ಎಸ್ಟಿ ಪ್ರವರ್ಗದ ಬೇಡಿಕೆಯೊಂದಿಗೆ ರವಿವಾರ ಕುರಬ ಸಮಾಜದ ಬೃಹತ್ ರ‍್ಯಾಲಿ.. ಸಿದ್ದು, ಇನ್ನೂ ಕೆಲವರ ಗೈರು ಸಾಧ್ಯತೆ
ಪರಿಶಿಷ್ಟ ವರ್ಗಕ್ಕೆ (ಎಸ್ಟಿ ಪ್ರವರ್ಗ) ಸೇರಿಸಿ ಎಂಬ ಹಕ್ಕೊತ್ತಾಯದೊಂದಿಗೆ ರವಿವಾರ ನಡೆಯುವ ಕುರುಬ ಸಮಾಜದ ಬೃಹತ್ ರ‍್ಯಾಲಿ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಆದರೆ ಈ ರಾಲಿಯಲ್ಲಿ ಸಮಾಜದ ನಾಯಕ ಸಿದ್ದರಾಮಯ್ಯ ಭಾಗವಹಿಸುತ್ತಿಲ್ಲ ಎಂಬುದು ವಿಪರ್ಯಾಸ.
ಒಂದು ಕಡೆ ಪಂಚಮಸಾಲಿಗಳು ಹಿಂದುಳಿದ ವರ್ಗಗಳ 2ಎ ಪ್ರವರ್ಗಕ್ಕೆ ಸೇರಿಸಿ ಎಂಬ ಹೋರಾಟ. ಮತ್ತೊಂದೆಡೆ ಪರಿಶಿಷ್ಟ ವರ್ಗಕ್ಕೆ ಈಗಿರುವ 3 ಪ್ರತಿಶತ ಮೀಸಲಾತಿಯ ಪ್ರಮಾಣವನ್ನು ಕನಿಷ್ಠ 7 ಕ್ಕೆ ಏರಿಸಿ ಎಂಬ ಬೇಡಿಕೆ. ಈ ಮಧ್ಯೆ ತಮ್ಮನ್ನು ಪರಿಶಿಷ್ಟ ವರ್ಗಕ್ಕೆ (ಎಸ್ಟಿ ಪ್ರವರ್ಗ) ಸೇರಿಸಿ ಎಂಬ ಒತ್ತಾಯ ಕುರುಬ ಸಮಾಜದ ನಾಯಕರು ಮತ್ತು ಸ್ವಾಮೀಜಿಗಳದ್ದು. ಈ ಬೇಡಿಕೆ ಇಟ್ಟುಕೊಂಡು ಒಂದು ತಿಂಗಳಿಂದ ನಡೆಯುತ್ತಿರುವ ಕುರುಬ ಸಮುದಾಯದ ಹೋರಾಟ ನಾಳೆ ಒಂದು ಘಟ್ಟವನ್ನು ತಲುಪಲಿದೆ. ನೆಲಮಂಗಲದ ಬಳಿಯಿರುವ ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದ ಬಳಿ ರವಿವಾರ ನಡೆಯುವ ಬೃಹತ್ ಸಮಾವೇಶದಲ್ಲಿ (ರ‍್ಯಾಲಿ) ಕುರುಬ ಸಮಾಜದ ಮುಖಂಡರು ತಮ್ಮ ಹಕ್ಕೊತ್ತಾಯ ಮಂಡಿಸಿ ರಾಜ್ಯ ಸರಕಾರಕ್ಕೆ ಒತ್ತಾಯಿಸಲಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೈರಾಗುವ ಸಾಧ್ಯತೆ ಹೆಚ್ಚು. ಸ್ವತಃ ಪಂಚಾಯತ್ರಾಜ್ ಮಂತ್ರಿ ಕೆ. ಎಸ್. ಈಶ್ವರಪ್ಪ ಮತ್ತು ಕಾಂಗ್ರೆಸ್ ನಾಯಕ ಎಚ್. ಎಮ್. ರೇವಣ್ಣ ಅವರೊಂದಿಗೆ ಇನ್ನೂ ಹಲವಾರು ನಾಯಕರು ಮತ್ತು ಸಮುದಾಯದ ಸ್ವಾಮೀಜಿಗಳು ನಾಳೆ ಮಾತನಾಡಲಿದ್ದಾರೆ. ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ರೇವಣ್ಣ, ಕನಿಷ್ಠ ಹತ್ತು ಲಕ್ಷ ಜನ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಹಾಗೆಯೇ, ನಾಳೆ ತೆಗೆದುಕೊಳ್ಳಲಿರುವ ನಿರ್ಣಯಗಳ ಬಗ್ಗೆ ವಿವರ ನೀಡಲು ಹಿಂದೇಟು ಹಾಕಿದ್ದಾರೆ. ಈ ವಿವರಗಳನ್ನು ನಾಳೆ ಸಭೆಯಲ್ಲಿ ಹಂಚಿಕೊಳ್ಳಲಾಗುವುದು ಅವರು ತಿಳಿಸಿದ್ದಾರೆ.
