ಭಾರತೀಯ ಕ್ರಿಕೆಟರ್ಗಳಾದ ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ ಸಹೋದರರ ತಂದೆ ಹಿಮಾಂಶು ಪಾಂಡ್ಯ ಇಂದು (ಶನಿವಾರ) ಬೆಳಗ್ಗೆ ಮುಂಭೈನಲ್ಲಿ ವಿಧಿವಶರಾದರು. ಹೃದಯಾಘಾತಕ್ಕೊಳಗಾದ ಹಿಮಾಂಶುರನ್ನು ಕೂಡಲೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತಾದರೂ ಉಳಿಸಲಾಗಲಿಲ್ಲ ಎಂದು ಕುಟುಂಬದ ಮೂಲಗಳಿಂದ ಗೊತ್ತಾಗಿದೆ. ಅಸ್ಟ್ರೇಲಿಯಾದಲ್ಲಿ ಸೀಮಿತ ಓವರ್ಗಳ ಸರಣಿಯಲ್ಲಿ ಭಾಗವಹಿಸಿದ ನಂತರ ಸ್ವದೇಶಕ್ಕೆ ವಾಪಸ್ಸಾದ ಹಾರ್ದಿಕ್ ಘಟನೆ ಸಂಭವಿಸಿದಾಗ ತಂದೆಯೊಂದಿಗೆ ಮನೆಯಲ್ಲೇ ಇದ್ದರು.
ಬರೋಡ ಪರ ವಡೋದರದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆಡುತ್ತಿರುವ ಕೃಣಾಲ್ ವಿಷಯ ಗೊತ್ತಾಗುತ್ತಿದ್ದಂತೆ ಬಯೊ-ಬಬಲ್ನಿಂದ ಆಚೆ ಬಂದು ಮುಂಬೈಗೆ ತೆರಳಿದರೆಂದು ಬರೋಡ ಕ್ರಿಕೆಟ್ ಸಂಸ್ಥೆಯ ಸಿಇಒ ಶಿಶರ್ ಹಟ್ಟಂಗಡಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.
‘ಹೌದು ಕೃಣಾಲ್ ಬಯೊ-ಬಬಲ್ನಿಂದ ಹೊರನಡೆದಿದ್ದಾರೆ. ಅವರಿಗಿದು ವೈಯಕ್ತಿಕವಾಗಿ ದೊಡ್ಡ ದುರಂತ. ಕೃಣಾಲ್ ಮತ್ತು ಹಾರ್ದಿಕ್ ಅವರ ಈ ದುಃಖದ ಸಮಯದಲ್ಲಿ ಬರೋಡ ಕ್ರಿಕೆಟ್ ಸಂಸ್ಥೆ ಸಂತಾಪವನ್ನು ಸೂಚಿಸುತ್ತದೆ,’ ಎಂದು ಶಿಶಿರ್ ಹೇಳಿದ್ದಾರೆ.
ಟೀಮ್ ಇಂಡಿಯಾದ ನಾಯಕ ವಿರಾಟ್ಕೊಹ್ಲಿ, ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್, ಕೆ ಎಲ್ ರಾಹುಲ್, ಮಾಜಿ ಆಟಗಾರ ಯುವರಾಜ ಸಿಂಗ್ ಮೊದಲಾದವರು ಹಿಮಾಂಶು ಅವರ ಸಾವಿನ ಬಗ್ಗೆ ಶೋಕ ವ್ಯಕ್ತಪಡಿಸಿ ಪಾಂಡ್ಯ ಸಹೋದರರಿಗೆ ಸಂತಾಪ ಸೂಚಿಸಿದ್ದಾರೆ.
