾನಕ್ಕೆ ತರುವ ಪ್ರಕ್ರಿಯೆ ಇದಲ್ಲ. ಪ್ರತಿಯೊಬ್ಬರೂ ಇದನ್ನು ಆದ್ಯತೆಯನ್ನಾಗಿ ಪರಿಗಣಿಸಬೇಕು ಎಂದು ಇತ್ತೀಚೆಗಷ್ಟೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಕೌನ್ಸಿಲ್ ಮೀಟಿಂಗ್ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
MSP ಇತ್ತು, MSP ಇದೆ ಮತ್ತು MSP ಮುಂದೆಯೂ ಇರಲಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