ಡಬ್ಲ್ಯೂಟಿಸಿ | ಪಿಚ್​ ಸ್ವರೂಪ ಹೇಗಾದರಿರಲಿ, ಗೆಲ್ಲೋದು ಮಾತ್ರ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ: ವೆಂಕಟೇಶ್ ಪ್ರಸಾದ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 14, 2021 | 7:38 PM

ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ವೇಗದ ಬೌಲರ್​ಗಳು, ಎದುರಾಳಿ ಬ್ಯಾಟ್ಸ್​ಮನ್​ಗಳ ಮೇಲೆ ಹೇರುವ ಒತ್ತಡವನ್ನು ಕಾಯ್ದುಕೊಳ್ಳಲು ಭಾರತದ ಟೀಮಿನಲ್ಲಿ ಮೂರನೇ ಮತ್ತು ನಾಲ್ಕನೇ ಸೀಮರ್​ಗಳಿದ್ದಾರೆ ಎಂದು ವೆಂಕಟೇಶ್ ಪ್ರಸಾದ್​ ಹೇಳಿದ್ದಾರೆ.

ಡಬ್ಲ್ಯೂಟಿಸಿ | ಪಿಚ್​ ಸ್ವರೂಪ ಹೇಗಾದರಿರಲಿ, ಗೆಲ್ಲೋದು ಮಾತ್ರ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ: ವೆಂಕಟೇಶ್ ಪ್ರಸಾದ್
ವೆಂಕಟೇಶ್ ಪ್ರಸಾದ್​
Follow us on

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸೌತಾಂಪ್ಟನ್​ನ ಏಜಿಸ್ ಬೋಲ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ (ಡಬ್ಲ್ಯೂಟಿಸಿ) ಪಂದ್ಯಕ್ಕೆ ಕೇವಲ ನಾಲ್ಕು ದಿನ ಮಾತ್ರ ಉಳಿದಿದೆ. ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ತನ್ನ ಸದಸ್ಯರದ್ದೇ ಎರಡು ಟೀಮಗಳನ್ನು ಮಾಡಿಕೊಂಡು ಇಂಗ್ಲೆಂಡ್​ನ ಮೈದಾನಗಳಲ್ಲಿ ಅಭ್ಯಾಸನಿರತವಾಗಿದ್ದರೆ, ಎಜ್​ಬ್ಯಾಸ್ಟನ್​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಎರಡನೇ ಟೆಸ್ಟ್​ನಲ್ಲಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್​ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಆದರೆ, ಈ ಗೆಲುವಿನ ಹೊರತಾಗಿಯೂ ಶುಕ್ರವಾರದಿಂದ ಆರಂಭವಾಗಲಿರುವ ಡಬ್ಲ್ಯೂಟಿಸಿ ಪಂದ್ಯದಲ್ಲಿ ಭಾರತವೇ ನೆಚ್ಚಿನ ತಂಡವಾಗಿ ಮೈದಾನಕ್ಕಿಳಿಯಲಿದೆ ಎಂದು ಭಾರತದ ಮಾಜಿ ವೇಗದ ಬೌಲರ್ ಮತ್ತು ಟೀಮ್​ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್​ ಹೇಳಿದ್ದಾರೆ. ಭಾರತೀಯ ತಂಡದಲ್ಲಿ ದುರ್ಬಲ ಅಂಶ ಯಾವುದೂ ಇಲ್ಲ, ಆದು ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಚೊಚ್ಚಲು ಡಬ್ಲ್ಯೂಟಿಸಿ ಕಿರೀಟವನ್ನು ಧರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದ್ದಾರೆ.

ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ವೇಗದ ಬೌಲರ್​ಗಳು, ಎದುರಾಳಿ ಬ್ಯಾಟ್ಸ್​ಮನ್​ಗಳ ಮೇಲೆ ಹೇರುವ ಒತ್ತಡವನ್ನು ಕಾಯ್ದುಕೊಳ್ಳಲು ಭಾರತದ ಟೀಮಿನಲ್ಲಿ ಮೂರನೇ ಮತ್ತು ನಾಲ್ಕನೇ ಸೀಮರ್​ಗಳಿದ್ದಾರೆ, ಹಾಗೆಯೇ ಪಿಚ್ ಸ್ವರೂಪ ಹೇಗಿದ್ದರೂ 350 ರನ್ ಮೊತ್ತವನ್ನು ಕಲೆಹಾಕುವ ಸಾಮರ್ಥ್ಯ ಬ್ಯಾಟ್ಸ್​ಮನ್​ಗಳಲ್ಲಿದೆ ಎಂದು ಸೋಮವಾರದಂದು ನವದೆಹಲಿಯಲ್ಲಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತಾಡಿದ ಪ್ರಸಾದ್ ಹೇಳಿದ್ದಾರೆ.

