ಬೆಂಗಳೂರು: ಮಸ್ಕಿ ಕ್ಷೇತ್ರದ ಉಪಚುನಾವಣೆಗಿದ್ದ ತೊಡಕು ಇದೀಗ ನಿವಾರಣೆಯಾಗಿದೆ. ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಚುನಾವಣಾ ತಕರಾರು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಈ ಮೂಲಕ ಮಸ್ಕಿ ಕ್ಷೇತ್ರದ ಉಪಚುನಾವಣೆಗಿದ್ದ ಅಡ್ಡಿಯನ್ನು ದೂರಮಾಡಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ಬಸನಗೌಡ ತುರವಿಹಾಳ ಹೈಕೋರ್ಟ್ಗೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ಪರಾಜಿತ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲು ಮನವಿ ಮಾಡಿದ್ದರು.
ಆದರೆ, ಸೂಕ್ತ ದಾಖಲೆ ನೀಡದ್ದಕ್ಕೆ ಹೈಕೋರ್ಟ್ ಬಸನಗೌಡ ತುರವಿಹಾಳರ ಅರ್ಜಿ ವಜಾಗೊಳಿಸಿದೆ. ಅನರ್ಹಗೊಂಡ ಬಳಿಕ ಪ್ರತಾಪಗೌಡ ಪಾಟೀಲ್ರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ರಿಲೀಫ್ ನೀಡಿತ್ತು.
ಆದರೆ, ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಬಾಕಿಯಿದ್ದ ಹಿನ್ನೆಲೆಯಲ್ಲಿ ಈವರೆಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿರಲಿಲ್ಲ.