ಭಾರತದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ತಾಯಿ ಕೊರೊನಾಗೆ ಬಲಿ, ಅಂತ್ಯಕ್ರಿಯೆಯಲ್ಲಿ ಆಕೆ ಭಾಗಿಯಾಗಲಿಲ್ಲ

|

Updated on: Apr 24, 2021 | 9:44 PM

ವೇದಾರ ಕುಟುಂಬಕ್ಕೆ ಬೆಂಗಳೂರಿನಲ್ಲೇ ಸೋಂಕು ತಗುಲಿದ್ದು, ಅದು ಗೊತ್ತಾದ ನಂತರ ಅವರೆಲ್ಲ ತಮ್ಮ ಸ್ವಂತ ಊರಾದ ಕಡೂರಿಗೆ ವಾಪಸ್ಸಾಗಿದ್ದರು. ಆದರೆ ಹೋಂ ಐಸೋಲೇಶನಲ್ಲಿದ್ದಾಗ ಉಸಿರಾಟದ ತೊಂದರೆ ಹೆಚ್ಚಾಗಿ ಎಲ್ಲರೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಭಾರತದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ತಾಯಿ ಕೊರೊನಾಗೆ ಬಲಿ, ಅಂತ್ಯಕ್ರಿಯೆಯಲ್ಲಿ ಆಕೆ ಭಾಗಿಯಾಗಲಿಲ್ಲ
ತಂದೆ-ತಾಯಿಯೊಂದಿಗೆ ವೇದಾ ಕೃಷ್ಣಮೂರ್ತಿ
Follow us on

ಚಿಕ್ಕಮಗಳೂರು: ಭಾರತದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ತಾಯಿ 63 ವರ್ಷದ ಚೆಲುವಾಂಬ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ತಗುಲಿದ ಅವರನ್ನು ಜಿಲ್ಲೆಯ ಕಡೂರು ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲನೀಡದೆ ಅವರು ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದರು. ಚೆಲುವಾಂಬ ಅವರನ್ನು ಕಳೆದುಕೊಂಡು ದುಖಃ ಸಾಗರದಲ್ಲಿ ಮುಳುಗಿರುವ ವೇದಾ ಅವರ ಕುಟುಂಬದೆದಿರು ಮತ್ತಷ್ಟು ಚಿಂತಾಜನಕ ಸಂಗತಿಗಳಿವೆ. ವೇದಾರ ತಂದೆ ಕೃಷ್ಣಮೂರ್ತಿ, ಅಣ್ಣ-ಅತ್ತಿಗೆ, ಅಕ್ಕನಿಗೂ ಕೊರೊನಾ ಸೋಂಕು ತಗುಲಿದೆ. ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಕಡೂರಿನ ವೇದಾ ಕೃಷ್ಣಮೂರ್ತಿ ತೋಟದಲ್ಲೇ ಚೆಲುವಾಂಬರ ಅಂತ್ಯಕ್ರಿಯೆಯನ್ನ ಆರೋಗ್ಯ ಇಲಾಖೆ ನೆರವೇರಿಸಿತು.

ವೇದಾರ ಕುಟುಂಬಕ್ಕೆ ಬೆಂಗಳೂರಿನಲ್ಲೇ ಸೋಂಕು ತಗುಲಿದ್ದು, ಅದು ಗೊತ್ತಾದ ನಂತರ ಅವರೆಲ್ಲ ತಮ್ಮ ಸ್ವಂತ ಊರಾದ ಕಡೂರಿಗೆ ವಾಪಸ್ಸಾಗಿದ್ದರು. ಆದರೆ ಹೋಂ ಐಸೋಲೇಶನಲ್ಲಿದ್ದಾಗ ಉಸಿರಾಟದ ತೊಂದರೆ ಹೆಚ್ಚಾಗಿ ಎಲ್ಲರೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗದೇ ಕಣ್ಣೀರಿಟ್ಟ ವೇದಾ

