ಕಲಬುರಗಿ: ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ 14 ವರ್ಷ ಶಿಕ್ಷೆ ಅನುಭವಿಸಿ ಸನ್ನಡತೆಯಿಂದ ಹೊರಬಂದಿದ್ದ ವ್ಯಕ್ತಿ ಈಗ ಡಾಕ್ಟರ್ ಆಗಿದ್ದಾರೆ. ಅಫಜಲಪುರ ತಾಲೂಕಿನ ಬೋಸಗಾ ಗ್ರಾಮದ ಸುಭಾಷ್ ಪಾಟೀಲ್, ಜೈಲಿನಿಂದ ಹೊರಬಂದ ನಂತರ ತಾನು ಅರ್ಧಕ್ಕೆ ನಿಲ್ಲಿಸಿದ್ದ ಎಂಬಿಬಿಎಸ್ನಲ್ಲಿ ಪದವಿ ಪೂರೈಸಿ ಅಂದು ಕಂಡಿದ್ದ ಕನಸನ್ನು ಇದೀಗ ನನಸು ಮಾಡಿಕೊಂಡಿದ್ದಾರೆ.
2002ರಲ್ಲಿ ಕೊಲೆ ಪ್ರಕರಣದಲ್ಲಿ ಸುಭಾಷ್ ಪಾಟೀಲ್ ಜೈಲು ಪಾಲಾಗಿದ್ದ. ಆಗ ಆತ ಎಂಬಿಬಿಎಸ್ 2ನೇ ವರ್ಷದಲ್ಲಿ ಓದುತ್ತಿದ್ದ. ಜೈಲು ಪಾಲಾದ್ದರಿಂದ ಎಂಬಿಬಿಎಸ್ ಕೋರ್ಸ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ. 2016ರಲ್ಲಿ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರಬಂದ ಸುಭಾಷ್ ಪಾಟೀಲ್, 14 ವರ್ಷದ ಹಿಂದೆ ಅರ್ಧಕ್ಕೆ ನಿಲ್ಲಿಸಿದ್ದ ಎಂಬಿಬಿಎಸ್ ಕೋರ್ಸ್ಗೆ ಸೇರ್ಪಡೆಯಾಗಿದ್ದಾರೆ.
ಇಂದು ಸಂಜೆ ಪದವಿ ಪಡೆಯಲಿರುವ ಸುಭಾಷ್:
ಕಲಬುರಗಿ ನಗರದಲ್ಲಿರುವ MRMC ಮೆಡಿಕಲ್ ಕಾಲೇಜಿಗೆ ಸೇರಿದ ಸುಭಾಷ್, 3 ವರ್ಷ ನಿರಂತರವಾಗಿ ಅಧ್ಯಯನ ಮಾಡಿ ಇದೀಗ ಎಂಬಿಬಿಎಸ್ ಕೋರ್ಸ್ ಕಂಪ್ಲೀಟ್ ಮಾಡಿದ್ದಾರೆ. 2019ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ, 1 ವರ್ಷ ಇಂಟರ್ನ್‌ಶಿಪ್ ಸಹ ಪೂರ್ಣಗೊಳಿಸಿದ್ದಾರೆ. ಕೋರ್ಸ್ ಕಂಪ್ಲೀಟ್ ಆದ ಕಾರಣ ಇಂದು ಸಂಜೆ ಕಾಲೇಜಿನಲ್ಲಿ ಪದವಿ ಪಡೆಯಲಿದ್ದಾರೆ.
ಡಾ.ಸುಭಾಷ್ ಪಾಟೀಲ್, ಮುಂದೆ ತನ್ನದೆ ಆದ ಕ್ಲಿನಿಕ್ ಪ್ರಾರಂಭಿಸಿ, ಕೈದಿಗಳ ಕುಟುಂಬದವರಿಗೆ ಹಾಗೂ ಯೋಧರ ಕುಟುಂಬದವರಿಗೆ ಉಚಿತವಾಗಿ ಆರೋಗ್ಯ ಸೇವೆಯನ್ನು ನೀಡುವ ಮಹದಾಸೆ ಹೊಂದಿದ್ದಾರೆ.