ಕೊರೊನಾ ಇಡೀ ಜಗತ್ತಿನ ಶೈಕ್ಷಣಿಕ ವ್ಯವಸ್ಥೆ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ. ಈಗಾಗಲೇ ಖಾಸಗಿ ಶಾಲೆಗಳು ಆನಲೈನ್ ತರಗತಿಗಳನ್ನು ಪ್ರಾರಂಭ ಮಾಡಿವೆ. ಆದ್ರೆ ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯ ಮಾತ್ರ ಡೋಲಾಯಮಾನವಾಗಿದೆ. ಗ್ರಾಮೀಣ ಮಟ್ಟದಲ್ಲಿ ಆನಲೈನ್ ತರಗತಿ ನಡೆಸೋಕೆ ಆಗಲ್ಲಾ. ಮಕ್ಕಳನ್ನು ಶಾಲೆಗೆ ಕಳುಹಿಸಲಿಕ್ಕೆ ತೊಂದರೆ ಪಡುವ ಪಾಲಕರಿಗೆ ಸ್ಮಾರ್ಟ್ ಮೊಬೈಲ್, ಡಾಟಾ ಹಾಕಿಸುವದು ದುಸ್ತರವೇ ಸರಿ.
ಆದ್ರೆ ಇಲ್ಲೊಂದು ಶಾಲೆಯಿಂದ. ಈ ಶಾಲೆಯ ಶಿಕ್ಷಕರು ತಮ್ಮ ಕೆಲಸದಿಂದ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ವಠಾರ ಶಾಲೆಯ ಮೂಲಕ ಮಕ್ಕಳಿಗೆ ಪಾಠ ಮಾಡುವ ಮೂಲಕ ವಿನೂತನ ಕಾರ್ಯಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರು ಮುಂದಾಗಿದ್ದಾರೆ. ಸ್ವತಃ ಆ ಶಿಕ್ಷಕರ ವಿನೂತನ ಕೆಲಸಕ್ಕೆ ಶಿಕ್ಷಣ ಸಚಿವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವಠಾರ ಶಾಲೆ..
ಹೀಗೆ ವಿನೂತನವಾಗಿ ಪಾಠ ಮಾಡ್ತಿರೋದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಅನ್ನೋ ಗ್ರಾಮದಲ್ಲಿ. ಹೌದು ಓಕಳಿ ಗ್ರಾಮದಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಸರ್ಕಾರಿ ಶಾಲೆಯಿದೆ. ಶಾಲೆಯಲ್ಲಿ 235 ಮಕ್ಕಳ ಹಾಜರಾತಿಯಿದೆ. ಇನ್ನು ಓಕಳಿ ಗ್ರಾಮದಲ್ಲಿ 4,500 ಜನಸಂಖ್ಯೆಯಿದ್ದು, ಬಹುತೇಕ ಜನರು ಕೃಷಿಯನ್ನೆ ಮಾಡ್ತಾರೆ.
ಬಹುತೇಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಓದುತ್ತಾರೆ. ಆದ್ರೆ ಕೊರೊನಾ ಬಂದ ಮೇಲೆ ಕಳೆದ ಮೂರ್ನಾಲ್ಕು ತಿಂಗಳಿಂದ ಶಾಲೆ ಬಂದ್ ಆಗಿದೆ. ಇದೀಗ ಖಾಸಗಿ ಶಾಲೆಗಳು ಆನಲೈನ್ ತರಗತಿಗಳನ್ನು ಪ್ರಾರಂಭಿಸಿವೆ. ಆದ್ರೆ ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಕೂಡಾ ಮಕ್ಕಳಿಗೆ ಇಲ್ಲಿವರಗೆ ಪಾಠ ಪ್ರಾರಂಭವಾಗಿಲ್ಲಾ. ಆದ್ರೆ ಓಕಳಿ ಗ್ರಾಮದ ಶಾಲೆಯ ಮಕ್ಕಳಿಗೆ ಮಾತ್ರ ಕಳೆದ ಒಂದು ತಿಂಗಳಿಂದ ಶಿಕ್ಷಕರು ಪಾಠ ಮಾಡ್ತಿದ್ದಾರೆ.
ಬಹುತೇಕರದು ಕೃಷಿ ಜೀವನ, ಸ್ಮಾರ್ಟ್ ಪೋನ್ ಎಲ್ಲಿಂದ ಬರಬೇಕು?
