ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಅಲೆನ್ ಟ್ರೋಫಿಯ ಮೂರನೇ ಟೆಸ್ಟ್ ಸಿಡ್ನಿಯಲ್ಲಿ ನಡೆಯುತ್ತಿದೆ. ನಾಲ್ಕನೇ ದಿನ ಆಸ್ಟ್ರೇಲಿಯಾ 312 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿ ಭಾರತಕ್ಕೆ 407 ರನ್‌ಗಳ ಗುರಿ ನೀಡಿತು.
ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಗಿದೆ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ ಹಾಗೂ ಶುಬ್ಮನ್ ಗಿಲ್ ಉತ್ತಮ ಅಡಿಪಾಯ ಹಾಕಿದರು. ರೋಹಿತ್ ಜೊತೆಗೂಡಿ ತಂಡಕ್ಕೆ ಅಗತ್ಯದ ರನ್ ಕಲೆ ಹಾಕಿದ ಗಿಲ್ 36 ರನ್ ಗಳಿಸಿದ್ದಾಗ ಹ್ಯಾಝಲ್ವುಡ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಚೇತೇಶ್ವರ್ ಪೂಜಾರ, ರೋಹಿತ್ಗೆ ಉತ್ತಮ ಸಾಥ್ ನೀಡಿದರು. ಹೀಗಾಗಿ ಅವಶ್ಯಕ ಅರ್ಧ ಶತಕ ಬಾರಿಸಿದ ರೋಹಿತ್ ತಾಳ್ಮೆಯ ಆಟಕ್ಕೆ ಮುಂದಾಗದೆ ಪ್ಯಾಟ್ ಕಮಿನ್ಸ್ಗೆ ತಮ್ಮ ವಿಕೆಟ್ ಒಪ್ಪಿಸಿದರು. ರೋಹಿತ್ ಔಟಾದ ನಂತರ ಪೂಜಾರ ಜೊತೆಗೂಡಿರುವ ನಾಯಕ ರಹಾನೆ ಮೇಲೆ ಟೀಂ ಇಂಡಿಯಾದ ಗೆಲುವು ನಿಂತಿದೆ. ಈಗಾಗಲೇ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಬೇಕಾದ ಜವಾಬ್ದಾರಿ ಈಗ ನಾಯಕ ರಹಾನೆ ಮೇಲೆ ನಿಂತಿದೆ.
ನಾಳಿನ ಹಾಗೂ ಅಂತಿಮ ದಿನದ ಆಟಕ್ಕೆ ರಹಾನೆ ಹಾಗೂ ಪೂಜಾರ ಬ್ಯಾಟಿಂಗ್ ಉಳಿಸಿಕೊಂಡಿದ್ದು, ಗೆಲ್ಲಲು ಭಾರತಕ್ಕೆ ಕೊನೆಯ ದಿನ 309 ರನ್‌ಗಳ ಅಗತ್ಯವಿದ್ದರೆ, ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ಗಳ ಅಗತ್ಯವಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಸರಣಿಯಲ್ಲಿ ಮುನ್ನಡೆ ಸಾಧಿಸುತ್ತದೆ.
Published On - 1:27 pm, Sun, 10 January 21