‘ವಿಶ್ವದ ಎರಡು ಅತ್ಯುತ್ತಮ ತಂಡಗಳು ಡಬ್ಲ್ಯೂಟಿಸಿಯಲ್ಲಿ ಸೆಣಸಲಿವೆ. ಟೀಮ್ ಇಂಡಿಯಾದ ಮೀಸಲು ಆಟಗಾರರ ಪಡೆಯಲ್ಲೂ ಭಾರೀ ಪ್ರತಿಭಾನ್ವಿತ ಆಟಗಾರರಿರುವುದರಿಂದ ಆಯ್ಕೆಗೆ ಅದಕ್ಕೆ ಬಹಳಷ್ಟು ಅವಕಾಶಗಳಿವೆ. ಪಿಚ್​ ಬ್ಯಾಟ್ಸ್​ಮನ್​ಗಳ ಸ್ವರ್ಗವಾಗಿರಲಿ ಅಥವಾ ಸೀಮರ್​ಗಳಿಗೆ ನೆರವು ನೀಡಲಿ, ಭಾರತ ನಿಸ್ಸಂದೇಹವಾಗಿ ಮೇಲುಗೈ ಸಾಧಿಸಲಿದೆ. 90 ರ ದಶಕದ ಆರಂಭಿಕ ವರ್ಷಗಳಿಂದ ಹಿಡಿದು ಹೊಸ ಸಂವತ್ಸರದ ಕೆಲ ವರ್ಷಗಳವರೆಗೆ ಭಾರತ ಕೇವಲ ಇಬ್ಬರು ಸೀಮರ್​ಗಳೊಂದಿಗೆ ಟೆಸ್ಟ್​ಗಳನ್ನಾಡುತಿತ್ತು. ಭಾರತ ತಂಡದಲ್ಲಿ ಇಬ್ಬರು ಉತ್ತಮ ಸೀಮರ್​ಗಳಿರುತ್ತಿದ್ದರಾದರೂ ಅವರಿಗೆ ಮೂರನೇ ಅಥವಾ ನಾಲ್ಕನೇ ಸೀಮರ್​​ನ ಬೆಂಲಲ ಇರುತ್ತಿರಲಿಲ್ಲ,’ ಎಂದು ಪ್ರಸಾದ್​ ಹೇಳಿದ್ದಾರೆ.

‘ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ, ನಾಲ್ಕು ವೇಗದ ಬೌಲರ್​ಗಳೊಂದಿಗೆ ಒಂದಿಬ್ಬರು ಅತ್ಯುತ್ತಮ ಆಲ್​ರೌಂಡರ್​ಗಳು ಟೀಮಲ್ಲಿದ್ದಾರೆ. ಭಾರತಕ್ಕೆ ನಿರಂತರವಾಗಿ ವಿಶ್ವ ದರ್ಜೆಯ ಸ್ಪಿನ್ನರ್​ಗಳ ಸೇವೆ ಲಭ್ಯವಿದೆ, ಆದರೀಗ ಭಾರತದ ವೇಗದ ದಾಳಿಯೂ ವಿಶ್ವದರ್ಜೆಯದ್ದಾಗಿದೆ,’ ಎಂದು ಪ್ರಸಾದ್​ ಹೇಳಿದ್ದಾರೆ.

