ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಕಹಳೆ ಚಿಹ್ನೆಯಿಂದ ಮಂಡ್ಯದಲ್ಲಿ ರಣ ಕಹಳೆ ಊದಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದರು. ಈ ಬಾರಿಯೂ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಮತ್ತೆ ಕಹಳೆ ಮೊಳಗಲಿದೆ. ಆದರೆ ಅದು ವಿಧಾನ ಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿಗೆ ದಕ್ಕಿದೆ. ಇದರಿಂದ ಮತದಾರರು ಯಾರಿಗಪ್ಪಾ ವೋಟ್ ಹಾಕುವುದು ಅಂತ ಯೋಚನೆಯಲ್ಲಿ ತೊಡಗಿದ್ದಾರೆ.
ಕೆ.ಆರ್.ಪೇಟೆ ಉಪ ಚುನಾವಣೆ ಹಿನ್ನಲೆ ಪಕ್ಷೇತರ ಅಭ್ಯರ್ಥಿ ಸರ್ವೇ ದೇವೇಗೌಡಗೆ ಚುನಾವಣಾ ಆಯೋಗ ಕಹಳೆ ಗುರುತು ನೀಡಿದೆ. ಹಾಗಾಗಿ ಅಭ್ಯರ್ಥಿ ಸರ್ವೇ ದೇವೇಗೌಡ ಪ್ರಚಾರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಅವರ ಭಾವ ಚಿತ್ರಗಳನ್ನ ಹಾಕಿಕೊಂಡು ಪ್ರಚಾರ ಮಾಡ್ತಿದ್ದಾರೆ. ಜೊತೆಗೆ ಅಂದು ಮಂಡ್ಯ ಜಿಲ್ಲೆಯ ಸ್ವಾಭಿಮಾನ. ಇಂದು ಕೆ ಆರ್ ಪೇಟೆ ತಾಲೂಕಿನ ಸ್ವಾಭಿಮಾನ ಎಂಬ ಧ್ಯೇಯವಾಕ್ಯದೊಂದಿಗೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದ ಬಿಜೆಪಿಯ ಅಭ್ಯರ್ಥಿ ನಾರಾಯಣ ಗೌಡ ಸ್ವಲ್ಪ ಗಲಿಬಿಲಿಗೊಂಡಿದ್ದಾರೆ.