India-Pakistan Tensions: ಭಾರತದೊಳಗೆ ಪಾಕಿಸ್ತಾನದ ಹಡಗುಗಳಿಗೆ ನಿಷೇಧ
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ಇಂದು ಪಾಕಿಸ್ತಾನದ ಆಮದು ವಸ್ತುಗಳ ಮೇಲೆ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಪಾಕಿಸ್ತಾನಿ ಹಡಗುಗಳ ಮೇಲೆ ನಿಷೇಧ ಹೇರಿದೆ. ಭಾರತದ ಬಂದರುಗಳಲ್ಲಿ ಪಾಕಿಸ್ತಾನಿ ಹಡಗುಗಳ ಪ್ರವೇಶವನ್ನು ನಿಷೇಧಿಸಿರುವುದಾಗಿ ಭಾರತ ಘೋಷಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರತ ಚಾಟಿ ಬೀಸುತ್ತಲೇ ಇದೆ.

Pahalgam Terror Attack: ನವದೆಹಲಿ, ಮೇ 3: ಪಹಲ್ಗಾಮ್ ದಾಳಿಯ ಬಳಿಕ ಭಾರತ ನೆರೆಯ ದೇಶವಾದ ಪಾಕಿಸ್ತಾನದ (Pakistan) ವಿರುದ್ಧ ಅನೇಕ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಯ ಬಗ್ಗೆ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಪಾಕಿಸ್ತಾನದೊಂದಿಗಿನ ಎಲ್ಲ ಸಂಪರ್ಕಗಳನ್ನೂ ಭಾರತ ಕಳೆದುಕೊಳ್ಳುತ್ತಿದೆ. ಇದೀಗ ಭಾರತದ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಇಂದಿನಿಂದ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಹಾಗೇ, ಸುರಕ್ಷತಾ ದೃಷ್ಟಿಯಿಂದ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪಾಕಿಸ್ತಾನದ ಬಂದರುಗಳಿಗೆ ಭೇಟಿ ನೀಡುವುದನ್ನು ಕೂಡ ನಿಷೇಧಿಸಿದೆ.
ಭಾರತೀಯ ಆಸ್ತಿಗಳು, ಸರಕು ಮತ್ತು ಬಂದರು ಮೂಲಸೌಕರ್ಯವನ್ನು ರಕ್ಷಿಸಲು 1958ರ ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆಯ ಸೆಕ್ಷನ್ 411ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಈ ನಿರ್ಬಂಧಗಳನ್ನು ವಿಧಿಸಲಾಗಿದೆ. ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಆದೇಶದಂತೆ, ಪಾಕಿಸ್ತಾನದ ಧ್ವಜವನ್ನು ಹೊಂದಿರುವ ಹಡಗುಗಳು ಯಾವುದೇ ಭಾರತೀಯ ಬಂದರಿಗೆ ಭೇಟಿ ನೀಡಲು ಅನುಮತಿ ಇಲ್ಲ. ಹಾಗೇ, ಭಾರತೀಯ ಧ್ವಜ ಹಡಗು ಪಾಕಿಸ್ತಾನದ ಯಾವುದೇ ಬಂದರುಗಳಿಗೆ ಭೇಟಿ ನೀಡಬಾರದು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಭಾರತ ಬಿಟ್ಟು ಶ್ರೀಲಂಕಾಕ್ಕೆ ಪರಾರಿಯಾದರಾ ಪಹಲ್ಗಾಮ್ ದಾಳಿಯ ಉಗ್ರರು? ಕೊಲಂಬೋ ವಿಮಾನ ನಿಲ್ದಾಣದಲ್ಲಿ ಶೋಧ
ಇಂದು ಭಾರತ ಸರ್ಕಾರವು ಪಾಕಿಸ್ತಾನದಿಂದ ವಾಯು ಮತ್ತು ಮೇಲ್ಮೈ ಮಾರ್ಗಗಳ ಮೂಲಕ ಎಲ್ಲಾ ರೀತಿಯ ಮೇಲ್ ಮತ್ತು ಪಾರ್ಸೆಲ್‌ಗಳ ವಿನಿಮಯವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎರಡೂ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇಂದಿನಿಂದ ಎಲ್ಲಾ ವರ್ಗದ ಒಳಬರುವ ಮೇಲ್‌ಗಳ ವಿನಿಮಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಸಂವಹನ ಸಚಿವಾಲಯ ತಿಳಿಸಿದೆ. ಸಂವಹನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಂಚೆ ಇಲಾಖೆಯು ಸೇವೆಗಳನ್ನು ಸ್ಥಗಿತಗೊಳಿಸುವ ಆದೇಶವನ್ನು ಹೊರಡಿಸಿದೆ.
Ships bearing Pakistan flag shall not be allowed to visit any Indian port. An Indian flag ship shall not visit any ports of Pakistan: Ministry of Ports, Shipping and Waterways pic.twitter.com/IfB95nECCe
— ANI (@ANI) May 3, 2025
ಇದನ್ನೂ ಓದಿ: Pahalgam Attack: ಗಡಿಯಲ್ಲಿ ಉದ್ವಿಗ್ನತೆ; ಪಾಕಿಸ್ತಾನದಿಂದ ಬರುವ ಎಲ್ಲಾ ಆಮದುಗಳಿಗೆ ಭಾರತ ನಿಷೇಧ
ಇದರ ಜೊತೆಗೆ ಪಾಕಿಸ್ತಾನದಿಂದ ಬರುವ ಎಲ್ಲಾ ಆಮದುಗಳನ್ನು ಭಾರತ ನಿಷೇಧಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದು ಪಾಕಿಸ್ತಾನದಿಂದ ಸಾಗಣೆಯಲ್ಲಿರುವ ಎಲ್ಲಾ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ. ಪಾಕಿಸ್ತಾನದಿಂದ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದನ್ನು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇಂದು ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








