ಮುಂಬೈ: ಸ್ಟಾರ್ ಕುಡಿ ಅನನ್ಯಾ ಪಾಂಡೆ ಸದಾ ಟ್ರೋಲಿಗರಿಗೆ ಆಹಾರವಾಗುತ್ತಲೇ ಇರುತ್ತಾರೆ. ನಾನು ತುಂಬಾನೇ ಸ್ಟ್ರಗಲ್ ಮಾಡಿ ಚಿತ್ರರಂಗಕ್ಕೆ ಬಂದಿದ್ದೇನೆ ಎಂಬ ನಟಿಯ ಹೇಳಿಕೆಗೆ ಈ ಹಿಂದೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ, ಅನನ್ಯಾ ಬಟ್ಟೆ ವಿಚಾರದಲ್ಲಿ ಟ್ರೋಲ್ ಆಗ್ತಿದ್ದಾರೆ. ಆದರೆ, ಎಲ್ಲಾ ಟ್ರೋಲಿಗರಿಗೆ ಈಗ ಅನನ್ಯಾನೇ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
ಕರೀನಾ ಕಪೂರ್ ಖಾನ್ ಚ್ಯಾಟ್ ಶೋನಲ್ಲಿ ಮಾತನಾಡಿದ ಅನನ್ಯಾ ಪಾಂಡೆ, ಆರಂಭದಲ್ಲಿ ನಾನು ಎಲ್ಲರನ್ನೂ ಮೆಚ್ಚಿಸುವಂಥ ಬಟ್ಟೆ ಹಾಕುತ್ತಿದ್ದೆ. ಎಲ್ಲರನ್ನು ಖುಷಿ ಪಡಿಸೋದೇ ನನ್ನ ಉದ್ದೇಶವಾಗಿತ್ತು. ಆದರೆ, ಈಗ ನನಗೆ ಯಾವುದು ಖುಷಿ ನೀಡುತ್ತದೋ ಅಂಥ ಉಡುಪಗಳನ್ನು ಮಾತ್ರ ಧರಿಸುತ್ತೇನೆ ಎಂದರು.
ಟ್ರೋಲ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅನನ್ಯಾ ನಾನು ಯಾವ ರೀತಿಯ ಬಟ್ಟೆ ಧರಿಸಿದರೂ ಟೀಕೆಗೆ ಒಳಗಾಗುತ್ತೇನೆ ಎಂಬ ವಿಚಾರ ಗೊತ್ತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಬಟ್ಟೆಯ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಾರೆ. ಆದರೆ, ನನಗೆ ಆ ಬಗ್ಗೆ ಚಿಂತೆ ಇಲ್ಲ. ನಾನು ಎಲ್ಲಿಯವರೆಗೆ ಖುಷಿಯಾಗಿರುತ್ತೇನೋ ಅಲ್ಲಿಯವರೆಗೆ ಇನ್ಸ್ಟಾಗ್ರಾಂಗೆ ಫೋಟೋಗಳನ್ನು ಹಾಕುತ್ತಲೇ ಇರುತ್ತೇನೆ ಎಂದು ಹೇಳಿದರು. ಈ ಮೂಲಕ ಟ್ರೋಲ್ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದರು.
ಅನನ್ಯಾ ಪಾಂಡೆ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಫೋಟೋಗಳಿಗೆ ಅನೇಕರು ಕೆಟ್ಟದಾಗಿ ಕಮೆಂಟ್ ಹಾಕಿದ್ದರು. ಅವರು ತೊಡುವ ಉಡುಗೆ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದರು. ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ ಅನನ್ಯಾ ಪಾಂಡೆ, ಶಕುನ್ ಭತ್ರಾ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ, ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಚತುರ್ವೇದಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.