ವೇದಾ ಕೃಷ್ಣಮೂರ್ತಿ ಬೆಂಗಳೂರಿನಲ್ಲಿದ್ದರೂ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲು ಸಾಧ್ಯವಾಗಿಲ್ಲ. ಕುಟುಂಬದ ಸದಸ್ಯರಿಗೂ ಸೋಂಕು ತಗುಲಿರುವುದರಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದು ಅವರಿಗೆ ಸಾಧ್ಯವಾಗಿಲ್ಲ. ಕೊರೊನಾ ಸೋಂಕಿನಿಂದ ಪೀಡಿತರಾಗಿರುವ ವೇದಾ ತಂದೆ ಕೃಷ್ಣಮೂರ್ತಿ ಸೇರಿದಂತೆ ಎಲ್ಲರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇಡೀ ಕುಟುಂಬ ಕೊರೊನಾ ಸೋಂಕಿನಿಂದ ನರಳುತ್ತಿರುವುದು ವೇದಾರನ್ನು ಮತ್ತಷ್ಟು ಕಂಗಲಾಗುವಂತೆ ಮಾಡಿದೆ. ವೇದಾ ಅವರಿಗೆ ಕೊರೊನಾ ಸೋಂಕು ತಗುಲಿದೆಯೇ ಅನ್ನೋದು ಇನ್ನೂ ಖಚಿತಪಟ್ಟಿಲ್ಲ. ಅವರು ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ ದೃಷ್ಟಿಯಿಂದ ನೋಡಿದರೆ, ವೇದಾರಿಗೂ ಆರೋಗ್ಯ ಸರಿ ಇಲ್ಲವೇನೋ ಎಂಬ ಅನುಮಾನ ಮೂಡುತ್ತದೆ.

ಸ್ವಲ್ಪ ಎಚ್ಚರ ತಪ್ಪಿದ್ರೂ ಕೊರೊನಾ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ ಅನ್ನೋದು ಪದೇ ಪದೇ ಸಾಬೀತಾಗುತ್ತಲೇ ಇದೆ. ಆರ್ಥಿಕವಾಗಿ ವೇದಾರ ಕುಟುಂಬ ಸದೃಡವಾಗಿದ್ರೂ ತನ್ನ ತಾಯಿಯನ್ನ ಉಳಿಸಿಕೊಳ್ಳಲಾಗದ ದುಸ್ಥಿತಿ ಎದುರಾಯಿತು. ಕೊರೊನಾನ ಸೋಂಕು ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿ ಜನರ ಪ್ರಾಣ ತೆಗೆದುಕೊಳ್ಳುತ್ತಿದ್ದರೂ, ಜನರಲ್ಲಿ ನಿರ್ಲಕ್ಷ್ಯ ಸ್ವಭಾವ ಕಡಿಮೆಯಾಗಿಲ್ಲ. ಕೊರೊನಾ ಸೋಂಕು ತಗುಲಿದ ನಂತರ ಬಹಳ ಪರದಾಡಬೇಕಾಗುತ್ತದೆ. ಅನಾಹುತ ಆಗುವ ಮೊದಲೇ ಎಚ್ಚರವಹಿಸಿದರೆ ಅಮೂಲ್ಯ ಜೀವವನ್ನು ಉಳಿಸಿಕೊಳ್ಳಬಹುದು.

ವರದಿ: ಪ್ರಶಾಂತ್ ಟಿವಿ9 ಚಿಕ್ಕಮಗಳೂರು

ಇದನ್ನೂ ಓದಿ: Coronavirus Case Updates: ದೇಶದಲ್ಲಿ 24 ಗಂಟೆಯಲ್ಲಿ 2,624 ಮಂದಿ ಕೊರೊನಾದಿಂದ ಸಾವು; 3.46 ಲಕ್ಷ ಹೊಸ ಕೇಸ್​​ಗಳು