‘ಬೌಲರ್​ಗಳಿಗೆ ನೆರವಾಗುವ ಪಿಚ್​ನಲ್ಲೂ 350 ರನ್​ಗಳ ಮೊತ್ತ ಪೇರಿಸುವ ಬ್ಯಾಟ್ಸ್​ಮನ್​ಗಳು ತಂಡದಲ್ಲಿದ್ದಾರೆ. ನಾನು ಹೇಳಬಯಸುವದೇನೆಂದರೆ, ಟೀಮ್ ಇಂಡಿಯಾದಲ್ಲಿ ವೀಕ್ ಪಾಯಿಂಟ್​ ಯಾವುದೂ ಇಲ್ಲ. ಹಾಗಾಗಿ ಪಿಚ್ ಸ್ವರೂಪ ಏನೇ ಆಗಿದ್ದರೂ ಭಾರತ ನಿಸ್ಸಂಶಯವಾಗಿ ಡಬ್ಲ್ಯೂಟಿಸಿ ಗೆಲ್ಲಲಿದೆ,’ ಎಂದು ಕನ್ನಡಿಗ ಪ್ರಸಾದ್ ಹೇಳಿದ್ದಾರೆ.

ತಾವಾಡುವ ದಿನಗಳಲ್ಲಿ ಕರ್ನಾಟಕದವರೇ ಅಗಿರುವ ಜಾವಗಲ್ ಶ್ರೀನಾಥ್​ ಅವರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತೀಯ ವೇಗದ ದಾಳಿಯ ಜೊತೆಗಾರರಾಗಿದ್ದ ಪ್ರಸಾದ್, ಪಂದ್ಯ ಆರಂಭವಾಗುವ ಕ್ಷಣದಿಂದಲೇ ಟೀಮ್ ಇಂಡಿಯಾ ಡಾನಿನೇಟ್ ಮಾಡಬೇಕು ಅಂತ ಹೇಳುತ್ತಾರೆ. ಎದುರಾಳಿ ತಂಡದ ಬಲದ ಕಡೆ ಗಮನ ನೀಡುವ ಅವಶ್ಯಕತೆ ಭಾರತೀಯ ತಂಡಕ್ಕಿಲ್ಲ ಅಂತ ಅವರು ಹೇಳುತ್ತಾರೆ.

‘ಈ ಪಂದ್ಯ ಐದನೇ ದಿನಕ್ಕೆ ಹೋಗಬೇಕೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇನೆ. ಭಾರತದಲ್ಲಿ ನಡೆದ ಸರಣಿಯಲ್ಲಿ ಪಂದ್ಯಗಳು ಮೂರ್ನಾಲ್ಕು ದಿನಗಳಲ್ಲೇ ಮುಗಿದು ಹೋಗುತ್ತಿದ್ದವು. ಆದರೆ ಇಂಗ್ಲಿಷ್ ಕಂಡೀಷನ್​ಗಳಲ್ಲಿ ಪಂದ್ಯಗಳು ಸಾಮಾನ್ಯವಾಗಿ ಐದನೆಯ ದಿನ ಫಲಿತಾಂಶ ಕಾಣುತ್ತವೆ. ಡ್ಯೂಕ್ಸ್ ಚೆಂಡುಗಳು ಬೌಲರ್​ಗಳಿಗೆ ನೆರವು ನೀಡಲಿವೆ. ಬ್ಯಾಟ್ಸ್​ಮನ್​ಗಳು ಆದಷ್ಟು ಬೇಗ ಕಂಡೀಷನ್​ಗಳಿಗೆ ಹೊಂದಿಕೊಳ್ಳಬೇಕು ಮತ್ತು ಬೌಲರ್​ಗಳೂ ಯಾವ ತೆಗೆದುಕೊಳ್ಳಬಾರದು,’ ಎಂದು ಭಾರತದ ಪರ 33 ಟೆಸ್ಟ್​ಗಳನ್ನಾಡಿ 96 ಮತ್ತು 161 ಒಡಿಐಗಳಲ್ಲಾಡಿ 196 ವಿಕೆಟ್ ಪಡೆದ ಪ್ರಸಾದ್​ ಹೇಳಿದ್ದಾರೆ.

ಇದನ್ನೂ ಓದಿ: WTC Final: ಕೊಹ್ಲಿ ಹುಡುಗರ ನಡುವೆ ಅಭ್ಯಾಸ ಪಂದ್ಯ; ಶತಕ ಸಿಡಿಸಿದ ಪಂತ್, ಗಿಲ್ ಅರ್ಧ ಶತಕ.. ಬೌಲಿಂಗ್​ನಲ್ಲಿ ಮಿಂಚಿದ ಇಶಾಂತ್