ಶಾಲೆಯ 8 ಶಿಕ್ಷಕರು ತೆಗೆದುಕೊಂಡರು ಆ ಮಹತ್ವದ ನಿರ್ಧಾರ
ನಂತರ ಮಕ್ಕಳನ್ನು ಶಾಲೆಗೆ ಕರೆಸುವ ಬದಲಾಗಿ ಮಕ್ಕಳಿದ್ದಲ್ಲಿಯೇ ಹೋಗಿ ನಾವು ಪಾಠ ಮಾಡೋಣಾ ಅಂತ ನಿರ್ಧಾರ ಮಾಡಿದ್ರು. ಅದರಂತೆ ಗ್ರಾಮದಲ್ಲಿ ಎಂಟು ಕಡೆ ಜಾಗವನ್ನು ಗುರುತಿಸಿದ್ರು. ಕೆಲವರ ಮನೆ ಮುಂದಿರುವ ಜಾಗ, ಸಮುದಾಯ ಭವನ, ದೇವಸ್ಥಾನದ ಆವರಣಗಳನ್ನು ಗುರುತಿಸಿದ್ರು. ಆ ಜಾಗದ ಸಮೀಪವಿರುವ ಮಕ್ಕಳನ್ನು ಶಾಲೆಗೆ ಬರಲು ಹೇಳಿದ್ರು. ಬರದೇ ಇದ್ದ ಕಡೆ ತಾವೇ ಮಕ್ಕಳ ಮನೆಗೆ ಹೋಗಿ, ಪಾಲಕರಿಗೆ ತಾವು ಯಾವ ರೀತಿ ಪಾಠ ಮಾಡ್ತಿದ್ದೇವೆ ಅನ್ನೋದನ್ನು ಹೇಳಿ ಮಕ್ಕಳನ್ನು ಕಲಿಕಾ ಕೇಂದ್ರಗಳ ಸ್ಥಾನಕ್ಕೆ ಕರೆತಂದರು. ಅಲ್ಲಿ ದೈಹಿಕ ಅಂತರವನ್ನು ಕಾಪಾಡಿ ಮಕ್ಕಳನ್ನು ಕೂಡಿಸಿ ಪಾಠ ಪ್ರಾರಂಭಿಸಿದರು.
ಕೊರೊನಾ ಜಾಗೃತಿಯೂ ನಡೆದಿದೆ!
ಯಾವ ಮಕ್ಕಳು ಯಾವುದರಲ್ಲಿ ವೀಕ್ ಇದ್ದಾರೋ ಅವರಿಗೆ ಅದನ್ನು ಹೇಳಿಕೊಡುವ ಕೆಲಸವನ್ನು ಮಾಡ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಕೇವಲ ಆಟ ಆಡಿಕೊಂಡು ಇದ್ದ ಮಕ್ಕಳು ಇದೀಗ ಕಲಿಕಾ ಕೇಂದ್ರಕ್ಕೆ ಬರ್ತಿವೆ.
ಆನಲೈನ್ ತರಗತಿಗಳಿಗೆ ಸೆಡ್ಡು ಹೊಡೆದ ಶಿಕ್ಷಕರು ಇದೀಗ ಗ್ರಾಮದಲ್ಲಿ ಎಂಟು ಕಡೆ ಕಲಿಕಾ ಕೇಂದ್ರಗಳನ್ನು ಮಾಡಿ, ಒಂದೊಂದು ಕಡೆ 15-20 ಮಕ್ಕಳನ್ನು ಸೇರಿಸಿ ಅವರಿಗೆ ಪಾಠ ಹೇಳುವ ಮೂಲಕ ಖಾಸಗಿ ಶಾಲೆಗಳಿಗೆ ಕೂಡಾ ಮಾದರಿಯಾಗಿದ್ದಾರೆ.
ಇನ್ನು ಕೊರೊನಾ ಸೋಂಕಿನ ಭೀತಿ ಜಿಲ್ಲೆಯಲ್ಲಿ ಹೆಚ್ಚಾಗಿರುವುದರಿಂದ ಕೊರೊನಾದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡಾ ಮಾಡಿದ್ದಾರೆ. ಮಕ್ಕಳಿಗೆ ಜಾಗೃತಿ ಬಂದ್ರೆ ಅವರು ಮನೆಯಲ್ಲಿನ ಎಲ್ಲರಿಗೂ ಕೂಡಾ ಜಾಗೃತಿ ಮೂಡಿಸುತ್ತಾರೆ. ಹೀಗಾಗಿ ಮಕ್ಕಳಿಗೆ ಮೊದಲು ಕೊರೊನಾದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡಾ ಕಲಿಕಾ ಕೇಂದ್ರದ ಮೂಲಕ ಮಾಡ್ತಿದ್ದಾರೆ. ಇನ್ನು ಶಿಕ್ಷಕರ ಕೆಲಸಕ್ಕೆ ಗ್ರಾಮದ ಜನರು ಕೂಡಾ ಬೆಂಬಲವಾಗಿ ನಿಂತಿದ್ದಾರೆ. ಶಿಕ್ಷಕರು ಕೈಗೊಳ್ಳುವ ಪ್ರತಿ ನಿರ್ಧಾರಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ.
ಶಿಕ್ಷಣ ಸಚಿವ ಸುರೇಶಕುಮಾರ್ ಕೂಡಾ ಮುಖ್ಯೋಪಾಧ್ಯಾಯರಿಗೆ ಕರೆ ಮಾಡಿದ್ದಾರೆ!
-ಸಂಜಯ್
Published On - 4:05 pm, Thu, 6 August 20