ಒಂದು ವಿಶೇಷ ಏನೆಂದರೆ, ನಾಳೆ ನಡೆಯುವ ಸಭೆಗೆ ಹಲವಾರು ಹಿರಿಯ ಕುರುಬ ನಾಯಕರು ಭಾಗವಹಿಸುವ ಸಾಧ್ಯತೆ ಕಡಿಮೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಹಲವಾರು ನಾಯಕರ ಗೈರು ಸಾಧ್ಯತೆಯೇ ಹೆಚ್ಚು. ಈ ಮೂಲಕ ಅವರು ಒಂದು ಸಂದೇಶ ಸ್ಪಷ್ಟವಾಗಿ ನೀಡುವ ಸಾಧ್ಯತೆ ಇದೆ: ಈ ಹೋರಾಟದ ಹಿಂದಿನ ಉದ್ದೇಶ ಸಮುದಾಯಕ್ಕೆ ಸಹಕಾರಿಯಾಗೊಲ್ಲ, ಹಾಗಾಗಿ ತಾನು ಭಾಗವಹಿಸುವುದಿಲ್ಲ. ಅವರ ಇನ್ನೊಂದು ಆರೋಪ ಏನೆಂದರೆ ಇದರ ಹಿಂದೆ ಆರ್ಎಸ್ಎಸ್ ನಾಯಕರಿದ್ದಾರೆ. ಅವರಿಗೆ ಬೇರೆ ಯಾವುದೋ ರಾಜಕೀಯ ಉದ್ದೇಶವಿದೆ ಎಂಬುದು.
ಬೇಡಿಕೆ ಏನು? ಉಳಿದ ಪರಿಶಿಷ್ಟ ವರ್ಗದ ಸಮುದಾಯಗಳಂತೆ, ಕುರುಬ ಸಮುದಾಯ ಕೂಡ ಮೂಲತಃ ಬುಡಕಟ್ಟು ಜನಾಂಗದಿಂದ ಬಂದವರು. ಇದರ ಕುರಿತಾಗಿ ಕುಲ ಶಾಸ್ತ್ರೀಯ ಅಧ್ಯಯನದ ವರದಿ ಇದೆ. ಜೊತೆಗೆ ಬ್ರಿಟಿಷ್ ಕಾಲದ ಇತಿಹಾಸಕಾರರ ಟಿಪ್ಪಣಿಗಳು, ದಾಖಲೆಗಳು ಇವೆ. ಆದ್ದರಿಂದ ತಮ್ಮನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವುದು ನ್ಯಾಯಸಮ್ಮತ ಎಂಬುದು ಈಶ್ವರಪ್ಪ ಮತ್ತು ಇನ್ನಿತರೆ ನಾಯಕರ ನಿಲುವು.