‘ಹಾರ್ದಿಕ್ ಪಾಂಡ್ಯಾ ಮತ್ತು ಕೃಣಾಲ್ ಪಾಂಡ್ಯ, ನಿಮ್ಮ ತಂದೆಯವರ ವಿಧಿವಶರಾಗಿದ್ದು ಕೇಳಿ ಬಹಳ ದುಃಖವಾಯಿತು. ನಿಮ್ಮಿಬ್ಬರ ಕುಟುಂಬ ಮತ್ತು ಸ್ನೇಹಿತ ವರ್ಗಕ್ಕೆ ನನ್ನ ಸಂತಾಪಗಳು, ಈ ಸಂಕಟದ ಸಮಯದಲ್ಲಿ ದೇವರು ನಿಮ್ಮೊಂದಿಗಿರಲೆಂದು ಪ್ರಾರ್ಥಿಸುತ್ತೇನೆ,’ ಎಂದು ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
‘ಹಾರ್ದಿಕ್ ಮತ್ತು ಕೃಣಾಲ್ ಅವರ ತಂದೆಯ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ, ಒಂದರೆಡು ಬಾರಿ ಅವರೊಂದಿಗೆ ಮಾತಾಡಿದ್ದೆ. ತುಂಬಾ ಜಾಲಿ ಸ್ವಭಾವದ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾತಿ ಸಿಗಲಿ, ನೀವಿಬ್ಬರು ಧೈರ್ಯ ತಂದುಕೊಳ್ಳಬೇಕು,’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
‘ಹಾರ್ದಿಕ್ ಪಾಂಡ್ಯಾ ಮತ್ತು ಕೃಣಾಲ್ ಪಾಂಡ್ಯ, ನಿಮ್ಮ ತಂದೆಯವರ ಸಾವಿನ ವಿಷಯ ಕೇಳಿ ಬಹಳ ದುಃಖವಾಯಿತು. ಅವರ ಅಕಾಲಿಕ ಮರಣದಿಂದ ಶೋಕ ಸಾಗರದಲ್ಲಿ ಮುಳುಗಿರುವ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೃದಯಾಂತರಾಳದ ಸಂತಾಪಗಳು. ನಿಮ್ಮ ಬಗ್ಗೆ ಕಾಳಜಿಯಿರಲಿ ಮತ್ತು ಧೈರ್ಯದಿಂದಿರಿ,’ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಮಾಜಿ ಆಟಗಾರ ಇರ್ಪಾನ್ ಪಠಾಣ್, ‘ಅಂಕಲ್ ಅವರನ್ನು ಮೋತಿಬಾಗ್ನಲ್ಲಿ ಭೇಟಿಯಾಗಿದ್ದು ಚೆನ್ನಾಗಿ ನೆನಪಿದೆ. ತಮ್ಮ ಮಕ್ಕಳು ಉತ್ತಮ ಕ್ರಿಕೆಟರ್ಗಳಾಗಬೇಕೆನ್ನುವ ಆಸೆ ಅವರಲ್ಲಿತ್ತು. ಪಾಂಡ್ಯ ಸಹೋದರರಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ಸಂತಾಪಗಳು,’ ಎಂದಿದ್ದಾರೆ.
‘ತಂದೆಯನ್ನು ಕಳೆದುಕೊಳ್ಳುವುದು ಬದುಕಿನ ಅತ್ಯಂತ ಕಠಿಣ ಸಮಯ, ಒಬ್ಬ ತಂದೆ ಮಕ್ಕಳಿಗೆ ಎಲ್ಲ ಸಂತೋಷಗಳನ್ನು ಒದಗಿಸುತ್ತಾ ಮಾರ್ಗದರ್ಶನ ನೀಡುತ್ತಾರೆ. ಹಿಮಾಂಶು ಪಾಂಡ್ಯ ಒಬ್ಬ ಅದ್ಭುತವಾದ ವ್ಯಕ್ತಿಯಾಗಿದ್ದರು. ಈ ದುಃಖದ ಸಮಯದಲ್ಲಿ ಹಾರ್ದಿಕ್ ಮತ್ತು ಕೃಣಾಲ್ಗೆ ಹೃದಯಾಂತರಾಳದ ಸಂತಾಪಗಳು. ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನಿಮಗೆ ಒದಗಿಸಲಿ, RIP Uncle,’ ಎಂದು ಕೆ ಎಲ್ ರಾಹುಲ್ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ಗೆ ಹಾರ್ದಿಕ್ ಪಾಂಡ್ಯರಂಥ ಸೂಪರ್ ಸ್ಟಾರ್ಗಳ ಅವಶ್ಯಕತೆಯಿದೆ: ಶೇನ್ ವಾರ್ನ್
Published On - 6:46 pm, Sat, 16 January 21