ಒಮ್ಮೆ ಎಸ್ಟಿ ಪ್ರವರ್ಗಕ್ಕೆ ಸೇರಿದರೆ ಏನು ಲಾಭ? ಈಗ ಕರ್ನಾಟಕದಲ್ಲಿ ಎಸ್ಟಿ ಸಮುದಾಯಕ್ಕೆ 3 ಪ್ರತಿಶತ ಮೀಸಲಾತಿ ಇದೆ. ಕುರುಬ ಸಮುದಾಯ ಇರುವ ಬಿಸಿಎ ಪ್ರವರ್ಗಕ್ಕೆ 15 ಪ್ರತಿಶತ ಮೀಸಲಾತಿ ಇದೆ. ಹಾಗೆ ಯೋಚನೆ ಮಾಡಿದರೆ, ಸಿದ್ದರಾಮಯ್ಯ ಹೇಳುವುದರಲ್ಲಿ ತರ್ಕ ಇದೆ ಅಲ್ಲವೇ? 15 ಪ್ರತಿಶತ ಮೀಸಲಾತಿ ಇರುವ ಬಿಸಿಎ ಪ್ರವರ್ಗದಿಂದ ಬರೀ 3 ಪ್ರತಿಶತ ಮೀಸಲಾತಿ ಇರುವ ಎಸ್ಟಿ ಪ್ರವರ್ಗಕ್ಕೆ ಸೇರಿ ಏನು ಪ್ರಯೋಜನ? ಸಿದ್ದರಾಮಯ್ಯ ಅವರ ವಾದ ಏನೆಂದರೆ ಮೊದಲು ಎಸ್ಟಿ ಸಮುದಾಯಕ್ಕೆ ಕನಿಷ್ಠ 7 ಪ್ರತಿಶತ ಮೀಸಲಾತಿ ಕೊಡಿಸಿ ಆಮೇಲೆ, ಕುರುಬ ಸಮುದಾಯದೊಂದಿಗೆ ಇನ್ನುಳಿದ ಕೆಲವು ಸಮುದಾಯಗಳಾದ ಗಾಣಿಗರು, ದೋಭಿ ಮತ್ತು ಉಪ್ಪಾರ ಮುಂತಾದ ಬುಡಕಟ್ಟು ಸಮುದಾಯದ ಲಕ್ಷಣವಿರುವ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ.
ಒಂದು ಉದಾಹರಣೆಯೊಂದಿಗೆ ಈ ವಿಚಾರವನ್ನು ಮಾಜೀ ಮೇಯರ್ ರಾಮಚಂದ್ರಪ್ಪ ಉದಾಹರಿಸಿದ್ದಾರೆ. ಈಗ ಏನಾದರೂ ಕುರುಬ ಸಮುದಾಯ ಏಸ್ಟಿ ಪ್ರವರ್ಗಕ್ಕೆ ಸೇರಿದರೆ 198 ವಾರ್ಡಗಳಿರುವ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಎಂದರೆ 6 ವಾರ್ಡಗಳು ಸಿಗಬಹುದು. ಅದೇ 15 ಪ್ರತಿಶತ ಮೀಸಲಾತಿ ಇರುವ ಬಿಸಿಎ ಪ್ರವರ್ಗದಲ್ಲಿ ಇದ್ದರೆ ಸುಮಾರು 30 ಸ್ಥಾನ ಬರಬಹುದು. ಮೂವತ್ತು ವಾರ್ಡಗಳಲ್ಲಿ, ಹಲವಾರು ಕಡೆ ಕುರುಬ ಜನಾಂಗದವರು ಆಯ್ಕೆ ಆಗಿ ಬರುವ ಸಾಧ್ಯತೆ ಜಾಸ್ತಿ ಇದೆ. ಅಷ್ಟೇ ಅಲ್ಲ, ಮೇಯರ್ ಆಗುವ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ ಎಂಬುದು ಅವರ ವಾದ.
ಸಿದ್ದರಾಮಯ್ಯ ತಂತ್ರಗಾರಿಕೆ ಏನು ಯಾಕೆ? ಲಕ್ಷಾಂತರ ಜನ ಕುರುಬ ಸಮುದಾಯದ ಜನ ಕೇಳುವ ಈ ಎಸ್ಟಿ ಮೀಸಲಾತಿ ಒತ್ತಾಯಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲೀ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರೆ ಜನ ಅವರನ್ನು ತಿರಸ್ಕರಿಸುವುದಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಸಿದ್ದರಾಮಯ್ಯನವರ ಲೆಕ್ಕಾಚಾರ ಬೇರೆ: ಇಡೀ ಕುರುಬ ಸಮುದಾಯಕ್ಕೆ ತಾನೇ ನಾಯಕ. ಏನೇ ಮಾಡಿದರೂ ಈಶ್ವರಪ್ಪ ತನ್ನ ಪಟ್ಟ ಕಸಿದುಕೊಳ್ಳಲು ಸಾಧ್ಯವಿಲ್ಲ. ಚಳುವಳಿ ಮಾಡಿದರೂ ತನ್ನ ಸ್ಥಾನಕ್ಕೆ ಚ್ಯುತಿ ಬರದು ಎಂಬುದು ಅವರ ಲೆಕ್ಕಾಚಾರ. ಕುರುಬ ಸಮಾಜ ಅಥವಾ ಹಾಲುಮತ ಸಮುದಾಯದ ಸ್ವಾಮೀಜಿಗಳು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರೂ ಕೊನೆಗೆ ತಾನು ತೆಗೆದುಕೊಳ್ಳುವ ನಿರ್ಣಯವನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಅವರದ್ದು.
ರಾಮಚಂದ್ರಪ್ಪ ಹೇಳಿದ ಉದಾಹರಣೆಯನ್ನು ವಿಧಾನಸಭೆಗೂ ವಿಸ್ತರಿಸಿ ಲೆಕ್ಕಾಚಾರ ಹಾಕಿದರೆ ಸಿದ್ದರಾಮಯ್ಯನವರು ಸದ್ಯಕ್ಕೆ ಯಾಕೆ ಈ ಚಳುವಳಿಗೆ ಬೆಂಬಲ ನೀಡುತ್ತಿಲ್ಲ ಎಂಬುದಕ್ಕೆ ನಿಜವಾದ ಉತ್ತರ ಸಿಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಇದ್ದಂತೆ ವಿಧಾನ ಸಭೆಯಲ್ಲಿ ಹಿಂದುಳಿದ ವರ್ಗಕ್ಕೆ ಕ್ಷೇತ್ರ ವಿಶೇಷ ಮೀಸಲಾತಿ ಇಲ್ಲ. ಒಂದೊಮ್ಮೆ ಕುರುಬ ಸಮುದಾಯವನ್ನು ಎಸ್ಟಿ ಪ್ರವರ್ಗಕ್ಕೆ ಈಗಲೇ ಸೇರಿಸಿದರೆ ಏನಾಗುತ್ತದೆ? ರಾಜಕೀಯ ಪಕ್ಷಗಳು ಕುರುಬ ಜನಾಂಗದ ಆಕಾಂಕ್ಷಿಗಳನ್ನು ಎಸ್ಟಿ ಕ್ಷೇತ್ರಗಳಲ್ಲಿ ಮಾತ್ರ ಕಣಕ್ಕೆ ಇಳಿಸಲು ತೊಡಗುತ್ತವೆ. ರಾಜ್ಯದಲ್ಲಿ ಎಸ್ಟಿ ಕ್ಷೇತ್ರಗಳು ತುಂಬಾ ಕಡಿಮೆ ಇರುವುದರಿಂದ ಕೊನೆಗೆ ವಿಧಾನ ಸಭೆಯಲ್ಲಿ ಕುರುಬ ಸಮುದಾಯದ ಎಮ್ಎಲ್ಎಗಳ ಸಂಖ್ಯೆ ಕಡಿಮೆ ಆಗಿ, ಶಾಸಕಾಂಗ ಪಕ್ಷದ ಮೇಲಿನ ಹಿಡಿತ ಹೋಗುವ ಸಾಧ್ಯತೆ ಇದೆ ಎಂಬುದನ್ನು ಸಿದ್ದರಾಮಯ್ಯ ಅವರು ಮನಗಂಡಿದ್ದಾರೆ. ಹಾಗಾಗಿಯೇ ಅವರು ಈ ಚಳುವಳಿಗೆ ಬೆಂಬಲ ಸೂಚಿಸುತ್ತಿಲ್ಲ.
ಕುರುಬ ಸಮಾಜಕ್ಕೆ ST ಮೀಸಲಾತಿ ಜಾರಿಗೆ ಆಗ್ರಹಿಸಿ.. ಧರಣಿಯಲ್ಲಿ ನಗಾರಿ ಬಾರಿಸಿದ K.R.ಪುರಂ ಇನ್ಸ್ಪೆಕ್ಟರ್!
Published On - 8:22 pm, Sat, 6 February 21